ಮಂಗಳೂರು : ಹಿಂದೂಸ್ಥಾನಿ ಸಂಗೀತದಲ್ಲಿ ಪ್ರತಿಯೊಂದು ರಾಗಕ್ಕೂ ತನ್ನದೇ ಆದ ಗಾಯನ ಸಮಯವಿದೆ. ಅದರಲ್ಲೂ ರಾತ್ರಿ, ತಡರಾತ್ರಿಯ ರಾಗಗಳು ಬಹಳ ರಂಗು ಹುಟ್ಟಿಸುವಂತವು. ಆ ರಾಗಗಳ ನೈಜ ಪರಿಣಾಮವನ್ನು ಕಾಣಬೇಕಾದರೆ ಅವುಗಳನ್ನು ಅವುಗಳ ಗಾಯನ ಸಮಯದಲ್ಲಿ ಕೇಳಬೇಕು. ರಾತ್ರಿಯ ಆ ನೀರವದಲ್ಲಿ ಆ ರಾಗಗಳು ಒಂದು ಅಲೌಕಿಕ ಮಾಧುರ್ಯದ ನಾದಲೋಕವನ್ನು ಸೃಜಿಸಿ ಶ್ರೋತೃಗಳನ್ನು ಮಾಧುರ್ಯದ ರಸದಲ್ಲಿ ಅದ್ದಿ ಮಂತ್ರಮುಗ್ಧಗೊಳಿಸುವ ಪರಿ ಅನನ್ಯ. ಸಂಗೀತ ರಸಿಕರಿಗೆ ರಾತ್ರಿ, ತಡರಾತ್ರಿ, ಬೆಳಗ್ಗಿನ ರಾಗಗಳನ್ನು ಕೇಳಲು ಅನುವು ಮಾಡಿಕೊಡುವ ಸಲುವಾಗಿ ಹಿಂದೆ ಬಹಳಷ್ಟು ಆಹೋರಾತ್ರಿ ಸಂಗೀತ ಸಮ್ಮೇಳನಗಳು ನಡೆಯುತ್ತಿದ್ದವು. ಕಛೇರಿ ಮುಗಿದರೂ ಆ ರಾಗಗಳ ಗುಂಗು ಶ್ರೋತೃಗಳ ಕಿವಿಯಲ್ಲಿ ಬಹಳ ಕಾಲ ಉಳಿಯುತ್ತಿತ್ತು. ಆದರೆ ಇತ್ತೀಚೆಗೆ ಆಹೋರಾತ್ರಿ ಕಚೇರಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ತನ್ನ ಜೀವನವನ್ನೇ ಮುಡಿಪಾಗಿಟ್ಟು ಕಠಿಣ ಸಾಧನೆಯ ಮೂಲಕ ರಾತ್ರಿ, ಮಧ್ಯಾರಾತ್ರಿಯ ರಾಗಗಳನ್ನು ಒಲಿಸಿಕೊಂಡ ಸಾಧಕನಿಗೆ ಆ ರಾಗಗಳನ್ನು ಹಾಡುವ ಅವಕಾಶ ಇಲ್ಲವಾಗಿದೆ. ಹಾಗಾಗಿ ರಾತ್ರಿಯ ಆ ಎಲ್ಲಾ ಅಪೂರ್ವ ರಾಗಗಳು ನಶಿಸುತ್ತಿವೆ. ಹಿಂದುಸ್ಥಾನಿ ಸಂಗೀತದ ವೈಭವೋಪೇತ ದಿನಗಳನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಮತ್ತೆ ಆಹೋರಾತ್ರಿ ಸಂಗೀತ ಕಛೇರಿಗಳು ನಡೆಯಬೇಕಿವೆ. ಆಹೋರಾತ್ರಿ ಸಂಗೀತದ ಈ ಪರಿಕಲ್ಪನೆಯನ್ನು ಮಂಗಳೂರಲ್ಲಿ ಸಾಕಾರಗೊಳಿಸುವ ಸಲುವಾಗಿ ಮಂಗಳೂರಿನ ಸ್ವರಾನಂದ ಸಂಗೀತ ಪ್ರತಿಷ್ಠಾನವು ದಿನಾಂಕ 16-12-2023ರಂದು ಆಹೋರಾತ್ರಿ ಸಂಗೀತ ಸಮ್ಮೇಳನವನ್ನು ಮಂಗಳೂರಿನ ಕಾರ್ ಸ್ಟ್ರೀಟ್ ನ ಬಿ.ಇ.ಎಮ್. ಹೈಸ್ಕೂಲಿನ ಸಭಾಂಗಣದಲ್ಲಿ ಆಯೋಜಿಸಿದೆ. ದೇಶದ ಹೆಸರಾಂತ ಸಂಗೀತಗಾರರು ಇದರಲ್ಲಿ ರಾತ್ರಿಯಿಂದ ಬೆಳಗಿನ ತನಕ ಸಂಗೀತ ಕಚೇರಿಗಳನ್ನು ನೀಡಲಿದ್ದಾರೆ.
ಸ್ವರಾನಂದ ಪ್ರತಿಷ್ಠಾನ ಎಂಬ ಸಂಸ್ಥೆಯ ಮೂಲಕ ಮಂಗಳೂರಿನ ಶ್ರೀಮತಿ ಕವಿತಾ ಶಣೈ ಬಸ್ತಿ, ಡಾ. ದಾಮೋದರ್ ಹೆಗ್ಡೆ, ಶ್ರೀ ಭಾರವಿ ದೇರಾಜೆ, ಶ್ರೀ ಗೌತಮ್ ನಾಯಕ್, ಪಂ. ರವಿಕಿರಣ್ ಮಣಿಪಾಲ, ಶ್ರೀಮತಿ ದಿವ್ಯ ದಿನೇಶ್ ಭಟ್, ಶ್ರೀ ಶ್ರೀ ರಾಮಚಂದ್ರ ಭಟ್ ಕೆ. ಜೊತೆ ಸೇರಿ ಸಂಗೀತಾಸಕ್ತಿಯನ್ನು ಪಸರಿಸುವ ಉದ್ದೇಶದೊಂದಿಗೆ ತಿಂಗಳಿಗೊಮ್ಮೆ ಮಂಗಳೂರಿನಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಬೈಠಕ್ ಗಳನ್ನು ಆಯೋಜಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ ಇದರ ಆರಂಭವನ್ನು ದಶಂಬರ 16 ಶನಿವಾರ ರಾತ್ರಿ 8.30ಕ್ಕೆ ಆರಂಭವಾಗುವ ಅಹೋರಾತ್ರಿ ಸಂಗೀತೋತ್ಸವದ ಮೂಲಕ ಕಾರ್ಯರೂಪಕ್ಕೆ ತರುತ್ತಿದ್ದಾರೆ.
ಇದು ವಿಶೇಷವಾಗಿ ಸದಸ್ಯತ್ವವನ್ನು ಪಡೆದುಕೊಂಡು ಸದಸ್ಯರಿಗಾಗಿ ಆಯೋಜಿಸಲ್ಪಡುವ ಸಂಗೀತ ಬೈಠಕ್ ಕಾರ್ಯಕ್ರಮ ಸರಣಿಯಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಕಡಿಮೆ ಪಕ್ಷ 24 ಬೈಠಕ್ ಗಳನ್ನು ನೀಡುವ ಆಶ್ವಾಸನೆಯೊಂದಿಗೆ ಪ್ರತಿಷ್ಠಾನ ಸದಸ್ಯರನ್ನು ಒಟ್ಟುಗೂಡಿಸುತ್ತಿದೆ. ಇದರಲ್ಲಿ ಪ್ರಖ್ಯಾತ ಕಲಾವಿದರಿಂದ ಗಾಯನ ವಾದನ ಕಚೇರಿಗಳಲ್ಲದೇ ಸ್ಥಳೀಯ ಕಲಾವಿದರನ್ನು ಬಳಸಿ, ಬೆಳೆಸುವ ಯೋಜನೆಗಳೂ ಸೇರಿವೆ.
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಬೈಠಕ್ ಸಂಸ್ಕ್ರತಿ ಗೆ ಪುಣೆ, ಮುಂಬಯಿ, ಧಾರವಾಡ ಮೊದಲಾದ ನಗರಗಳು ನೀಡಿದ ಪ್ರೋತ್ಸಾಹ ದಾಯಕ ವಾತಾವರಣದಿಂದ ಆ ಜಾಗಗಳಿಂದ ಅನೇಕಾನೇಕ ಕಲಾವಿದರು ಹುಟ್ಟಿ ಪ್ರಸಿದ್ಧರಾಗುತ್ತಿದ್ದಾರೆ. ಈ ನಗರಗಳು ಕಲಾವಿದರುಗಳಿಗೆ ಸ್ವರ್ಗ ಎಂದೆನಿಸಲ್ಪಡುತ್ತಿರಲು ಕಾರಣ ಅಲ್ಲಿನ ಪ್ರೇಕ್ಷಕರು ಪ್ರಬುದ್ಧರಾಗಿದ್ದಾರೆ. ಮಂಗಳೂರು ಕೂಡ ಆ ರೀತಿಯಾಗಿ ಬೆಳೆಯಲಿ ಎಂಬುದು ಸ್ವರಾನಂದ ಪ್ರತಿಷ್ಠಾನದ ಆಶಯ.
ಬೈಠಕ್ ಗಳಲ್ಲಿ ಕಾರ್ಯಕ್ರಮ ನೀಡುವುದು ಕಲಾವಿದರಿಗೂ ಖುಷಿಯ ವಿಚಾರ ಯಾಕೆಂದರೆ ಅತ್ಯಂತ ಹತ್ತಿರದಲ್ಲಿ ಕುಳಿತು ಸಂಗೀತವನ್ನು ಆಸ್ವಾದಿಸುವ, ಆನಂದಿಸುವ ಕಲಾ ಪ್ರೇಮಿಗಳಿಂದ ಪ್ರತೀ ಹಂತಗಳಲ್ಲೂ ಕಲಾವಿದರು ಹೊಸ ಹುರುಪನ್ನು ಪಡೆಯುತ್ತಾರೆ. ಮತ್ತಷ್ಟು ಆಳಕ್ಕಿಳಿಯುತ್ತಾ, ಹೊಸ ಆವಿಶ್ಕಾರಗಳೊಂದಿಗೆ ಇನ್ನಷ್ಟು ಶೋತೃಗಳ ಹೃದಯ ಮುಟ್ಟುವ ಪ್ರಯತ್ನ ಮಾಡುತ್ತಾರೆ.
ಮಂಗಳೂರು ಪರಿಸರದ ಸಂಗೀತಾಸಕ್ತರಿಗೆ ಈ ಸಂಗೀತ ಸಂಭ್ರಮವನ್ನು ತರುವ ಪ್ರಯತ್ನವನ್ನು ಸಮಾನ ಅಭಿರುಚಿಯ ಕಲಾವಿದ ಹಾಗೂ ಕಲಾಸಕ್ತ ಮಿತ್ರರು ಜೊತೆ ಸೇರಿ ಸ್ವರಾನಂದ ಪ್ರತಿಷ್ಠಾನ ಎಂಬ ಸಂಸ್ಥೆಯ ಮೂಲಕ ಕಾರ್ಯ ರೂಪಕ್ಕೆ ತರುತ್ತಿದ್ದಾರೆ. ಸಂಸ್ಥೆಯು ತನ್ನ ಸದಸ್ಯರಿಗಾಗಿ ಮುಂದಿನ ಮೂರು ವರ್ಷಗಳಲ್ಲಿ, ವರ್ಷಕ್ಕೆ ಕನಿಷ್ಟ 8 ಉತ್ತಮ ಗುಣಮಟ್ಟದ ಕಾರ್ಯಕ್ರಮಗಳನ್ನು ನೀಡಲು ಬದ್ಧವಾಗಿದೆ. ಇದರ ಆರಂಬೋತ್ಸವವು ಅಹೋರಾತ್ರಿ ಸಂಗೀತೋತ್ಸವದ ಮೂಲಕ ದಶಂಬರ 16 , ಶನಿವಾರ ರಾತ್ರಿ ಸಾಕಾರಗೊಳ್ಳಲಿದೆ.
ರಾತ್ರಿ 8.30 ಕ್ಕೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಪಂ. ಸೋಮನಾಥ್ ಮರಡೂರ್ ಇವರಿಗೆ ಸಂಗೀತ ಸಮ್ಮಾನ್ ನಡೆಯಲಿದೆ. ಪಂ. ಸೋಮನಾಥ್ ಮರಡೂರ್, ಶ್ರೀ ಕುಮಾರ್‌ಮರಡೂರ್, ಶ್ರೀಮತಿ ಅಪೂರ್ವ ಗೋಖಲೆ, ಶ್ರೀಮತಿ ಪಲ್ಲವಿ ಜೋಷಿ, ಶ್ರೀ ರವಿಕಿರಣ್ ಮಣಿಪಾಲ್ ಇವರುಗಳಿಂದ ಗಾಯನ ಗೋಷ್ಠಿಗಳು ಹಾಗೂ ಪಂ. ಸುಧೀರ್ ನಾಯಕ್ ಮುಂಬೈ ಇವರಿಂದ ಸಂವಾದಿನಿ ಸೋಲೋ ಹಾಗೂ ಶ್ರೀ ಅಭಿಶೇಕ್ ಬೋರ್ಕರ್ ಪುಣೆ, ಇವರ ಸರೋದ್ ವಾದನ ನಡೆಯಲಿದೆ.
ಸಂಗತ್ ಕಲಾವಿದರುಗಳಾಗಿ ಪಂಡಿತ್ ಅರವಿಂದ್ ಕುಮಾರ್ ಆಜ಼ಾದ್ , ಪಂ. ಸುಧೀರ್ ನಾಯಕ್, ಶ್ರೀ ಗುರುಮೂರ್ತಿ ವೈದ್ಯ, ಡಾ. ಉದಯ್ ಕುಲಕರ್ಣಿ, ಧ್ಯಾನೇಶ್ವರ್ ಸೋನಾವನೆ ಮೊದಲಾದ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ. ಮುಂದಿನ ಬೈಠಕ್ ಗಳು ದಿನದ ಬೇರೆ ಬೇರೆ ಸಮಯಗಳಲ್ಲಿ ಆಯೋಜನೆಗೊಳ್ಳಲಿವೆ. ಸಮಯಾಧಾರಿತ ಎಲ್ಲಾ ರಾಗಗಳ ಆಸ್ವಾದನೆಗಾಗಿ ಸ್ವರಾನಂದ ಪ್ರತಿಷ್ಠಾನವು ತನ್ನ ಸದಸ್ಯತರಿಗಾಗಿ ಇವೆಲ್ಲಾ ಕಾರ್ಯಯೋಜನೆಗಳನ್ನು ಹಾಕಿಕೊಂಡಿದೆ. ಕಾರ್ಯಕ್ರಮವು ಮಂಗಳೂರಿನ ಕಾರ್ ಸ್ಟ್ರೀಟ್ ನ ಬಿ.ಇ.ಎಮ್. ಹೈಸ್ಕೂಲಿನ ಸಭಾಂಗಣದಲ್ಲಿ ನಡೆಯಲಿವೆ
ಇದರಲ್ಲಿ ಪಾಲ್ಗೊಳ್ಳಲು ಇಚ್ಭಿಸುವ ಸಂಗೀತ ರಸಿಕರು ವಿವರಗಳಿಗಾಗಿ ಡಾ. ದಾಮೋದರ್ ಹೆಗ್ಡೆ 9481309610, ಭಾರವಿ ದೇರಾಜೆ 8762310043 ಮತ್ತು ಕವಿತಾ ಶೆಣೈ ಬಸ್ತಿ 9880896880 ಇವರುಗಳನ್ನು ಸಂಪರ್ಕಿಸಬಹುದು.