ಬೆಳ್ತಂಗಡಿ : ವಾಣಿ ಕಾಲೇಜು ಆವರಣದಲ್ಲಿ ದಿನಾಂಕ 17-12-2023ರಂದು ನಡೆಯಲಿರುವ ತಾಲೂಕಿನ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ. ಎ.ಕೃಷ್ಣಪ್ಪ ಪೂಜಾರಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ವಿಶ್ರಾಂತ ಪ್ರಾಚಾರ್ಯ ಎ. ಕೃಷ್ಣಪ್ಪ ಪೂಜಾರಿ ಕಡಬ ತಾಲೂಕಿನ ಆಲಂಕಾರು ಗ್ರಾಮದ ಎಂ. ತಿಮ್ಮಪ್ಪ ಪೂಜಾರಿ ಮತ್ತು ಮುತ್ತಕ್ಕೆ ಅವರ ಮಗನಾಗಿ ದಿನಾಂಕ 15-11-1947ರಂದು ಜನಿಸಿದರು. ಅವರು ಹಿರಿಯರ ಆಶಯದಂತೆ ಶಿಕ್ಷಕರಾಗಿ ಸೇವೆ ಸಲ್ಲಿಸಿ ದೀರ್ಘಾವಧಿ ದುಡಿಮೆಯಲ್ಲಿ ಅಪಾರ ಶಿಷ್ಯ ವರ್ಗವನ್ನು ಪಡೆದಿದ್ದಾರೆ. ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಹಾಗೂ ಬಿಇಡಿ ಪದವಿ ಗಳಿಸಿರುವ ಇವರು, 1996ರಿಂದ 2006ರ ವರೆಗೆ ಬೇರೆ ಬೇರೆ ಸರಕಾಲ ಪ್ರಾಥಮಿಕ ಶಾಲೆಗಳಲ್ಲಿ, ಸರಕಾರಿ ಪ್ರೌಢಶಾಲೆಗಳಲ್ಲಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ನಂತರ ಬೆಳ್ತಂಗಡಿ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ 13 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಕಾಲೇಜಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಒಟ್ಟು 53 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅಪಾರ ಅನುಭವ ಹೊಂದಿದ್ದಾರೆ. ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಗುರುತಿಸಿ ಬೇರೆ ಬೇರೆ ಸಂಘ ಸಂಸ್ಥೆಗಳು ಪ್ರಶಸ್ತಿ, ಸನ್ಮಾನ, ಪುರಸ್ಕಾರ ಮಾಡಿ ಗೌರವಿಸಿದೆ. ಬೆಳ್ತಂಗಡಿ ಮಾತ್ರವಲ್ಲದೆ ಬೇರೆ ತಾಲೂಕುಗಳಲ್ಲೂ ವಿವಿಧ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು.