ಮಂಗಳೂರು : ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ವಿಶುಕುಮಾರ್ ದತ್ತಿನಿಧಿ ಸಮಿತಿ ಮಂಗಳೂರು ಸಹಯೋಗದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ – ವಿಶುಕುಮಾರ್ ಸಾಹಿತ್ಯೋತ್ಸವ ಮತ್ತು 20ನೇ ವರ್ಷದ ‘ವಿಶುಕುಮಾರ್ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 26-11-2023ರಂದು ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಸಕ ಡಿ. ವೇದವ್ಯಾಸ ಕಾಮತ್ “ಹಿರಿಯರ ಕೊಡುಗೆಗಳು ಯುವಕರಿಗೆ ಪ್ರೇರಣೆಯಾಗಬೇಕು. ಈ ನಿಟ್ಟಿನಲ್ಲಿ ಯುವವಾಹಿನಿ ಘಟಕ ವರ್ಷವಿಡೀ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಇತಿಹಾಸವನ್ನು ತಿಳಿಸುವ ಕೆಲಸ ಮಾಡುತ್ತಿದೆ. ವಿಶುಕುಮಾರ್ ಅವರು ತಮ್ಮನ್ನು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಸಾಹಿತ್ಯದ ಜತೆ ಗೀತೆ ಹಾಡುತ್ತಿದ್ದರು. ಹಾರ್ಮೋನಿಯಂ ನುಡಿಸುತ್ತಿದ್ದರು. ನಾಟಕದ ಪಾತ್ರ ಮಾಡುತ್ತಿದ್ದರು. ನಿರ್ದೇಶಕರಾಗಿದ್ದರು. ಹಲವು ಪ್ರತಿಭೆಗಳನ್ನು ಹೊಂದಿದ ಅವರ ಸಾಧನೆ ಅಪಾರ” ಎಂದರು.
ಕಾರ್ಯಕ್ರಮವನ್ನು ಕೆಸ್ಯಾಟ್ ಬೆಂಗಳೂರಿನ ಉಪ ನಿರ್ದೇಶಕ ಉಲ್ಲಾಸ್ ರಂಗಯ್ಯ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾಜೇಶ್ ಬಿ. ಅವರು ಅಧ್ಯಕ್ಷತೆ ವಹಿಸಿದ್ದರು. ‘ವಿಶು ಕುಮಾರ್ ಸಾಹಿತ್ಯ ಪುರಸ್ಕಾರ’ವನ್ನು ಅಡ್ಯಾರು ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕಿ ಅಕ್ಷಯಾ ಆರ್.ಶೆಟ್ಟಿ, ‘ಪತ್ರಿಕೋದ್ಯಮ ಪುರಸ್ಕಾರ’ವನ್ನು ಪತ್ರಕರ್ತ ಭರತ್ ರಾಜ್ ಸನಿಲ್ ಮತ್ತು ‘ನಾಟಕ ಪುರಸ್ಕಾರ’ವನ್ನು ನಾಟಕ ಕಲಾವಿದ ರಕ್ಷಿತ್ ಗಾಣಿಗ ಇವರುಗಳು ಸ್ವೀಕರಿಸಿದರು. ‘ಸಂಘಟನಾ ಪುರಸ್ಕಾರ’ವನ್ನು ಬಂಟ್ವಾಳದ ತುಡಾರ್ ಸೇವಾ ಟ್ರಸ್ಟಿಗೆ ನೀಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಲಯನ್ ಪ್ರಾಂತ್ಯ-2 ಪ್ರಾಂತ್ಯಾಧ್ಯಕ್ಷ ಜಯಪ್ರಕಾಶ್, ಉದ್ಯಮಿ ಯೋಗೀಶ್ ಕರ್ಕೇರ, ಪ್ರಮುಖರಾದ ವಸಂತ್ ಸುವರ್ಣ, ಕುಸುಮಾಕರ ಕುಂಪಲ, ಭಾಸ್ಕರ್ ಕೋಟ್ಯಾನ್ ಕೂಳೂರು, ಯಶೋಧ, ಮೋಹಿನಿ, ಪ್ರತಾಪ್ ಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮಾಧ್ಯಮ ಶಾಲಾ ಮಕ್ಕಳ ಜಾನಪದ ನೃತ್ಯ ಸ್ಪರ್ಧೆ, ಕನ್ನಡ ಮಾಧ್ಯಮ ಶಾಲಾ ಶಿಕ್ಷಕರ ಜಾನಪದ ಗೀತೆ ಸ್ಪರ್ಧೆ, ಯುವವಾಹಿನಿ ಅಂತರ್ ಘಟಕ ಸ್ತಬ್ಧಚಿತ್ರ ಸ್ಪರ್ಧೆಗಳು ನಡೆದವು. ಇದೇ ಸಂದರ್ಭದಲ್ಲಿ ಸುಪ್ರಿತಾ ಚರಣ್ ಪಾಲಪ್ಪೆ ಅವರಿಗೆ ‘ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ದಿ| ಡಾ. ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ನೀಡಲಾದ 20ನೇ ವರ್ಷದ ‘ವಿಶುಕುಮಾರ್ ಪ್ರಶಸ್ತಿ’ಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಪರವಾಗಿ ಹಿರಿಯ ನಿರ್ಮಾಪಕ, ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಪುನೀತ್ ಅವರ ಸೋದರ ಮಾವ ಚಿನ್ನೇಗೌಡ ಇವರು ಸ್ವೀಕರಿಸಿದರು. “ಸಂಸ್ಕಾರ, ಸಂಸ್ಕೃತಿ ಎಂಬುವುದು ಪುನೀತ್ ರಾಜ್ ಕುಮಾರ್ ಅವರ ರಕ್ತದಲ್ಲಿ ಬೆಸೆದುಕೊಂಡಿತ್ತು. ಅಸಾಮಾನ್ಯ ಕಲಾವಿದರಾಗಿದ್ದ ಪುನೀತ್ ಕನ್ನಡಿಗರ ಹೃದಯ ಗೆದ್ದಿದ್ದರು. ಅಪ್ಪು ಅವರಿಗೆ ಯಾರಿಗೂ ಸಿಗದ ಯಶಸ್ಸು ಸಿಕ್ಕಿದ್ದು, ಅಂತಹ ವ್ಯಕ್ತಿಗೆ ಮರಣೋತ್ತರವಾಗಿ ‘ವಿಶುಕುಮಾರ್ ಪ್ರಶಸ್ತಿ’ ನೀಡಿರುವುದು ಪ್ರಸ್ತುತ” ಎಂದು ಹೇಳಿದರು.
ಚಲನಚಿತ್ರ ನಿರ್ದೇಶಕ ಸಿ.ಪಿ. ಶೇಷಾದ್ರಿ ಮಾತನಾಡಿ, ‘ವಿಶುಕುಮಾರ್ ಪ್ರಶಸ್ತಿ’ ಜನ ನೀಡುವ ಪ್ರಶಸ್ತಿಯಾಗಿದ್ದು, ಇದಕ್ಕೆ ವಿಶೇಷ ಮಹತ್ವವಿದೆ. ಪಾರದರ್ಶಕತೆ ಉಳಿಸಿಕೊಂಡ ಈ ಪ್ರಶಸ್ತಿಗೆ ಸೂಕ್ತ ವ್ಯಕ್ತಿಯ ಆಯ್ಕೆಯಾಗಿದೆ. ದಿ| ಪುನೀತ್ ರಾಜ್ ಕುಮಾರ್ ಅವರು ಚಲನಚಿತ್ರದ ಮೂಲಕ ಜನರ ಮನಗೆದ್ದು, ಅಲ್ಪಾವಧಿಯಲ್ಲಿ ಶ್ರೇಷ್ಠ ಸಾಧನೆಗೈದಿದ್ದಾರೆ” ಎಂದು ತಿಳಿಸಿದರು.
ಚಲನಚಿತ್ರ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲಬೈಲು, ಹಿರಿಯ ಪತ್ರಕರ್ತ ಗಿರೀಶ್ ರಾವ್ ಹತ್ವಾರ್, ವಿಶುಕುಮಾರ್ ಅವರ ಪತ್ನಿ ಹೈಕೋರ್ಟ್ ನ್ಯಾಯವಾದಿ ವಿಜಯಲಕ್ಷ್ಮೀ ವಿಶುಕುಮಾರ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾಜೇಶ್ ಪಿ., ಪ್ರಮುಖರಾದ ಮೋಹಿನಿ, ಕುಸುಮಾಕರ್ ಕುಂಪಲ, ಶಂಕರ್ ಸುವರ್ಣ, ನರೇಶ್ ಕುಮಾರ್ ಸಸಿಹಿತ್ಲು, ಭಾಸ್ಕರ್ ಕೊಟ್ಯಾನ್ ಕೂಳೂರು, ಮಹೇಶ್ ಕುಮಾರ್, ರಮೇಶ್ ಕಲ್ಮಾಡಿ, ರತ್ನಾವತಿ ಜೆ. ಬೈಕಾಡಿ, ಸಂಜಿತ್ ಉಪಸ್ಥಿತರಿದ್ದರು.
ಯುವವಾಹಿನಿ ಕೇಂದ್ರ ಸಮಿತಿ ಕಲೆ ಮತ್ತು ಸಾಹಿತ್ಯ ನಿರ್ದೇಶಕ ಭಾಸ್ಕರ್ ಕೋಟ್ಯಾನ್ ಸಸಿಹಿತ್ಲು ಸ್ವಾಗತಿಸಿ, ರಶ್ಮಿ ಸನಿಲ್ ಮತ್ತು ಶರತ್ ಅಡ್ವೆ ಅವರು ನಿರೂಪಿಸಿದರು. ಸಂಜೆ 6ರಿಂದ ‘ಬಿತ್ತಲ್ದ ಉಳ್ಳಾಲ್ದಿ ಅಪ್ಪೆ ಭಗವತೀ’ ತುಳು ಪೌರಾಣಿಕ ನಾಟಕ ಪ್ರದರ್ಶನಗೊಂಡಿತು