ಹಾನಗಲ್ಲ : 19ನೆಯ ಶತಮಾನದ ಕಾರಣಿಕ ಯುಗಪುರುಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ, ಪ್ರೊ. ಜಿ.ಹೆಚ್. ಹನ್ನೆರಡುಮಠ ವಿರಚಿತ ‘ಯುಗಪುರುಷ’ ನಾಟಕವನ್ನು ಶ್ರೀ ಸಿದ್ದೇಶ್ವರ ಸಾಂಸ್ಕೃತಿಕ ಕಲಾ ಸಂಘ (ರಿ) ಹುಲಗಿನಕಟ್ಟಿ ರಂಗತಂಡವು ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳ ಸೇವಾ ಸಮಿತಿ ನವದೆಹಲಿ ಇವರ ಸಹಯೋಗದಲ್ಲಿ ದಿನಾಂಕ 25-11-2023ರಂದು ಶ್ರೀ ಶಿವಯೋಗ ಮಂದಿರದ ಬಯಲು ಮಂಟಪದಲ್ಲಿ ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗದಗ ಜಿಲ್ಲೆಯ ಶಿರಹಟ್ಟಿಯ ಹಿಂದು-ಮುಸ್ಲಿಂ ಭಾವೈಕ್ಯತಾ ಮಹಾಸಂಸ್ಥಾನದ ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಫಕೀರ್ ದಿಂಗಾಲೇಶ್ವರ ಮಹಾಸ್ವಾಮಿಗಳು ನಾಟಕ ಮಾಧ್ಯಮದ ಪ್ರಾಮುಖ್ಯತೆಯನ್ನು ಮತ್ತು ಅದರ ಪರಿಣಾಮಗಳ ಕುರಿತು ಔಚಿತ್ಯಪೂರ್ಣವಾಗಿ ತಿಳಿಸಿ ನಾಟಕಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಿವಯೋಗ ಮಂದಿರದ ವಟು ಸಾಧಕರು, ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಜಗದ್ಗುರುಗಳು, ಹಾವೇರಿ, ಅಥಣಿ, ಅಕ್ಕಿಆಲೂರು ಮತ್ತು ಹಲವಾರು ಮಠಗಳ ಶ್ರೀಗಳು, ಸುತ್ತಮುತ್ತ ಗ್ರಾಮಗಳ ಭಕ್ತರು ಮತ್ತು ದೂರದ ಊರುಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು.
ಪ್ರಾಸ್ತಾವಿಕ ಭಾಷಣ ಮಾಡಿದ ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೀಕಂಠ ಚೌಕಿಮಠ ಅವರು ನಾಟಕದ ಸಹಭಾಗಿತ್ವದ ಹಿನ್ನಲೆ ಮತ್ತು ಸಂಕಲ್ಪಗಳನ್ನು ಪ್ರಸ್ತಾಪಿಸಿದರು. ಎರಡು ತಾಸುಗಳ ಅವಧಿಯ, ನೆರಳು ಬೆಳಕಿನ ತಂತ್ರಜ್ಞಾನ ಆಧಾರಿತ ನಾಟಕ ‘ಯುಗಪುರುಷ’ ಅತ್ಯಂತ ಆಕರ್ಷಕವಾಗಿ ಮೂಡಿ ಬಂದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮ ಉಪಸಂಹಾರದಲ್ಲಿ ನಾಟಕವನ್ನು ಪ್ರಸ್ತುತ ಪಡಿಸಿದ ಕಲಘಟಗಿ ತಾಲೂಕಿನ ಹುಲಗಿನಕಟ್ಟಿಯ ಶ್ರೀ ಸಿದ್ದೇಶ್ವರ ಸಾಂಸ್ಕೃತಿಕ ಕಲಾ ಸಂಘ (ರಿ) ದ ಅಧ್ಯಕ್ಷರು ಮತ್ತು ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಪಾತ್ರ ವಹಿಸಿದ ಶ್ರೀ ಬಸವರಾಜ ದೊಡಮನಿಯವರು ತಮ್ಮ ತಂಡದ ಎಲ್ಲ ಕಲಾವಿದರ ಪರಿಚಯ ಮಾಡಿದರು. ನಾಟಕವನ್ನು ವಿಮರ್ಶೆ ಮಾಡಿದ ಗುಳೇದಗುಡ್ಡದ ಶ್ರೀ ವಪ್ಪತ್ತೇಶ್ವರ ಮಠದ ಶ್ರೀಗಳು ನಾಟಕದ ಮುಂದಿನ ಪ್ರಯೋಗಗಳಿಗೆ ಶುಭಹಾರೈಸಿದರು.
ಈ ನಾಟಕಕ್ಕೆ ನಿರ್ದೇಶನ ಮತ್ತು ಬೆಳಕು : ಉಮೇಶ ಪಾಟೀಲ, ಸಂಗೀತ : ಬಸವರಾಜ ಮಲ್ಲನ ಗೌಡ್ರ, ನಿರ್ಮಾಣ : ಶ್ರೀಮತಿ ಮಹಾದೇವಿ ಬಸವರಾಜ ಹಾಗೂ ರಂಗದಲ್ಲಿ : ಬಸವರಾಜ ದೊಡಮನಿ, ಜಗದೀಶ ಮೂಕಿ, ರಾಜಶೇಖರ ಬಿ.ಕೆ., ಸಚಿನ ದೊಡಮನಿ, ಪ್ರಕಾಶಗೌಡ ಪಾಟೀಲ, ಸೋಮು ಹಡಪದ, ರಾಮಪ್ಪ ಹುಗ್ಗೆಣ್ಣವರ, ಪ್ರೀತಮ್ ಬಸನಕೊಪ್ಪ, ಸಿದ್ದಾರ್ಥ್ ಕಟ್ಟಿಮನಿ, ರಾಮಪ್ಪ ಹೊರಗಿನಮನಿ, ಶಾಂತಲಾ ಸಂಶಿಮಠ, ಮರಿಯಮ್ಮ ಮತ್ತು ವಾಣಿಶ್ರೀ ಅಭಿನಯಿಸಿದ್ದರು.