ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ರಾಜ್ಯ ಮಟ್ಟದ ವಿವಿಧ ಜಿಲ್ಲೆಗಳ ಕವಿ, ಕವಯತ್ರಿಯವರ ಕವನ ಸಂಗ್ರಹದ ‘ಕಾವ್ಯ ಕುಂಚ’ ಭಾಗ ಮೂರು ಮತ್ತು ಕಲಾಕುಂಚ ಅಭಿಮಾನಿಗಳ ಲೇಖನಗಳ ಸಂಗ್ರಹದ ಕಿರುಹೊತ್ತಿಗೆ ‘ಕುಂಚ ಕೈಪಿಡಿ’ಗಳ ಲೋಕಾರ್ಪಣಾ ಕಾರ್ಯಕ್ರಮವು ದಿನಾಂಕ 26-11-2023 ರಂದು ನಡೆಯಿತು.
ದಾವಣಗೆರೆಯ ಪ್ರವಾಸಿ ಮಂದಿರದ ರಸ್ತೆಯಲ್ಲಿರುವ ರೋಟರಿ ಬಾಲ ಭವನದ ಮೊದಲನೇ ಮಹಡಿಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪುಸ್ತಕಗಳ ಲೋಕಾರ್ಪಣೆಗೊಳಿಸಿ ಮಾತನಾಡಿದ ನಾಡಿನ ಖ್ಯಾತ ಹಿರಿಯ ಸಾಹಿತಿ ಕವಯತ್ರಿ ಹಾಗೂ ರಂಗಕರ್ಮಿಯಾದ ಧಾರವಾಡದ ಡಾ. ಹೇಮಾ ಪಟ್ಟಣಶೆಟ್ಟಿ “ನವ, ಯುವ ಸಾಹಿತಿಗಳು, ಕವಿಗಳು, ಕವಯಿತ್ರಿಯರು ಕವನ ರಚಿಸಿ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡುವುದಕ್ಕೇ ಸೀಮಿತವಾಗದೆ. ಅಕ್ಷರಜ್ಞಾನದೊಂದಿಗೆ ಅಂತರಾಳದಿಂದ ಅರಿವು ಮೂಡಿಸಿ ಆಗ ಕವನ, ಕಾವ್ಯ ರಚನೆಗಳಿಗೆ ಪರಿಪೂರ್ಣತೆ ಬರುತ್ತದೆ. ನಾಲ್ಕು ಗೋಡೆಯ ಮಧ್ಯೆ ಅಡಿಗೆಮನೆಗೆ ಸೀಮಿತವಾದ ಮಹಿಳೆಯರನ್ನು ಹೊರತಂದು ಅವರಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಮುಕ್ತವಾದ ಸೂಕ್ತವಾದ ವೇದಿಕೆ ಕಲ್ಪಿಸುತ್ತಿರುವ ಕಲಾಕುಂಚದ ಮೂರುವರೆ ದಶಕಗಳ ಸಾಧನೆ ಮತ್ತು ಸಂಘಟನೆ ಶ್ಲಾಘನೀಯ. ಕವನಗಳು ಕೇವಲ ಪ್ರಾಸಬದ್ಧವಾಗಿರದೇ ಒಳ್ಳೊಳ್ಳೆಯ ಅರ್ಥಗರ್ಭಿತವಾದ ಸಂದೇಶಗಳ ಜತೆಯಲ್ಲಿ ಸಾಹಿತ್ಯಿಕವಾಗಿದ್ದರೆ ಪರಿವರ್ತನೆಗಳಿಗೆ ಪೂರಕ.” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಸಾಹಿತಿ ಹಾಗೂ ಕವಯತ್ರಿಯಾದ ದಾವಣಗೆರೆಯ ಎ.ಸಿ.ಶಶಿಕಲಾ ಶಂಕರಮೂರ್ತಿಯವರು ಮಾತನಾಡಿ “ಇಂತಹ ಸಾಂಸ್ಕೃತಿಕ, ಸಾಹಿತ್ಯ ಚಟುವಟಿಕೆಗಳಿಂದ ಅನೇಕರ ಖಿನ್ನತೆಯ ಮನಸ್ಸುಗಳು ಪುಳಕಿತಗೊಳ್ಳುತ್ತದೆ. ನಿರಂತರ ಹೊಸ ಹೊಸ ಪರಿಕಲ್ಪನೆಯೊಂದಿಗೆ ಕ್ರಿಯಾಶೀಲವಾಗಿರುವ ‘ಕಲಾಕುಂಚ’ ಸಂಸ್ಥೆ ಇತರ ಸಂಘಟನೆಗಳಿಗೆ ಮಾದರಿ. ಪ್ರಾಥಮಿಕ ಶಿಕ್ಷಣಕ್ಕೆ ಸೀಮಿತವಾದ ಈ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರ ಶೈಕ್ಷಣಿಕ, ಸಾಹಿತಿಕ ಕಾಳಜಿಯ ಕಾಯಕ ಮೆಚ್ಚುವಂತದ್ದೇ.” ಎಂದರು. ಕವನ ಸಂಕಲನ ಲೋಕಾರ್ಪಣೆ ಮೊದಲು ವಿವಿಧ ಜಿಲ್ಲೆಗಳಿಂದ ಆಗಮಿಸಿದ ಯುವ ಕವಿ ಮತ್ತು ಕವಯಿತ್ರಿಯರಿಂದ ರಾಜ್ಯ ಮಟ್ಟದ ಕವಿಗೋಷ್ಠಿ ಅರ್ಥಪೂರ್ಣವಾಗಿ ನಡೆಯಿತು.
ಕಲಾಕುಂಚ ಮಹಿಳಾ ವಿಭಾಗದ ಗೌರವ ಅಧ್ಯಕ್ಷರಾದ ಶ್ರೀಮತಿ ಪರ್ವೀನ್ ಅಮಿರ್‌ಜಾನ್ ಮಾತನಾಡಿ “ಆರಂಭ ಶೂರತ್ವದ ಅನೇಕ ಸಂಘಟನೆಗಳು ಒಂದೆರಡು ವರ್ಷಗಳಲ್ಲಿ ಸ್ಥಗಿತವಾಗುತ್ತಿರುವುದು ಸಹಜ. ಆದರೆ ಈ ಸಂಘಟನೆ ಕಳೆದ ಮೂರುವರೆ ದಶಕಗಳ ನಿರಂತರ ಸಾಂಸ್ಕೃತಿಕ ಸೇವೆ ಅದು ದೇವರ ಪೂಜೆ ಎಂದರು.” ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ ಹಾಗೂ ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಲಾಕುಂಚ ಸಂಸ್ಥೆಯ ಸಂಸ್ಥಾಪಕರು ಹಾಗೂ ಎರಡೂ ಕೃತಿಗಳ ಪ್ರಧಾನ ಸಂಪಾದಕರಾದ ಸಾಲಿಗ್ರಾಮ ಗಣೇಶ್ ಶೆಣೈ ಮಾತನಾಡಿ “ಪ್ರಸ್ತುತ ದಿನಮಾನಗಳಲ್ಲಿ ಕೆಲವು ಮಕ್ಕಳು, ಪೋಷಕರು, ಶಿಕ್ಷಕ-ಶಿಕ್ಷಕಿಯರ ಸಾಮಾನ್ಯ ಜ್ಞಾನದ ಕೊರತೆಯಿಂದ ಅವರ ಜೀವನಕ್ಕೆ ಧಕ್ಕೆ ಉಂಟಾಗುತ್ತಿರುವುದು ವಿಷಾದದ ಸಂಗತಿ. ಆಧುನಿಕವಾದ ಹೊಸ ಹೊಸ ತಂತ್ರಜ್ಞಾನದ ಭರಾಟೆಯಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ ಮರೆಯಾಗುತ್ತಿರುವುದು ಸರ್ವೆಸಾಮಾನ್ಯವಾಗಿದೆ. ಸಾಹಿತ್ಯಾಸಕ್ತರು ತಮ್ಮ ತಮ್ಮ ಅಂತರಾಳದ ಭಾವನಾತ್ಮಕ ಕಾಳಜಿಯನ್ನು ಸಾಹಿತ್ಯ ರೂಪಕ್ಕಿಳಿಸಿದಾಗ ಕವನ, ಬರಹಗಳು ಅರ್ಥಪೂರ್ಣವಾಗುತ್ತದೆ.“ ಎಂದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮರು ನಾಮಕರಣವಾದ ಐವತ್ತು ವರ್ಷಗಳ ಈ ಸಂಭ್ರಮದಲ್ಲಿ ಕೆಲವು ಸಾಧಕರಿಗೆ “ಕರ್ನಾಟಕ ಸುವರ್ಣ ಸಿರಿ” ರಾಜ್ಯ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಯುವ ಗಾಯಕ ಸುಜಯ್ ವಿನೋದ್ ದೇವರಾಜ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಸಂಕಲನದ ಸಹ ಸಂಪಾದಕರಾದ ಶ್ರೀಮತಿ ಸಾವಿತ್ರಿ ಜಗದೀಶ್ ಸ್ವಾಗತಿಸಿ, ಶ್ರೀಮತಿ ರೂಪಾ ಮಂಜುನಾಥ್ ನಿರೂಪಿಸಿ, ಶ್ರೀಮತಿ ಅನ್ನಪೂರ್ಣ ಪಾಟೀಲ್ ಪ್ರಾಸ್ತಾವನೆಮಾಡಿ ಕಾರ್ಯಕ್ರಮದ ಕುರಿತು ವಿವರಿಸಿದರು. ಸಾಹಿತಿ ಶ್ರೀಮತಿ ಶೈಲಾ ವಿನೋದ್ ದೇವರಾಜ್ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಕವಿಗೋಷ್ಠಿಯಲ್ಲಿ ಕವನ ವಾಚಕರ ಪಟ್ಟಿಯನ್ನು ಓದಿದ ಕವಯತ್ರಿ ಶ್ರೀಮತಿ ಪುಷ್ಪಾ ಮಂಜುನಾಥ್ ಕೊನೆಯಲ್ಲಿ ವಂದಿಸಿದರು.