ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದ.ಕ. ವತಿಯಿಂದ ಡಾ.ಎಚ್.ಆರ್. ವಿಶ್ವಾಸ ಅವರ ಸಂಗಮ ಕಾದಂಬರಿಯ ಬಿಡುಗಡೆ ಮತ್ತು ಅಭಾಸಾಪ ಮಂಗಳೂರು ತಾಲೂಕು ಸಮಿತಿ ನೂತನ ಪದಾಧಿಕಾರಿಗಳ ಘೋಷಣೆಯು ದಿನಾಂಕ 27-11-2023ರಂದು ಶಾರದಾ ವಿದ್ಯಾಲಯದ ಧ್ಯಾನ ಮಂದಿರ ಸಭಾಂಗಣದಲ್ಲಿ ನಡೆಯಿತು.
ಕಾದಂಬರಿ ಬಿಡುಗಡೆಗೊಳಿಸಿದ ಕರ್ಣಾಟಕ ಬ್ಯಾಂಕ್ನ ಮಾಜಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಎಂ.ಎಸ್. ಮಹಾಬಲೇಶ್ವರ ಮಾತನಾಡಿ, ಸಾಹಿತ್ಯ ಓದುಗರಿಗೆ ಕುತೂಹಲದ ಜೊತೆಗೆ ಆನಂದ ನೀಡಬೇಕು. ಸಾಮಾಜಿಕ ಸಮಸ್ಯೆಗಳನ್ನು ತೆರೆದಿಟ್ಟು ಅದಕ್ಕೆ ಪರಿಹಾರ ಸೂಚಿಸಬೇಕು. ಅಂತಹ ಧನಾತ್ಮಕ ಅಂಶಗಳು ಸಂಗಮ ಕಾದಂಬರಿಯಲ್ಲಿ ಅಡಕವಾಗಿದೆ ಎಂದರು.
ಶಕ್ತಿನಗರದ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಸುಮನಾ ನಂದೋಡಿ ಕೃತಿ ಪರಿಚಯ ನೀಡಿದರು. ಅಭಾಸಾಪ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಕಾದಂಬರಿಕಾರ ಡಾ. ಎಚ್.ಆರ್. ವಿಶ್ವಾಸ ಉಪಸ್ಥಿತರಿದ್ದರು. ಶೈಲೇಶ್ ಕುಲಾಲ್ ನೂತನ ಪದಾಧಿಕಾರಿಗಳ ಪಟ್ಟಿ ಘೋಷಿಸಿದರು. ಮೀನಾಕ್ಷಿ ರಾಮಚಂದ್ರ ಸ್ವಾಗತಿಸಿ, ಗೀತಾ ಲಕ್ಷ್ಮೀಶ ವಂದಿಸಿ, ಅಭಾಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಿಮಳ ರಾವ್ ನಿರೂಪಿಸಿದರು.