ಕುಂದಾಪುರ: ಒಂದು ಬಣ್ಣಬಣ್ಣದ ವೇದಿಕೆಯ ಮೇಲೆ ತೆರೆದುಕೊಳ್ಳುವ ಪೌರಾಣಿಕ ಕಥನ, ಇನ್ನೊಂದು ಬದುಕಿನ ವಾಸ್ತವ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಭಾಗದ ಯಕ್ಷಗಾನದ ಕಲಾವಿದರಿಗೆ ಇದೇ ಬದುಕು. ತುಳುನಾಡಿನಲ್ಲಿ ‘ಪತ್ತನಾಜೆ’ (ಹಬ್ಬಗಳ ಋತುವಿನ ಕೊನೆಯದಿನ) ಬಂತೆಂದರೆ ಯಕ್ಷಗಾನ ಪ್ರದರ್ಶನಗಳಿಗೆ ತೆರೆಬೀಳುತ್ತದೆ. ಮುಂದೆ ಪ್ರದರ್ಶನಗಳು ಆರಂಭವಾಗುವುದು ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ತಿಂಗಳಲ್ಲಿ.
ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ತಿಂಗಳಲ್ಲಿ ಯಕ್ಷಗಾನ ಪ್ರದರ್ಶನ ಆರಂಭವಾದಾಗ ನನಗೆ ಪ್ರಥಮವಾಗಿ ನೆನಪು ಆಗುವುದು ಕುಂದಾಪುರದಲ್ಲಿ ನಡೆಯುವ ಗಜೇಂದ್ರ ಆಚಾರ್ ಕೋಣಿ ಸಂಘಟನೆಯಲ್ಲಿ ನಡೆಯುವ “ಯಕ್ಷ ರಾತ್ರಿ”. ಯಕ್ಷಗಾನ ಸಂಘಟನೆ ಅಂದ ಕೂಡಲೆ ಹಲವಾರು ಜನ ಮೊದಲ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಾರೆ. ಹಾಗೆ ಮೊದಲ ಸಾಲಿನಲ್ಲಿ ಗುರುತಿಸಬಹುದಾದ ಹೆಸರು “ಗಜೇಂದ್ರ ಆಚಾರ್ ಕೋಣಿ”. ಪ್ರತಿ ವರ್ಷ ಕುಂದಾಪುರದಲ್ಲಿ ಪೆರ್ಡೂರು ಮೇಳಕ್ಕೆ ಮೊದಲ ಅವಕಾಶ ಕಲ್ಪಿಸಿಕೊಟ್ಟು ಮೇಳದ ಹೊಸ ಪ್ರಸಂಗದ ಪ್ರದರ್ಶನ ಹಾಗೂ ತಿರುಗಾಟಕ್ಕೆ ಒಂದು ವೇದಿಕೆ ನಿರ್ಮಿಸಿಕೊಡುವ ಸಂಘಟಕ.
ಯಕ್ಷಗಾನದ ಜೊತೆಗೆ ಸಾಧಕರನ್ನು ಗುರುತಿಸಿ ಗೌರವಿಸುವುದು, ಸಂಕಷ್ಟದಲ್ಲಿ ಇರುವವರಿಗೆ ಸಹಾಯ, ಪ್ರತಿಭಾ ಪುರಸ್ಕಾರ ಹೀಗೆ ಯಕ್ಷಗಾನ ವೇದಿಕೆ ಮೂಲಕ ಸಾರ್ಥಕ ಕಾರ್ಯಕ್ರಮ ಮಾಡುತ್ತಾ ಬರುತ್ತಿದ್ದಾರೆ ಗಜೇಂದ್ರ ಆಚಾರ್.
2015 ಅಕ್ಟೋಬರ್ 15, 8ವರ್ಷಗಳ ಹಿಂದೆ ಈ ಯಕ್ಷರಾತ್ರಿ ಎನ್ನುವ ನಾಮಧೇಯದೊಂದಿಗೆ ಹುಟ್ಟಿಕೊಂಡ ಈ ಯಕ್ಷರಾತ್ರಿ ಇಂದು 9 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.
ಪ್ರಥಮ ವರ್ಷದಲ್ಲಿ ಕುಂದಾಪುರದ ಸಭಾಂಗಣವೊಂದರಲ್ಲಿ ಮಳೆಗಾಲದ ಯಕ್ಷಗಾನವಾಗಿ ಅತಿಥಿ ಕಲಾವಿದರಿಂದ ಯಕ್ಷಗಾನ ಹಾಗೂ ಜನ್ಸಾಲೆ ರಾಘವೇಂದ್ರ ಆಚಾರ್ಯರಿಗೆ ಹುಟ್ಟುಹಬ್ಬದ ವಿಶೇಷ ಗೌರವ ನೀಡುವುದರೊಂದಿಗೆ ಹೆಜ್ಜೆ ಇಟ್ಟು ನಂತರದ ವರ್ಷದಲ್ಲಿ
2016ರಲ್ಲಿ ಅತಿಥಿ ಕಲಾವಿದರ ಮಳೆಗಾಲದ ಯಕ್ಷಗಾನ, ಹಾಗೂ ಗಾನಲಹರಿ ಸುರೇಶ ಶೆಟ್ಟಿಯವರಿಗೆ ಗೌರವ, ಅಂಗವಿಕಲ ಯಕ್ಷಾಭಿಮಾನಿಗೆ ಸಹಾಯಹಸ್ತ, ಯಕ್ಷಛಾಯಾಗ್ರಾಹಕರಿಗೆ ಗೌರವ.
2017ರಲ್ಲಿ ಪ್ರಸಿದ್ಧ ಡೇರೆ ಮೇಳವಾದ ಪೆರ್ಡೂರು ಮೇಳದವರ ಯಕ್ಷಕಾಶಿಯ ಮೊಟ್ಟಮೊದಲ ಆಟ “ಅಹಂ ಬ್ರಹ್ಮಾಸ್ಮಿ” ಪ್ರಸಂಗ ಹಾಗೂ ಪವನ್ ಕಿರಣಕೆರೆಯವರಿಗೆ ಗೌರವ. ಜೊತೆಯಲ್ಲಿ ಮಹಾನ್ ಪೋಷಕ ಪುರಸ್ಕಾರವಾಗಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ಗೌರವ.
2018ರಲ್ಲಿ “ಶತಮಾನಂ ಭವತಿ” ಪ್ರಸಿದ್ಧ ಹೃದಯರೋಗ ತಜ್ಞ ಡಾ.ಪದ್ಮನಾಭ ಕಾಮತ್ ಇವರಿಗೆ ಸಾಧಕ ಪುರಸ್ಕಾರ (ಅನುಪಸ್ಥಿತಿಯಲ್ಲಿ), ಥಂಡಿಮನೆಯವರಿಗೆ ಗೌರವ.
2019ರಲ್ಲಿ “ಮಾನಸಗಂಗಾ” ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯರಿಗೆ ಸಾಧಕ ಪುರಸ್ಕಾರ, ಲೈಟಿಂಗ್ ಲೋಕೇಶರಿಗೆ ಗೌರವ.
2020ರಲ್ಲಿ ಕರೋನ ಕಾಲಘಟ್ಟದಲ್ಲಿ ಮೇಳಗಳು ಹೊರಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ಸರಕಾರದ ಅಧಿನಿಯಮಾವಳಿಗಳು ಆದರೂ ಛಲಬಿಡದೇ ಮೇಳದ ಯಜಮಾನರ ಸಹಕಾರದೊಂದಿಗೆ ಯಕ್ಷರಾತ್ರಿ ಆರನೇ ಹೆಜ್ಜೆ ಬಯಲಾಟವಾಗಿ ತನ್ನೂರಿನ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಅದ್ದೂರಿಯಾಗಿ “ಅಹಂ ಬ್ರಹ್ಮಾಸ್ಮಿ” ಪ್ರಸಂಗದ ಜೊತೆ ತನ್ನೂರಿನ ಪ್ರತಿಭಾವಂತ ವಿದ್ಯಾರ್ಥಿನಿ ಹಾಗೂ ಪ್ರತಿಭಾನ್ವಿತ ಯುವ ಚಂಡೆವಾದಕ ಪನ್ನಗ ಮಯ್ಯರಿಗೆ ಯಕ್ಷರಾತ್ರಿ ವಿದ್ಯಾರ್ಥಿ ವೇತನ ಹಾಗೂ ಗೌರವ ಪುರಸ್ಕಾರ. ಪ್ರಸಿದ್ದ ಕಲಾವಿದ ಕೆಕ್ಕಾರು ಆನಂದ ಭಟ್ಟರಿಗೆ ಗೌರವ ಪುರಸ್ಕಾರ.
2021ರಲ್ಲಿ “ಕೃಷ್ಣ ಕಾದಂಬಿನಿ” ಪ್ರಸಂಗದ ಜೊತೆಯಲ್ಲಿ ಅಂದು ರಾಜ್ಯೋತ್ಸವದ ಗರಿಹೊತ್ತ ಮೂವರು ಸಾಧಕರನ್ನು ಗೌರವಿಸಿದ್ದು ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ತೀರ್ಥಹಳ್ಳಿ ಗೋಪಾಲ ಆಚಾರ್ಯರು, ಮನು ಹಂದಾಡಿಯವರಿಗೆ ಸನ್ಮಾನಿಸುವ ಭಾಗ್ಯ.
2022ರಲ್ಲಿ ಕಳೆದ ವರ್ಷ “ಮಾನಸ ಗಂಗ” ಪ್ರಸಂಗ ಹಾಗೂ ರವಿ ಕಟಪಾಡಿಯವರಿಗೆ ಸಾಧಕ ಪುರಸ್ಕಾರ ( ಅನುಪಸ್ಥಿತಿಯಲ್ಲಿ). ತನ್ನೂರಿನ ಲೈನಮೆನ್ ನಿತ್ಯಾನಂದ ಇವರಿಗೆ ಸಾಧಕ ಪುರಸ್ಕಾರವನ್ನು ಕಳೆದ 8 ವರ್ಷಗಳಿಂದ ನೀಡುತ್ತಾ ಬಂದಿದ್ದಾರೆ.
ಈ ವರ್ಷ ಅದೆಷ್ಟೋ ಜೀವಗಳನ್ನು ಉಳಿಸಿ ತನ್ನ ಸ್ವಂತ ಖರ್ಚಿನಲ್ಲಿ ಆಂಬ್ಯುಲೆನ್ಸ್ ಸೇವೆ ಹಾಗೂ ಮುಳುಗು ತಜ್ನರಾಗಿರುವ ಮಲ್ಪೆಯ ಆಪತ್ಭಾಂದವ ಈಶ್ವರ ಮಲ್ಪೆ ಹಾಗೂ ಬೇರೆ ದಾರಿಯಲ್ಲಿ ಹಣಗಳಿಸುವ ತೃತೀಯ ಲಿಂಗಿಗಳ ಮದ್ಯೆ ಹೀಗೂ ಸಮಾಜದಲ್ಲಿ ಬದುಕು ತೋರಿಸಬಹುದೆಂದು ರಿಕ್ಷಾ ಓಡಿಸಿ ಸ್ವಾವಲಂಬಿ ಬದುಕು ನಡೆಸುವ ರಾಜ್ಯದ ಪ್ರಥಮ ತೃತೀಯ ಲಿಂಗಿ ಬ್ರಹ್ಮಾವರ ಚೇರ್ಕಾಡಿಯ ಕಾವೇರಿ ಮೇರಿ ಡಿಸೋಜ; ಮತ್ತು ಪ್ರಸಿದ್ಧ ಸ್ತ್ರೀ ವೇಷಧಾರಿ ಸುಧೀರ್ ಉಪ್ಪೂರು ಹಾಗೂ ಯಕ್ಷಗಾನ ರಂಗದಲ್ಲಿ ನಿಸ್ವಾರ್ಥ ಯಕ್ಷಸೇವೆ ಮಾಡುತ್ತಿರುವ ಯಕ್ಷಛಾಯಾಗ್ರಾಹಕ ಪ್ರವೀಣ್ ಪೆರ್ಡೂರು ಇವರನ್ನು ಗೌರವಿಸುವ ಮೂಲಕ ಈ ಬಾರಿ 2.12.2023ರಂದು ಮತ್ತೆ ಯಕ್ಷ ಕಾಶಿಯ ಯಕ್ಷ ರಾತ್ರಿ ಬರುತ್ತಿದೆ.
ಪ್ರತಿವರ್ಷದಂತೆ ಈ ಬಾರಿಯೂ ಗಜೇಂದ್ರ ಆಚಾರ್ಯ ಅವರ ಯಕ್ಷಗಾನ ಸಂಘಟನೆ ಗೆಲ್ಲಬೇಕು. ಇವರಿಗೆ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ ಹಾಗೂ ಇನ್ನೂ ಅನೇಕ ಯಕ್ಷಗಾನ ಸಂಘಟನೆ ಮಾಡುವ ಶಕ್ತಿ ನೀಡಿ ಸಕಲ ಭಾಗ್ಯಗಳನ್ನೂ ನೀಡಿ ಅನುಗ್ರಹಿಸಲಿ.
ದಿನಾಂಕ:- 2.12.2023
ಸ್ಥಳ:- ಯಕ್ಷ ಕಾಶಿ ಕುಂದಾಪುರ ನೆಹರು ಮೈದಾನದಲ್ಲಿ ಶನಿವಾರ ರಾತ್ರಿ 9:30 ರಿಂದ.
ಗಜೇಂದ್ರ ಆಚಾರ್ಯ ಕೋಣಿಯವರ ಯಕ್ಷಗಾನ ಹೌಸ್ ಫುಲ್ ಪ್ರದರ್ಶನ ಕಾಣಲಿ .
ಯಕ್ಷಗಾನ ವಿಶ್ವಗಾನ.
ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.