ಉಡುಪಿ : ತುಳು ಕೂಟ (ರಿ.) ಉಡುಪಿ ಇವರು ಕಾಲೇಜು ವಿದ್ಯಾರ್ಥಿಗಳಿಗೆ ಮೀಸಲಾಗಿರುವ “ತುಳು ಮಿನದನ” ಕಾರ್ಯಕ್ರಮವು ದಿನಾಂಕ 25-11-2023 ರಂದು ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನಲ್ಲಿ ನಡೆಯಿತು.
ಮಂಗಳೂರು ವಿಶ್ವವಿದ್ಯಾನಿಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವನ್ನು “ತುಳುನಾಡ ಭೂಮಿ ತುಡರ್” ಪರಿಕಲ್ಪನೆಯಲ್ಲಿ ನಾಡಿನ ಖ್ಯಾತ ವಿದ್ವಾಂಸರಾದ ಡಾ.ವೈ .ಎನ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ “ಯುವಜನತೆಗೆ ಸರಿಯಾದ ಮಾರ್ಗದರ್ಶನ ನೀಡಿದ್ದಲ್ಲಿ ಅವರು ನಾಡಿನ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. ಬಹು ಭಾಷೆ ಮತ್ತು ಮಾಧ್ಯಮಗಳ ಬಳಕೆ ಯುಕ್ತವಾದದ್ದು. ಆದರೆ ಮಾತೃಭಾಷೆಯನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ತುಳು ಭಾಷೆಯ ಸಿರಿವಂತ ಸಂಸ್ಕೃತಿಯನ್ನು ಭಾಷಾ ಸಮಗ್ರತೆಯನ್ನು ಕಿರಿಯರಿಗೆ ಪರಿಚಯ ಮಾಡಿಸುವ ಪ್ರಯತ್ನ ತುಳುಕೂಟದಿಂದ ನಡೆಯುತ್ತಿರುವುದು ಬಹು ಶ್ಲಾಘ್ಯ ಕಾರ್ಯ.” ಎಂದು ಅಭಿಪ್ರಾಯಪಟ್ಟರು.
ತುಳು ಲಿಪಿಯಲ್ಲಿ ಬರೆದು ತುಳು ಸಂಸ್ಕೃತಿಯ ರೀತಿಯಲ್ಲಿ ಸ್ವಾಗತ ಚಪ್ಪರ
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಖ್ಯಾತ ಸಹಕಾರಿ ತಜ್ಞ ಹಾಗೂ ತುಳುಕೂಟದ ಅಧ್ಯಕ್ಷ ಶ್ರೀ ಬಿ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ “ತುಳುವಿಗಾಗಿ ಅದರ ಭಾಷಾ ಸಂಸ್ಕೃತಿ ಬೆಳವಣಿಗೆಗೆ ತುಳುವರೆಲ್ಲರೂ ಪ್ರಯತ್ನಿಸಬೇಕಾಗಿದೆ.” ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಶಿರ್ವ ಇದರ ಅಧ್ಯಕ್ಷರಾದ ಶ್ರೀಮತಿ ಸವಿತಾ ರಾಜೇಶ್, ವಿದ್ಯಾವರ್ಧಕ ಸಂಘ ಶಿರ್ವ ಇದರ ಆಡಳಿತಾಧಿಕಾರಿ ಪ್ರೊಫೆಸರ್ ವೈ ಭಾಸ್ಕರ್ ಶೆಟ್ಟಿ, ತುಳುಕೂಟದ ಕಾರ್ಯದರ್ಶಿ ಶ್ರೀ ಗಂಗಾಧರ ಕಿದಿಯೂರು, ತುಳು ಅಧ್ಯಯನ ಪೀಠದ ಡಾಕ್ಟರ್ ಮಾಧವ ಎಂ. ಕೆ, ಎಂ. ಎಸ್. ಆರ್. ಎಸ್. ಕಾಲೇಜ್ ಶಿರ್ವದ ಪ್ರಾಂಶುಪಾಲರು ಶ್ರೀಮತಿ ನಯನ ಎಂ. ಪಕ್ಕಳ ಹಾಗೂ ಎನ್ ಎಸ್ ಎಸ್ ಸಮನ್ವಯಾಧಿಕಾರಿ ಶ್ರೀಮತಿ ಹೇಮಲತಾ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳು ಬಹು ಅರ್ಥಪೂರ್ಣವಾಗಿ ಮಾರ್ಗದರ್ಶನ ನೀಡಿ, “ತುಳುವಿಗೆ ಸಿಗಬೇಕಾದ ಅರ್ಹ ಗೌರವ ನಮ್ಮ ರಾಜ್ಯದಲ್ಲಿ ಮತ್ತು ದೇಶದಲ್ಲಿ ಸಿಗಬೇಕಾಗಿದೆ.” ಎಂದರು .
ದಿನಪೂರ್ತಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ತುಳು ಸಂಬಂಧಿತ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ತುಳುನಾಡಿನ ಆಹ್ವಾನಿತ ಒಂಬತ್ತು ಕಾಲೇಜಿನ ವಿದ್ಯಾರ್ಥಿಗಳಾದ ಯುವಕ, ಯುವತಿಯರು ಲವಲವಿಕೆಯಿಂದ ದಿನಪೂರ್ತಿ ಭಾಗವಹಿಸಿದರು.
ತುಳು ಕವಿಗೋಷ್ಠಿ
ತುಳು ಅಕಾಡೆಮಿಯ ನಿಕಟಪೂರ್ವ ಸದಸ್ಯೆ ಶ್ರೀಮತಿ ತಾರಾ ಆಚಾರ್ಯ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದು ಒಟ್ಟು 10 ವಿದ್ಯಾರ್ಥಿಗಳು ತಮ್ಮ ತುಳು ಕವಿತಾ ಪ್ರತಿಭೆಯನ್ನು ಹೊರ ಹೊಮ್ಮಿಸಿದರು. ಸ್ಪರ್ಧಾ ವಿಭಾಗಗಳಲ್ಲಿ ತುಳುವೆರೆ ತುತ್ತೈತ, ಸಟಕ್ಕ ಪಾತೆರ್ಲೆ, ಪೊಟ್ಟ ಬಾಷೆನ್ ಪಕ್ಕ ತೆರಿಲೆ, ಗುಂಪು ಪದ ,ಪ್ರಹಸನ, ಸಬಿ ಸವಾಲ್, ಚುಂಗುಡಿ ಕಬಿತೆ ಇತ್ಯಾದಿ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ಭಾಗವಹಿಸಿದ್ದರು. ವಿಜೇತರಿಗೆ ನಗದು ಬಹುಮಾನ ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗಿತ್ತು. ತುಳುಕೂಟದ ವತಿಯಿಂದ ನೀಡಲಾಗುವ ಶ್ರೀಮತಿ ಸುಮಾನ ಮಾಧವ ಶೆಟ್ಟಿ ಕುಕ್ಕೆಹಳ್ಳಿ ತುಳು ಮಿನದನ ಚಾಂಪಿಯನ್ಶಿಪ್ ಸಮಗ್ರ ಪ್ರಶಸ್ತಿಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಪಡೆಯಿತು.
ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡಬೇಕು ಮತ್ತು ಉಳಿಸಬೇಕು ಹಾಗೂ ಬೆಳೆಸಬೇಕು ಎಂಬ ಮಹತ್ತರ ಉದ್ದೇಶ ತುಳುಕೂಟ ಉಡುಪಿ (ರಿ) ಇವರದ್ದು. ಪ್ರತಿವರ್ಷ ನಡೆಯುವ ತುಳುಕೂಟದ ಕಾರ್ಯಕ್ರಮವನ್ನು ಸಂಚಾಲಕರಾದ ಡಾ. ಯಾದವ್ ಕರ್ಕೇರ ಇವರು 12 ವರ್ಷಗಳಿಂದ ವಿಭಿನ್ನ ರೀತಿಯಲ್ಲಿ ನಡೆಸುತ್ತಿದ್ದಾರೆ.
ತುಳು ದುಸ್ಥೈತ
ಆತಿಥೇಯ ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರು ಹಾಗೂ ಆಡಳಿತ ಮಂಡಳಿ ಈ ಕಾರ್ಯಕ್ರಮದಲ್ಲಿ ಪರಿಪೂರ್ಣವಾಗಿ ಕೈಜೋಡಿಸಿತ್ತು ಮತ್ತು ತಮ್ಮ ಸಂಸ್ಥೆಯ ಯುವ ಮನಸ್ಸುಗಳನ್ನು ಒಗ್ಗೂಡಿಸಿತ್ತು. ಕಾರ್ಯಕ್ರಮದ ಪೂರ್ವದಲ್ಲಿ ನಡೆಸಿದ ತುಳುನಾಡ ಶೈಲಿಯ ಕಾಲೇಜು ಅಲಂಕಾರ, ತುಳುನಾಡ ಪರಿಕರಗಳ ಪ್ರದರ್ಶನ, ತುಳುನಾಡ ಶೈಲಿಯಲ್ಲಿ ಸ್ವಾಗತ, ತುಳುನಾಡ ಶೈಲಿಯ ಉಡುಗೆ ತೊಡುಗೆಗಳು, ತುಳುನಾಡ ಭಾಷಾ ಸಂಸ್ಕೃತಿ ಬಿಂಬಿಸುವ ವೇದಿಕೆ, ತುಳುವಿನಲ್ಲಿ ಪ್ರಬುದ್ಧವಾಗಿ ಕಾರ್ಯಕ್ರಮ ನಿರೂಪಣೆ ಮತ್ತು ನಿರ್ವಹಣೆ ಮೆಚ್ಚುಗೆಗೆ ಪಾತ್ರವಾಗಿತ್ತು.
ಕಾಲೇಜಿನ ಪ್ರಾಂಶುಪಾಲರು ಶ್ರೀಮತಿ ನಯನ ಎಂ. ಮಕ್ಕಳ ನೇತೃತ್ವದಲ್ಲಿ ಸಮಾರೋಪ ಸಮಾರಂಭ ಬಹು ಉಲ್ಲಾಸದಿಂದ ನಡೆಯಿತು. ಶ್ರೀ ಗಂಗಾಧರ ಕಿದಿಯೂರು ಸ್ವಾಗತಿಸಿ, ವಿದ್ಯಾರ್ಥಿ ನಾಯಕರಾದ ಶ್ರೀ ದಿಶಾಂತ್ ಹಾಗೂ ಕುಮಾರಿ ಅನಿಷ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಹೇಮಲತಾ ಶೆಟ್ಟಿ ವಂದಿಸಿದರು.