ಪುತ್ತೂರು : ಪುತ್ತೂರಿನ ಅರ್ಯಾಪು ಅಕ್ಷಯ ಕಾಲೇಜಿನಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು ಯುವ, ಅದ್ವಯ ಕನ್ನಡ ಸಂಘ ಮತ್ತು ರೋಟರಾಕ್ಟ್ ಕ್ಲಬ್ ಅಕ್ಷಯ ಕಾಲೇಜ್ ಸಹಯೋಗದೊಂದಿಗೆ ಹಿರಿಯ ಸಾಹಿತಿಗಳಾದ ಶ್ರೀ ಜಯಪ್ರಕಾಶ್ ಪುತ್ತೂರು ಅವರು ದಿನಾಂಕ 24-11-2023ರಂದು ‘ಅನುವಾದ ಸಾಹಿತ್ಯ’ ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ನೀಡಿದರು. ಭಾರತದ ಮಾಜಿ ರಾಷ್ಟ್ರಪತಿಗಳಾದ ಡಾ ಅಬ್ದುಲ್ ಕಲಾಮ್ ಅವರು ರಚಿಸಿದ “ವಿಂಗ್ಸ್ ಆಫ್ ಫೈರ್” ಕೃತಿಯನ್ನು “ಅಗ್ನಿಯ ರೆಕ್ಕೆಗಳು” ಎಂಬ ಹೆಸರಿನಿಂದ ಕನ್ನಡಕ್ಕೆ ಅನುವಾದ ಮಾಡಿದ ರೋಚಕ ಅನುಭವಗಳನ್ನು ಹಾಗೂ ಅನುವಾದ ಮಾಡುವ ಸಂದರ್ಭದಲ್ಲಿ ಅನೇಕ ವಿಚಾರಗಳಲ್ಲಿ ಎಚ್ಚರಿಕೆಯನ್ನು ವಹಿಸಬೇಕಾದ ಬಗ್ಗೆ ಮತ್ತು ಯಾವೆಲ್ಲ ನಿಯಮಗಳನ್ನು ಪಾಲಿಸಬೇಕೆಂಬ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಶ್ರೀ ಜಯಪ್ರಕಾಶ್ ಪುತ್ತೂರು ಅವರನ್ನು ಸಾಹಿತ್ಯ ಪರಿಷತ್ ವತಿಯಿಂದ ಗೌರವಿಸಲಾಯಿತು.
ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ವರದರಾಜ ಚಂದ್ರಗಿರಿ ಅವರು 2015ರಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಸಮಯದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಿದ್ದು, ಈ ದತ್ತಿ ನಿಧಿಯ ಪ್ರಕಾರ ಪ್ರತಿ ವರ್ಷವೂ ಪುತ್ತೂರು ತಾಲೂಕಿನ ಯಾವುದಾದರೊಂದು ಸ್ಥಳದಲ್ಲಿ ಸಾಹಿತ್ಯ ಸಂಬಂಧಿತ, ಸಮಕಾಲಿನ ಸಾಹಿತ್ಯ ವಿಷಯದಲ್ಲಿ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿರುತ್ತದೆ.
ಅಕ್ಷಯ ಕಾಲೇಜಿನ ಆಡಳಿತ ನಿರ್ದೇಶಕರಾದ ಶ್ರೀ ಜಯಂತ ನಡುಬೈಲು ಅವರು ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಶುಭ ಹಾರೈಸಿದರು. ಪುತ್ತೂರು ಉಮೇಶ್ ನಾಯಕ್ ಅವರು ಸಭಾಧ್ಯಕ್ಷತೆಯನ್ನು ವಹಿಸಿ ಸಂದರ್ಭೋಚೀತವಾಗಿ ಮಾತಾಡಿದರು. ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷರಾದ ಪಶುಪತಿ ಶರ್ಮ ಅವರು ಸ್ವಾಗತಿಸಿ, ಅದ್ವಯ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಹರಿಶ್ಚಂದ್ರ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು. ರೋಟರಾಕ್ಟ್ ಕ್ಲಬ್ಬಿನ ಸಭಾಪತಿ ಶ್ರೀ ರತ್ನಾಕರ ರೈ, ಸಂಯೋಜಕರಾದ ಶ್ರೀ ರಾಕೇಶ್ ಕೆ., ಅಧ್ಯಕ್ಷರಾದ ಶ್ರೀ ಸತ್ಯನಾರಾಯಣ ನಾಯಕ್, ಅಕ್ಷಯ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಪತ್ ಕೆ. ಪಕ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಉಜ್ವಲ್ ಜಿ. ನಾಯಕ್ ಧನ್ಯವಾದ ಸಮರ್ಪಿಸಿ, ಕೀರ್ತನ್ ಜಿ. ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.