ಮೈಲಾರ: ಕರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ (ರಿ.) ಸುಕ್ಷೇತ್ರ ಮೈಲಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ/ಬಳ್ಳಾರಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ತಾಲ್ಲೂಕು ಘಟಕ ಹೂವಿನ ಹಡಗಲಿ ಮತ್ತು ಗ್ರಾಮ ಪಂಚಾಯತಿ ಮೈಲಾರ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 27-11-2023ರಂದು ಮೈಲಾರ ಶರಣ ಜಯಪ್ರಕಾಶ ನಾರಾಯಣ ಕಲಾಮಂದಿರದಲ್ಲಿ ಕರ್ನಾಟಕ ಸಂಭ್ರಮ 50 ಹಾಗೂ ಕರ್ನಾಟಕ ಗ್ರಾಮೀಣ ಕನ್ನಡ ನುಡಿಹಬ್ಬ 2023ರ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಜರುಗಿತು.
ಶ್ರೀಮತಿ ಟಿ. ಶಾರದಮ್ಮ ಡಾ. ಎ.ಆರ್. ದಯಾನಂದ ಮೂರ್ತಿ ರೈತ ದಂಪತಿಗಳ ಸಭಾಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಸವ ರಮಾನಂದ ಮಹಾಸ್ವಾಮಿಗಳು, ಶರಣ ಶ್ರೀ ಗುರು ವೆಂಕಪ್ಪಯ್ಯ ಒಡೆಯರ್ ಗಳು ಹಾಗೂ ವೇದಿಕೆಯಲ್ಲಿ ಅತಿಥಿ ಗಣ್ಯರೆಲ್ಲ ಸೇರಿ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶರಣ ಪುಟ್ಟಪ್ಪ ಶಂಕ್ರಪ್ಪ ತಂಬೂರಿಯವರು ಪ್ರಾಸ್ತಾವಿಕ ಮಾತಾನ್ನಾಡಿದರು. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಸಹಿತ ,ಮೈಲಾರ ಬಸವಲಿಂಗ ಶರಣಶ್ರೀ, ಶಂಕರಸಿರಿ ಗ್ರಾಮೀಣ ರತ್ನ, ಪವಿತ್ರ ಸಿರಿ ವಿದ್ಯಾರ್ಥಿ ರತ್ನ, ಆದರ್ಶ ದಂಪತಿ ಸನ್ಮಾನ ಹೀಗೆ ರಾಜ್ಯದ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸುಂದರ ಸಮಾರಂಭದಲ್ಲಿ ಗಡಿನಾಡಾದ ಕಾಸರಗೋಡಿನ ವೈದ್ಯೆ, ಸಾಹಿತಿ, ಸಂಘಟಕರಾದ ಡಾ. ವಾಣಿಶ್ರೀ ಕಾಸರಗೋಡು ಅವರನ್ನು ಸಾಹಿತ್ಯ, ಸಾಂಸ್ಕೃತಿಕ, ಸಂಘಟನೆ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಾಡಿರುವ ಅಪಾರ ಸಾಧನೆಯನ್ನು ಗುರುತಿಸಿ ಹಲವಾರು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ‘ಮೈಲಾರ ಬಸವಲಿಂಗ ಶರಣಶ್ರೀ’ ರಾಜ್ಯ ಮಟ್ಟದ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ನೃತ್ಯ, ಜಾನಪದ, ಜಾದೂ ಪ್ರದರ್ಶನ, ತತ್ವ ಪದ ಹೀಗೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು.