ಕಾರ್ಕಳ : ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಇವುಗಳ ಸಹಯೋಗದೊಂದಿಗೆ ನಡೆಯುವ ‘ಅರಿವು ತಿಳಿವು’ ತಿಂಗಳ ಉಪನ್ಯಾಸ ಕಾರ್ಯಕ್ರಮವು ದಿನಾಂಕ 25-11-2023 ರಂದು ಕಾರ್ಕಳ ಸರಕಾರಿ.ಪ.ಪೂ.ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ‘ಅಕ್ಕಮಹಾದೇವಿಯ ವಚನಗಳು : ಒಂದು ಪ್ರವೇಶ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಸಹಪ್ರಾಧ್ಯಾಪಕಿಯಾದ ಡಾ.ಜ್ಯೋತಿ ರೈ “ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಪತಿ ಕೌಶಿಕನನ್ನು ಮತ್ತು ಸಕಲ ಸೌಭಾಗ್ಯಗಳನ್ನು ತಿರಸ್ಕರಿಸಿ ಏಕಾಂಗಿಯಾಗಿ ಆಧ್ಯಾತ್ಮದ ಹಾದಿಯಲ್ಲಿ ನಡೆದ ಅಕ್ಕಮಹಾದೇವಿಯ ದಿಟ್ಟತನ ಎಲ್ಲರಿಗೂ ಪ್ರೇರಣಾದಾಯಕವಾಗಿದೆ. ಅಲ್ಲಮಪ್ರಭುಗಳು ಹೇಳುವಂತೆ ಶಿವಶಕ್ತಿಯ ಸ್ತ್ರೀ ರೂಪವೇ ಆಗಿದ್ದ ಅಕ್ಕಮಹಾದೇವಿಯನ್ನು ಅನುಭವ ಮಂಟಪದಲ್ಲಿ ಪರೀಕ್ಷೆಗೆ ಒಡ್ಡಿ ಆಕೆಯ ವ್ಯಕ್ತಿತ್ವ, ಅಸ್ತಿತ್ವವನ್ನು ಅಲ್ಲಮಪ್ರಭುಗಳು ಜಗತ್ತಿಗೆ ಪರಿಚಯಿಸಿದರು. ಲೌಕಿಕ ಪುರುಷನನ್ನು ತಿರಸ್ಕರಿಸಿ ಅಲೌಕಿಕ ಪುರುಷ ಚೆನ್ನಮಲ್ಲಿಕಾರ್ಜುನನೇ ತನ್ನ ಪತಿಯೆಂದು ಭಾವಿಸಿ ಅರಿಷಡ್ವೈರಿಗಳನ್ನೆಲ್ಲ ತೊರೆದು ಮಾನಸಿಕವಾಗಿಯೂ ಬೆತ್ತಲಾಗಿ ಶ್ರೇಷ್ಠ ವಚನಗಳನ್ನೂ ನೀಡಿದ ಆಕೆಯಲ್ಲಿ ದೈಹಿಕ ಭಾವವನ್ನು ಮೀರಿದ ಅಕ್ಕಮಹಾದೇವಿಯನ್ನು ಕಾಣಬಹುದಾಗಿದೆ. ಅಕ್ಕನ ವಚನಗಳಲ್ಲಿ ಮುಗ್ದತೆಯಿದೆ, ಸತಿಪತಿ ಭಾವವಿದೆ, ಸ್ವಾಭಿಮಾನದ ಕೆಚ್ಚಿದೆ, ಪ್ರತಿಭಟನೆಯ ಸ್ವರವೂ ಇದೆ ಎಂಬುದಾಗಿ ಸೋದಾಹರಣವಾಗಿ ವಿವರಿಸಿದರು.
ಅತಿಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಅ.ಭಾ.ಸಾ.ಪ.ದ ತಾಲೂಕು ಘಟಕದ ಗೌರವಾಧ್ಯಕ್ಷರಾದ ನಿತ್ಯಾನಂದ ಪೈ ಮತ್ತು ಉಪಾಧ್ಯಕ್ಷರಾದ ಏರ್‌ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೀಣಾ ರಾಜೇಶ್ ಅತಿಥಿಗಳನ್ನು ಪರಿಚಯಿಸಿ, ಸುಧಾಕರ ಶ್ಯಾನುಭಾಗ್ ಪ್ರಾರ್ಥಿಸಿ, ಸದಾನಂದ ನಾರಾವಿ ಸ್ವಾಗತಿಸಿ, ಗಂಗಾಧರ ಪಣಿಯೂರು ಕಾರ್ಯಕ್ರಮ ನಿರೂಪಿಸಿ, ಸುಲೋಚನಾ ಬಿ.ವಿ. ವಂದಿಸಿದರು.