ಧಾರವಾಡ : ಧಾರವಾಡದ ಸಾಹಿತ್ಯ ಗಂಗಾ ಸಮಿತಿಯು ಆಯೋಜಿಸಿದ ರಾಜ್ಯ ಮಟ್ಟದ ವಿದ್ಯಾರ್ಥಿ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು ಕುಮಾರಿ ನಂದಿನಿ ಯು. (ಶಿವಮೊಗ್ಗ) ಪ್ರಥಮ, ಚಿನ್ಮಯ್ ರಮೇಶ್ ಹೆಗಡೆ (ಬೆಂಗಳೂರು) ದ್ವಿತೀಯ, ಯಜ್ಞುಶಾ ಕನ್ನೆಪ್ಪಾಡಿ (ಕಾಸರಗೋಡು) ತೃತೀಯ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಇವರ ಕವಿತೆಗಳು ನೈಸರ್ಗಿಕ ವಿದ್ಯಮಾನ ಮತ್ತು ಜನ ಸಾಮಾನ್ಯರ ಬದುಕಿಗೆ ಸ್ಪಂದಿಸುತ್ತದೆ. ಚಿಂತನೆಗೆ ಹಚ್ಚುವ, ವೈಚಾರಿಕ ನೆಲೆಗಟ್ಟಿನಲ್ಲಿ ಸಮಕಾಲೀನ ಸ್ಥಿತಿಗತಿಗಳಿಗೆ ಕನ್ನಡಿಯನ್ನು ಹಿಡಿಯುವ ರಚನೆಗಳು ವಾಸ್ತವ ಸತ್ಯಗಳನ್ನು ಒಳಗೊಂಡಿವೆ ಎಂದು ತೀರ್ಪುಗಾರರಾಗಿ ಸಹಕರಿಸಿದ ಕುಮಾರಿ ಭವ್ಯ ಭಟ್ ಮಡಿಕೇರಿ ಅಭಿಪ್ರಾಯಪಟ್ಟಿದ್ದಾರೆ. ಸಾಹಿತ್ಯ ಗಂಗಾ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾಷ್ ಪಟ್ಟಾಜೆ ಬಹುಮಾನ ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಒಟ್ಟು 82 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು.