ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕದ ವತಿಯಿಂದ ಹತ್ತೊಂಬತ್ತನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟಿನ ಸಹಯೋಗದಲ್ಲಿ ಹಿರಿಯ ಸಾಹಿತಿ ಶ್ರೀ ಸೂಡ ಸದಾನಂದ ಶೆಣೈ ಸರ್ವಾಧ್ಯಕ್ಷತೆಯಲ್ಲಿ ದಿನಾಂಕ 03-12-2023ರಂದು ಗಣಿತನಗರ ಕಾರ್ಕಳ ಜ್ಞಾನಸುಧಾ ಸಭಾಂಗಣದಲ್ಲಿ ಜರಗಲಿದೆ.
ದಿನಾಂಕ 03-12-2023ರಂದು ಬೆಳಗ್ಗೆ 8 ಗಂಟೆಗೆ ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಇವರಿಂದ ಪರಿಷತ್ತಿನ ಧ್ವಜಾರೋಹಣದೊಂದಿಗೆ ಆರಂಭವಾಗುವುದು. ಕುಕ್ಕುಂದೂರು ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಉಷಾ ಕೆ., ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ದಿನೇಶ್ ಎಂ. ಕೊಡವೂರು, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ ಉಪಸ್ಥಿತರಿರುವರು.
ಬೆಳಿಗ್ಗೆ 8:30ಕ್ಕೆ ಸಮ್ಮೇಳನಾಧ್ಯಕ್ಷರ ಸ್ವಾಗತ ಹಾಗೂ ಭುವನೇಶ್ವರಿ ದೇವಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಹಿರಿಯ ಉದ್ಯಮಿ ಶ್ರೀ ಬೋಳ ಪ್ರಭಾಕರ್ ಕಾಮತ್ ಸಮ್ಮೇಳನ ಉದ್ಘಾಟಿಸಿ, ಮಾಜಿ ಸಚಿವ, ಶಾಸಕ ವಿ. ಸುನೀಲ್ ಕುಮಾರ್ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡುವರು. ಡಾ. ಸುಧಾಕರ ಶೆಟ್ಟಿ ಅವರು ಅವನೀ ಉಪಾಧ್ಯ ಅವರು ಬರೆದಿರುವ ‘ರಾಮಾಯಣ ಸಿರಿ’ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಗಂಟೆ 11.30ಕ್ಕೆ ನಡೆಯುವ ಗೋಷ್ಠಿಯಲ್ಲಿ ಉಡುಪಿಯ ಯುವ ನ್ಯಾಯವಾದಿ ಕು. ಸಹನಾ ಕುಂದರ್ ಸೂಡ ‘ಬದುಕಿನ ಸಾಧನೆಗೆ ಸಾಹಿತ್ಯದ ಪ್ರೇರಣೆ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡುವರು. ನಂತರ ನಡೆಯುವ ‘ವಿದ್ಯಾರ್ಥಿ ಗೋಷ್ಠಿ’ಯಲ್ಲಿ ಕಾರ್ಕಳದ ಸಾಹಿತಿ ಶ್ರೀ ಗಂಗಾಧರ ಪಣಿಯೂರು ಇವರು ಸಮನ್ವಯಕಾರರಾಗಿದ್ದು, ವಿವಿಧ ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಲಿರುವರು. ಕನ್ನಡದಲ್ಲಿ ದಾಖಲೆಯ ಹತ್ತೊಂಬತ್ತು ಮಹಾಕಾವ್ಯಗಳನ್ನು ಬರೆದ ನಾಡಿನ ಹಿರಿಯ ಸಾಹಿತಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ಇವರಿಂದ ‘ವಚನಗಳಲ್ಲಿ ಜೀವನ ಮೌಲ್ಯಗಳು’ ಎಂಬ ವಿಷಯದಲ್ಲಿ ದಿಕ್ಸೂಚಿ ಉಪನ್ಯಾಸ ಮತ್ತು ಇದೇ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರಿಂದ ಡಾ. ಪ್ರದೀಪ್ ಕುಮಾರ್ ಹೆಬ್ರಿ ಅವರ 511ನೇ ಕೃತಿ ‘ಶರಣ ಶ್ರೇಷ್ಟರು’ ಭಾಗ-2 ಲೋಕಾರ್ಪಣೆಗೊಳ್ಳಲಿದೆ.
ಮಧ್ಯಾಹ್ನ 3:30 ಗಂಟೆಗೆ ನಡೆಯುವ ಸಮಾರೋಪದಲ್ಲಿ ನಿವೃತ್ತ ಕನ್ನಡ ಉಪನ್ಯಾಸಕ ಶ್ರೀ ಎಸ್. ರಾಮ್ ಭಟ್ ಸಮಾರೋಪ ಭಾಷಣ ಮಾಡುವರು. ಕಾರ್ಕಳ ತಾಲೂಕು ಕಸಾಪದ ಅಧ್ಯಕ್ಷರಾದ ಶ್ರೀ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅಧ್ಯಕ್ಷತೆಯಲ್ಲಿ ಮುನಿಯಾಲು ಗೋಧಾಮದ ಸಂಸ್ಥಾಪಕ ಡಾ. ರಾಮಕೃಷ್ಣ ಆಚಾರ್ ಇವರು ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಿರುವರು.