ಶಿವಮೊಗ್ಗ : ಕರ್ನಾಟಕ ಸಂಘದಿಂದ ‘ಪುಸ್ತಕ ಬಹುಮಾನ ಪ್ರದಾನ ಕಾರ್ಯಕ್ರಮ 2022’ನ್ನು ದಿನಾಂಕ 26-11-2023ರಂದು ಶಿವಮೊಗ್ಗ ಕರ್ನಾಟಕ ಸಂಘ ಭವನದಲ್ಲಿ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪುಸ್ತಕ ಬಹುಮಾನ ವಿತರಿಸಿದ ಲೇಖಕ ಡಾ.ಗಜಾನನ ಶರ್ಮ ಮಾತನಾಡಿ “ಮೂಲ ಮೂರ್ತಿಯಾಗಬೇಕಿದ್ದ ಕನ್ನಡವನ್ನು ನಾವೆಲ್ಲರೂ ಸೇರಿಕೊಂಡು ಉತ್ಸವ ಮೂರ್ತಿಯನ್ನಾಗಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕನ್ನಡವನ್ನು ಮೂಲ ಮೂರ್ತಿಯಾಗಿ ಮಾಡುವುದಲ್ಲದೆ, ದಿನವೂ ಪೂಜೆಗೆ ಒಳಪಡಬೇಕಿದೆ. ನಮ್ಮೆಲ್ಲರ ಅಂತರಂಗದಲ್ಲಿಯೂ ಕನ್ನಡ ಅಡಗಿದೆ. ಆದರೆ ಅದನ್ನು ಹೊರಗೆ ತಂದು ಪೂಜಿಸುವಲ್ಲಿ ಎಡವುತ್ತಿದ್ದೇವೆ. ಮಕ್ಕಳಲ್ಲಿ ಜನರೇಷನ್ ಗ್ಯಾಪ್ ಹೆಚ್ಚಾಗಿರುವ ಕಾರಣ ಕನ್ನಡ ಭಾಷೆ ಬಳಕೆ ಕಡಿಮೆ ಆಗುತ್ತಿದೆ. ನಮ್ಮ ನಡತೆ, ಸಂಸ್ಕೃತಿ, ಭಾಷೆ ಯಾವುದೂ ಅವರಿಗೆ ಪೂರ್ಣಮಯವಾಗಿಲ್ಲ. ಇಂದಿನ ಜನರೇಷನ್ ತನ್ಮಯತೆ ಕಳೆದುಕೊಂಡಿದ್ದು ಅದನ್ನು ಉಳಿಸಿಕೊಂಡರೆ ಕನ್ನಡದ ಮೇಲಿನ ಪ್ರೀತಿ ಮತ್ತು ರಾಷ್ಟ್ರ ಪ್ರೀತಿ ಹೆಚ್ಚಾಗುತ್ತದೆ. ನಾವೆಲ್ಲರೂ ಇತಿಹಾಸ, ಸೇವಾಕರ್ತರನ್ನೂ ಮರೆತಿದ್ದೇವೆ. ಅದರ ಪರಿಣಾಮವೇ ಅಜ್ಜ ಮತ್ತು ಮೊಮ್ಮೊಕ್ಕಳು ಬೆಸೆಯುತ್ತಿಲ್ಲ. ಇದು ದುರ್ದೈವದ ಸಂಗತಿ. ಅವರನ್ನು ಬೆಸೆಯುವ ಕೆಲಸವನ್ನು ಮೊದಲು ಮಾಡಬೇಕಿದೆ. ಇತಿಹಾಸವನ್ನು ಇಂದಿನ ಪೀಳಿಗೆ ಮುಂದೆ ಮೆಲುಕು ಹಾಕಬೇಕಿದೆ ಎಂದು ಹೇಳಿದರು. ಪುಸ್ತಕ ಬಹುಮಾನ ಸ್ವೀಕರಿಸಿ ಮಾತನಾಡಿದ ಸಂತೋಷ್ ಕುಮಾರ್ ಮೆಹಂದಳೆ, ಲೇಖಕನಿಗೆ ಬೆನ್ನು ತಟ್ಟದಿದ್ದರೂ ಪರವಾಗಿಲ್ಲ. ಸಂವಾದಕ್ಕೆ ಎಳೆಯಬೇಕು ಎಂದು ಆಶಿಸಿದರು.
ಪಿ.ಲಂಕೇಶ್ ಹೆಸರಿನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಫಾತಿಮಾ ರಲಿಯಾ, ಸಮಾಜದಲ್ಲಿ ಬಹುತ್ವಕ್ಕೆ ಆದ್ಯತೆ ನೀಡಿದ್ದ ಲಂಕೇಶ್ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ಖುಷಿ ಆಗುತ್ತಿದೆ ಎಂದರು. ತರಂಗಾ ಕಿವುಡ ಮಕ್ಕಳ ಶಾಲಾ ವಿದ್ಯಾರ್ಥಿಗಳು ಮತ್ತು ಕಲಾವಿದ ಪ್ರವೀಣ್ ಕಮಟೇಕರ್ ಅವರ ಚಿತ್ರಕಲಾ ಪ್ರದರ್ಶನ ಗಮನ ಸೆಳೆಯಿತು. ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವ ಕಾರ್ಯದರ್ಶಿ ಪ್ರೊ. ಎಂ.ಆಶಾಲತಾ ಉಪಸ್ಥಿತರಿದ್ದರು. ಅದೇ ದಿನ ಮಧ್ಯಾಹ್ನ 3 ಗಂಟೆಗೆ ಬಹುಮಾನಿತ ಸಾಹಿತಿಗಳೊಂದಿಗೆ ಓದುಗರ ಸಂವಾದವನ್ನು ಏರ್ಪಡಿಸಲಾಗಿತ್ತು.
2022ನೇ ಸಾಲಿನ ಪುಸ್ತಕ ಬಹುಮಾನ ವಿಜೇತರು : ಎಚ್.ಬಿ.ಇಂದ್ರಕುಮಾರ್ ಅವರ ‘ಎತ್ತರ’ ಕಾದಂಬರಿಗೆ ‘ಕುವೆಂಪು ಪ್ರಶಸ್ತಿ’, ಮಾಧವ ಚಿಪ್ಪಳಿ ಅವರ ‘ಯೂರಿಪೀಡಿಸ್’ ಮೂರು ಅನುವಾದಿತ ನಾಟಕಗಳಿಗೆ ಪೊ. ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿ, ಡಾ.ಮುಮ್ರಾಜ್ ಬೇಗಂ ಅವರ ‘ಲೋಕವೇ ತಾತನ ಬಳಿಗೆ’ ಕೃತಿಗೆ ಎಂ.ಕೆ.ಇಂದಿರಾ ಪ್ರಶಸ್ತಿ, ಫಾತಿಮಾ ರಲಿಯಾ ಅವರ ‘ಕಡಲು ನೋಡಲು ಹೋದವಳು’ ಕೃತಿಗೆ ಪಿ.ಲಂಕೇಶ್ ಪ್ರಶಸ್ತಿ, ಡಾ.ನಾ.ಮೊಗಸಾಲೆ ಅವರ ‘ಬೇಳೆಯ ಗೂಟದಲ್ಲೊಂದು ಚಿಟ್ಟೆ’ ಕವನ ಸಂಕಲನಕ್ಕೆ ಡಾ. ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ, ಶಶಿಧರ್ ಹಾಲಾಡಿ ಅವರ ‘ಉರುಳಿದ ಬೆಟ್ಟದ ಮರಳಿ ನೆನಪು’ ಅಂಕಣ ಬರಹಕ್ಕೆ ಡಾ. ಹಾ.ಮಾ.ನಾಯಕ ಪ್ರಶಸ್ತಿ, ಚಿದಾನಂದ ಸಾಲಿ ಅವರ ‘ಹೊಗೆಯ ಹೊಳೆಯಿದು ತಿಳಿಯದು’ ಸಣ್ಣ ಕಥಾ ಸಂಕಲನಕ್ಕೆ ಡಾ. ಯು.ಆರ್.ಅನಂತಮೂರ್ತಿ ಪ್ರಶಸ್ತಿ, ಡಾ. ಬಸವರಾಜ ಸಬರದ ಅವರ ಜೋಡಿ ನಾಟಕಕ್ಕೆ ಡಾ. ಕೆ.ವಿ.ಸುಬ್ಬಣ್ಣ ಪ್ರಶಸ್ತಿ, ಸಂತೋಷ್ ಕುಮಾರ್ ಮೆಹೆಂದಳೆ ಅವರ ‘ಅಲೆಮಾರಿಯ ಡೈರಿ’ ಪ್ರವಾಸ ಸಾಹಿತ್ಯಕ್ಕೆ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಪ್ರಶಸ್ತಿ, ಡಾ. ಸುಕನ್ಯಾ ಸೂಗನಹಳ್ಳಿ ಅವರ ‘ಬೆಳೆ ರೋಗಗಳು, ಕೀಟಗಳು ಮತ್ತು ಅವುಗಳ ನಿರ್ವಹಣೆ’ ಕುರಿತ ವಿಜ್ಞಾನ ಸಾಹಿತ್ಯಕ್ಕೆ ಹಸೂಡಿ ವೆಂಕಟಶಾಸ್ತ್ರಿ ಪ್ರಶಸ್ತಿ, ಕೊಳ್ಳೆಗಾಲ ಶರ್ಮಾ ಅವರ ‘ಜಾಣ ಪ್ರಜ್ಞೆ’ ಮಕ್ಕಳ ಸಾಹಿತ್ಯಕ್ಕೆ ‘ಡಾ. ನಾ.ಡಿಸೋಜಾ ಪ್ರಶಸ್ತಿ’, ಡಾ.ಪಿ.ಎಂ.ಸೂರ್ಯ ನಾರಾಯಣ ಶರ್ಮ ಅವರ ‘ಪಾರ್ಶ್ವವಾಯುವಿನಿಂದ ಚೈತನ್ಯದೆಡೆಗೆ’ ವೈದ್ಯ ಸಾಹಿತ್ಯಕ್ಕೆ ‘ಡಾ. ಎಚ್.ಡಿ.ಚಂದ್ರಪ್ಪಗೌಡ ಪ್ರಶಸ್ತಿ’ ನೀಡಿ ಗೌರವಿಸಲಾಯಿತು, ಪ್ರಶಸ್ತಿಯು ತಲಾ ನಗದು ರೂ.10,000/- ಮತ್ತು ಫಲಕವನ್ನು ಒಳಗೊಂಡಿತ್ತು.