ಕಾಸರಗೋಡು : ತೆಂಕುತಿಟ್ಟಿನ ಪ್ರಸಿದ್ಧ ಹಿರಿಯ ಮದ್ದಳೆಗಾರ ಪದ್ಯಾಣ ಶಂಕರನಾರಾಯಣ ಭಟ್ ಅವರು ಪ್ರಸಕ್ತ ಸಾಲಿನ ಪ್ರತಿಷ್ಠಿತ ಕೀರಿಕ್ಕಾಡು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಯಕ್ಷಗಾನದ ಹಿಮ್ಮೇಳದಲ್ಲಿ ಅವರ ಸಾಧನೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದಿನಾಂಕ 23-12-2023ರಂದು ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಕೀರಿಕ್ಕಾಡು ಸಂಸ್ಮರಣೆಯೊಂದಿಗೆ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿರುವ ಕಲೋತ್ಸವದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಪದ್ಯಾಣ ಶಂಕರನಾರಾಯಣ ಭಟ್ ಇವರು ರಾಮಕ್ಷಷ್ಣ ಭಟ್ ಮತ್ತು ಪಾರ್ವತಿ ಅಮ್ಮ ದಂಪತಿಗಳ ಸುಪುತ್ರ. ಯಕ್ಷಗಾನ ಗುರುಗಳಾದ ಬಾಲಪಾಠ ಅಣ್ಣ ತಿರುಮಲೇಶ್ವರ ಭಟ್ಟ ಮತ್ತು ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಇವರಲ್ಲಿ ಯಕ್ಷಗಾನದ ಹಿಮ್ಮೇಳ ಅಭ್ಯಸಿಸಿದರು. 1973ರಿಂದ ಕುಂಡಾವು ಮೇಳ, ಕರ್ನಾಟಕ ಮೇಳ, ಸುರತ್ಕಲ್ಲು ಮೇಳ, ಸುಂಕದಕಟ್ಟೆ ಮೇಳ, ಕಟೀಲು ಮೇಳ, ಕದ್ರಿ ಮೇಳ, ಕುಂಟಾರು ಮೇಳ, ಎಡನೀರು ಮೇಳ, ಹೊಸನಗರ ಮೇಳಗಳಲ್ಲಿ ಸುಮಾರು 50 ವರ್ಷದ ಅನುಭವ ಹೊಂದಿದ್ದಾರೆ. ಶ್ರೀಯುತರಿಗೆ ಕರ್ನಾಟಕ ಎಕಾಡಮಿ ಪ್ರಶಸ್ತಿ, ಅಭಿನಂದನಾ ಗ್ರಂಥ ನಾದಶಂಕರ ಮತ್ತು ಇತರ ಹಲವು ಪ್ರಶಸ್ತಿಗಳು ಲಭಿಸಿವೆ.