ಉಡುಪಿ : ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಹಕ್ಲಾಡಿಯ ಸರಕಾರಿ ಪ್ರೌಢಶಾಲೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ವಿಸ್ತರಣಾ ಉಪನ್ಯಾಸ ಮಾಲಿಕೆಯ 5ನೇ ಉಪನ್ಯಾಸ ಕಾರ್ಯಕ್ರಮವು ಬಾರ್ಕೂರಿನ ನೇಶನಲ್ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 16-11-2023ರಂದು ನಡೆಯಿತು.
ಕಾರ್ಯಕ್ರಮದಲ್ಲಿ ‘ಕನಕದಾಸರ ಕೃತಿಗಳಲ್ಲಿ ಭಕ್ತಿಭಾವದ ಪರಿಕಲ್ಪನೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಪೂರ್ಣಪ್ರಜ್ಞ ಸಂಧ್ಯಾಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಪ್ರಜ್ಞಾಮಾರ್ಪಳ್ಳಿ ಮಾತನಾಡಿ “ಕನಕದಾಸರು ಸಾರಸ್ವತ ಲೋಕ ಕಂಡ ಅಪೂರ್ವ ಕವಿ, ಚಿಂತಕ, ದಾರ್ಶನಿಕ ಎಲ್ಲವೂ. ಅವರು ದಾಸಪರಂಪರೆಯಲ್ಲಿ ಭಿನ್ನಸ್ಥಾನವನ್ನು ಪಡೆಯಲು ಪ್ರಮುಖ ಕಾರಣ ಅವರು ಕೇವಲ ಕೀರ್ತನಕಾರರಾಗಿರದೆ ನಾಲ್ಕು ಅಮೂಲ್ಯ ಕೃತಿಗಳನ್ನು ನೀಡಿರುವುದು. ಕಾವ್ಯಪ್ರಭೇದಗಳ ಅರಿವು ಕನಕದಾಸರಿಗಿತ್ತು. ಭಕ್ತಿಯ ಪರಾಕಾಷ್ಠೆಯೇ ಕನಕದಾಸರ ಕೀರ್ತನೆಗಳ ಹೆಗ್ಗುರುತೆನ್ನಬಹುದು. ‘ಮೋಹನ ತರಂಗಿಣಿ’ ಕನಕದಾಸರ ವಿಭಿನ್ನ ಕೃತಿ. ಅದು ವಿಜಯನಗರದ ಸಮಕಾಲೀನ ಚಿಂತನೆಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ. ಭಾವಾಭಿವ್ಯಕ್ತಿಯ ದೃಷ್ಟಿಯಿಂದ ನೋಡಿದಾಗ ಕನಕದಾಸರಿಗೆ ವಿಜಯನಗರದ ವೈಭವದ ಬಗೆಗಿದ್ದ ಅಭಿಮಾನ ಮತ್ತು ಗೌರವದ ವಿವರಣೆಯು ವರ್ಣನಾತೀತವೆನಿಸುತ್ತದೆ. ಭಾಮಿನಿ ಷಟ್ಪದಿಯಲ್ಲಿರುವ ‘ಹರಿಭಕ್ತಿಸಾರ’ ನಮಗೆ ಹಿತವೆನಿಸುವುದು ಅದರೊಳಗೆ ಅಡಗಿರುವ ಭಕ್ತನ ಶರಣಾಗತಿಯ ಕಾರಣದಿಂದ, ‘ರಾಮಧಾನ್ಯಚರಿತೆ’ಯಲ್ಲಿ ಕನಕದಾಸರ ಸಾಮಾಜಿಕ ಪ್ರಜ್ಞೆ ಅವರ ನಿಜವಾದ ನಿಲುವುಗಳು, ಅವರ ಬದುಕು ಮತ್ತು ಸಮಾಜದ ಸಂಬಂಧ ಹೇಗಿತ್ತು ಎಂಬುದರ ಪೂರ್ಣ ವಿವರವಿದೆ. ಕನಕದಾಸರ ಕೀರ್ತನೆಗಳನ್ನು ಗಮನಿಸಿದಾಗ ಕನಕದಾಸರ ನಿಜವಾದ ಹರಿಭಕ್ತಿ ಅನಾವರಣಗೊಳ್ಳುತ್ತದೆ. ಕನಕದಾಸರು ಬದುಕಿದಂತೆ ಬರೆದವರು, ಬರೆದಂತೆ ಬದುಕಿದವರು. ಅವರ ಕೃತಿಗಳಲ್ಲಿ ಬರುವ ಭಾವವು ನಮ್ಮನ್ನು ಭಕ್ತಿ ಸಾಗರದೊಳಗೆ ಮುಳುಗೇಳುವಂತೆ ಮಾಡಬಲ್ಲುದು” ಎಂದರು.
ನೇಶನಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೊಟ್ರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನಕದಾಸ ಅಧ್ಯಯನ ಸಂಶೋಧನಾ ಪೀಠದ ಆಡಳಿತಾಧಿಕಾರಿ ಡಾ. ಜಗದೀಶ್ ಬಿ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತಾಡಿದರು. ಬಾರಕೂರು ವಿದ್ಯಾಧಿವರ್ಧಿನಿ ಸಂಘದ ಆಡಳಿತಾಧಿಕಾರಿ ಪ್ರೊ. ಆರ್ಟಿಬೋಲ್ಡ್ ಪುರ್ಟಾಡೋ ಉಪಸ್ಥಿತರಿದ್ದರು. ಶ್ರೀ ಮಾರುತಿ ಕೆ.ಪಿ. ಕನಕದಾಸರ ಕುರಿತು ರಚಿಸಿದ ಕವನವನ್ನು ವಾಚಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಜ್ಯೋತಿ ಕಾರ್ಯಕ್ರಮ ನಿರ್ವಹಿಸಿ, ಸಹ ಶಿಕ್ಷಕಿ ಶ್ರೀಮತಿ ಹೇಮಾವತಿ ಪಿ.ಎಸ್. ವಂದಿಸಿದರು.
Subscribe to Updates
Get the latest creative news from FooBar about art, design and business.