‘ಕಾತ್ಯಾಯಿನಿ’ ಮಲ್ಲಿಕಾ ಮಳವಳ್ಳಿ ಅವರ ಕಾದಂಬರಿ. ಎಪ್ಪತ್ತೆಂಟರ ಇಳಿಹರೆಯದಲ್ಲಿ ಬರೆದ ಈ ಕಾದಂಬರಿ ಯಾವ ರಿಯಾಯಿತಿಯನ್ನೂ ಅಪೇಕ್ಷಿಸದಿರುವಷ್ಟು ಪ್ರಬುದ್ಧ ಕೃತಿ. ಸುಮಾರು ನೂರು ವರುಷಗಳ ಐದು ತಲೆಮಾರುಗಳ ಬದುಕು ಹಾಗೂ ಅಂದಿನಿಂದ ಇಂದಿನವರೆಗಿನ ದಿನಮಾನವನ್ನು ತುಂಬಾ ಆಪ್ಯಾಯಮಾನತೆಯಿಂದ ಚಿತ್ರಿಸಿದ್ದಾರೆ. ಉದ್ದುದ್ದದ ವಾಕ್ಯಗಳು ಮಾತ್ರ ಕಿರಿಕಿರಿ ಅನ್ನಿಸುವುದೇ ವಿನಃ ಓದಿಗಾವ ಭಂಗವನ್ನೂ ತರುವುದಿಲ್ಲ. ವಯೋ ಹಿರಿಯರಿಗೆ ತಮ್ಮ ಬಾಲ್ಯದ ದಿನಗಳು ನೆನಪಾದರೆ, ಕಿರಿಯರು ತಮ್ಮ ಹಿರಿಯರ ಬದುಕಿನ ಚಿತ್ರವನ್ನು ಮನಗಾಣುತ್ತಾರೆ.
ಈ ಕೃತಿಯ ಸೂಕ್ಷ್ಮ ಪರಿಚಯವನ್ನು ಕಾದಂಬರಿಕಾರರ ನುಡಿಗಳಲ್ಲೇ ಮಾಡಿಕೊಡುವೆ: ಇಂದಿನ ಆಧುನಿಕತೆಗೆ ಮರುಳಾಗಿ ನಮ್ಮ ಯುವ ಪೀಳಿಗೆಯು ಹಳ್ಳಿಯ ಜೀವನವನ್ನು ತೊರೆದು, ಪಟ್ಟಣವಾಸಿಗಳಾಗಿ ಬದುಕುತ್ತಿದ್ದಾರೆ. ನಮ್ಮ ಪೂರ್ವಜರು ಹಳ್ಳಿಯನ್ನು ಬಿಟ್ಟು ಎಲ್ಲೂ ಹೋಗದೆ, ತಮ್ಮ ಕೃಷಿಯ ಬದುಕಿನಲ್ಲೆ ಬದುಕಿ ಬಾಳಿ ನೆಮ್ಮದಿಯನ್ನು ಕಾಣುತ್ತಿದ್ದರು. ಆದರೆ ಇಂದಿನ ದಿನಮಾನದಲ್ಲಿ ಗ್ರಾಮ ಜೀವನ, ಬೇಸಾಯ, ಹಳ್ಳಿಯ ಊಟ ತಿಂಡಿಗಳಿಗೆ ತಿಲಾಂಜಲಿ ಕೊಟ್ಟು, ಹೋಟೆಲ್ ಊಟ, ತಿಂಡಿ ತಿನಿಸುಗಳಿಗೆ ಮಾರುಹೋಗಿ ತಮ್ಮ ಬೆಡಗು ಬಿನ್ನಾಣಗಳಿಂದ ಜನರನ್ನು ರಂಜಿಸುತ್ತಿದ್ದಾರೆ. ಈ ಕಾದಂಬರಿ ಬಾಲ್ಯದ ಗೆಳೆತಿಯರಿಬ್ಬರ ಕತೆಯಾಗಿದ. ಕಾತ್ಯಾಯಿನಿ ಮತ್ತು ಗೌರಿ ಪ್ರಾಣಸಖಿಯರು. ಗೌರಿಯು ವೈದ್ಯಳಾಗಿ ವೈದ್ಯ ಪತಿಯೊಡನೆ ಹಳ್ಳಿಯಲ್ಲಿ ನೆಲೆಸುವ ನಿರ್ಧಾರ ಮಾಡುತ್ತಾಳೆ. ಆಗರ್ಭ ಶ್ರೀಮಂತೆ ಗೆಳತಿ ಕಾತ್ಯಾಯಿನಿ ಗೆಳತಿಯಾಸೆಗೆ ಓಗೊಟ್ಟು ತಾನೂ ಹಳ್ಳಿಯಲ್ಲಿ ನೆಲೆಸುವ ನಿರ್ಧಾರ ಮಾಡುತ್ತಾಳೆ. ಹಳ್ಳಿಯಲ್ಲಿ ದೊಡ್ಡ ಆಸತ್ರೆಯನ್ನು ಕಟ್ಟಲು ಗೆಳತಿ ಗೌರಿಗೆ ತಮ್ಮ ದೊಡ್ಡ ಜಮೀನನ್ನೇ ಅರ್ಪಿಸುತ್ತಾಳೆ, ಆಸ್ಪತ್ರೆ ಕಟ್ಟಡದ ಕೆಲಸಗಳು ನಡೆಯುವಾಗಲೇ ಕಾತ್ಯಾಯಿನಿ ಅಪಘಾತಕ್ಕೆ ಈಡಾಗಿ ಮರಣವನ್ನಪ್ಪುತ್ತಾಳೆ. ಗೆಳತಿಯ ಆಸೆ ನೇರವೇರಿಸುವಲ್ಲಿ ಗೌರಿ ಕಟಿ ಬದ್ಧಳಾಗುತ್ತಾಳೆ.
ಮುನ್ನುಡಿಯಲ್ಲಿ ಡಾ. ಎಚ್.ಎಸ್. ಮುದ್ದೇಗೌಡರು, “ಕಾದಂಬರಿಗಾರ್ತಿ ಸ್ತ್ರೀ ಬದುಕಿನ ನಾನಾ ಆಯಾಮಗಳನ್ನು ಕುರಿತು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಹದವರಿತ ಮತ್ತು ಅಷ್ಟೇ ಸಶಕ್ತವಾದ ಸಂದರ ಗ್ರಾಮ್ಯಪದಗಳ ಬಳಕೆಯಿಂದ, ಆಕರ್ಷಕ ನಿರೂಪಣಾ ಶೈಲಿಯಿಂದ, ಕ್ರಮವರಿತ ಸನ್ನಿವೇಶಗಳ ಜೋಡಣೆಯಿಂದ, ಪ್ರಭಾವ ಬೀರುವ ಸೃಷ್ಟಿಯಿಂದ, ಎಲ್ಲಕ್ಕಿಂತ ಮಿಗಿಲಾಗಿ ಉತ್ತಮ ಕಥಾವಸ್ತುವಿನಿಂದ ಓದುಗರ ಮನದ ಮೇಲೆ ಪರಿಣಾಮ ಬೀರಿದ್ದಾರೆ” ಎಂದರೆ, ಶುಭಹಾರೈಕೆಯಲ್ಲಿ ಎಂ.ಎಸ್. ಶಿವಪ್ರಕಾಶ ಅವರು “ಈ ಕಾದಂಬರಿಯು ಗ್ರಾಮೀಣ ಪ್ರದೇಶದ ವಿದ್ಯಾವಂತರ ಜೀವನ ಶೈಲಿಯನ್ನು ಪ್ರಸ್ತುತ ಪಡಿಸುವುದಾಗಿದೆ. ಈ ಕಾದಂಬರಿಯಲ್ಲಿ ಗ್ರಾಮೀಣ ಪ್ರದೇಶದ ಭಾವೈಕ್ಯತೆ, ಧರ್ಮ, ಪ್ರೀತಿ, ಬಂಧುತ್ವ…. ಬಹಳ ಸೊಗಸಾಗಿ ವಿವರಿಸಲ್ಪಟ್ಟಿದೆ” ಎಂದಿದ್ದಾರೆ. “ಈ ಕಾದಂಬರಿಯು ಕಾದಂಬರಿಕಾರರ, ಪ್ರತಿಭಾಪೂರ್ಣ ಸೃಜನಶೀಲತೆ, ಸಾಂಸಾರಿಕ ತಲ್ಲಣಗಳ ಅಭಿವ್ಯಕ್ತಿ, ಹಳ್ಳಿಯ ಬದುಕಿನ ಅನನ್ಯತೆ, ಅಧ್ಯಾತ್ಮಚಿಂತನೆ, ಸ್ವಾತಂತ್ರ್ಯದ ಪರಿಕಲ್ಪನೆ, ಸ್ತ್ರೀ ಶಕ್ತಿಯ ಧೀಮಂತಿಕೆ, ದೇಹಾರೋಗ್ಯದ ಎಚ್ಚರಿಕೆ.. ಎಲ್ಲವೂ ಸುವ್ಯಕ್ತವಾಗಿದೆ” ಎಂಬುದು ಬೆನ್ನುಡಿಯಾಗಿದೆ.
ಕಾದಂಬರಿಯನ್ನು ಓದುತ್ತಿದ್ದಂತೆ ಮನತುಂಬಿದ ನುಡಿಗಳಿವು:- ನಾನು ಓದಿ ವಿದ್ಯಾವಂತಳಾಗಬೇಕು, ಹೆತ್ತವರಿಗೆ ಒಳ್ಳೆಯ ಹೆಸರನ್ನು ತರಬೇಕು ಎಂಬುದೇ ನನ್ನಾಸೆ. ಆಸೆಯನ್ನು ಚಿವುಟಿದರೆ ಹೆಣ್ಣುಮಕ್ಕಳು ನಮ್ಮ ದೇಶದಲ್ಲಿ ಮುಂದೆ ಬರುವುದೆಂತು ? ಹೆಣ್ಣುಮಕ್ಕಳು ಹೆಚ್ಚುಹೆಚ್ಚು ವಿದ್ಯಾವಂತರಾದರೆ ನಮ್ಮ ದೇಶ ಪ್ರಗತಿ ಹೊಂದುತ್ತದೆ.
* ಈಗ ಊರು ಬಾಳ ಕೆಟ್ಟೋಗಿದೆ. ಮಾತು, ಮಾರ್ಗ, ನ್ಯಾಯ, ನೀತಿ ಅನ್ನೋದೆಲ್ಲ ಅಳಿಸಿಹೋಗಿದೆ. ಯಾರು ಯಾರನ್ನೂ ನಂಬುವಂತಿಲ್ಲ!
* ಕೆಲವರು ಗೆಳೆತನವೆಂದರೆ ಸುಖ-ಸಂತೋಷಕ್ಕೆ ಮಾತ್ರ ಎಂದು ತಿಳಿದು ಕಷ್ಟಕಾಲದಲ್ಲಿ ಕೈಬಿಡ್ತಾರೆ. ಆದರೆ ನಿಜಗೆಳೆತನ ಎಂದರೆ, ಸುಖ-ಸಂತೋಷ ಸಮಯದಲ್ಲಿ ದೂರವಿದ್ರೂ ಕಷ್ಟಕಾಲದಲ್ಲಿ ಕೈ ಹಿಡಿಯೋದು.
* ಬದುಕು ಎಂದರೆ ಸಂಪಿಗೆ ಮರದಂತೆ ಇರಬೇಕು. ಎಲ್ಲರಿಗೂ ನೆರಳು ಕೊಟ್ಟು ಸುವಾಸನೆಯನ್ನು ಕೊಡಬೇಕು.
* ದೇವರು ಕೊಟ್ಟಿರುವಾಗ ಕಷ್ಟದಲ್ಲಿರುವವರಿಗೆ ಸಾಧ್ಯವಾದಷ್ಟು ಸಹಾಯ ಮಾಡುವುದೇ ಮಾನವಧರ್ಮ.
* ದೇವರನ್ನು ಬೇಡಿಕೊಳ್ಳಬೇಕಾಗಿರುವುದು, “ಪ್ರೀತಿಯನ್ನು ಶಾಶ್ವತವಾಗಿ ಇಟ್ಟಿರು” ಎಂದು.
* ಅನ್ನದ ಋಣ, ಮಣ್ಣಿನ ಋಣ, ದೇವರ ಋಣ ಇದ್ದಂತೆ ಅನ್ಯಾಯ, ಮೋಸ ಮಾಡದೆ ನಂಬಿಕೆಯಿಂದ ದುಡಿದರೆ ಆ ದೇವ್ರು ಕೈಬಿಡಲ್ಲ. ಮಕ್ಕಳು, ಮೊಮ್ಮಕ್ಕಳಿಗೂ ಮುಂದಿನ ದಾರಿ ತೋರ್ತಾನೆ.
* ಮಾನವೀಯತೆ ಅನ್ನೋದಿದ್ರೆ ಮನುಷ್ಯ ದೇವರಿಗೆ ಸಮಾನ. ತಿಳಿವಳಿಕೆ ಇಲ್ಲದ ಜನ ಮಾತ್ರ ಜಾತಿ, ಧರ್ಮ ಅಂತ ಹೊಡೆದಾಡೋದು.
* ಹೆಣ್ಣು ಅಂದರೆ ಭೂದೇವಿ, ಸಹನೆ- ಶಾಂತಿ ಎಲ್ಲವನ್ನೂ ತುಂಬಿಕೊಂಡವಳು.
* ಪ್ರೀತಿ ಅನ್ನೋದು ಮನಸ್ಸಿನಲ್ಲಿ ಹುಟ್ಟಿದ್ರೆ ಅದು ಎಲ್ಲಿದ್ರೂ ಎಳಕೊಂಡು ಹೋಗುತ್ತೆ.
* ಧರ್ಮ ಯಾವುದೇ ಇರಲಿ, ಪರಸ್ಪರ ಪ್ರೀತಿ-ವಿಶ್ವಾಸ- ಅನ್ಯೋನ್ಯತೆ ಇದ್ರೆ ಬದುಕು ಸ್ವರ್ಗ.
* ಜನಸೇವೆಯೆ ಜನಾರ್ದನ ಸೇವೆ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡ್ರೆ ನಮ್ಮ ದೇಶ ಉದ್ಧಾರವಾಗುತ್ತೆ. ಗ್ರಾಮೀಣ ಬದುಕು ಹಸನಾಗುತ್ತೆ.
* ಪ್ರೀತಿ- ಪ್ರೇಮ ಅನ್ನೋದು ಇರೋದರಿಂದ್ಲೇ ಈ ಜಗತ್ತು ಚಲಿಸುತ್ತಾ ಇರೋದು.
* ಮಹಾತ್ಮರು, ಸಾಧು ಸಂತರು ತಮ್ಮ ಜೀವನದಲ್ಲಿ ಜಾತಿ-ಮತ-ಭೇದ ಮಾಡದೆ ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಂಡು ದೇಶಕ್ಕಾಗಿ, ಜಗದ ಕಲ್ಯಾಣಕ್ಕಾಗಿ ಓಡಾಡಿದರು. ಅವರ ಬದುಕು ಆಗ್ನಿಯ ಕೊಂಡದಂತೆ. ಅವರು ಸುಖಭೋಗಗಳನ್ನು ಬಯಸಲಿಲ್ಲ. ಇಂದ್ರಿಯ ಸುಖಗಳನ್ನು ತ್ಯಜಿಸಿ ದೇಶಕ್ಕಾಗಿ ಬಾಳಿ ಅಮರರಾದರು.
ಶ್ರೀಮತಿ ಮಲ್ಲಿಕಾ ಮಳವಳ್ಳಿ (8970461522) ಅವರ – ‘ಕಾತ್ಯಾಯನಿ’ ಬರಿಯ ಕಾದಂಬರಿಯಲ್ಲ; ಆತ್ಮಗೀತ, ಓದಿದಂತೆ ಎತ್ತೆತ್ತ ನೋಡಿದರೂ ಅಲ್ಲಿ ಬಸವನೆಂಬ ಬಳ್ಳಿಯನ್ನು, ಎತ್ತೆತ್ತೆ ನೋಡಿದರೆ ಅಲ್ಲಿ ಲಿಂಗವೆಂಬ ಗೊಂಚಲನ್ನು, ಒತ್ತಿ ಹಿಂಡಿದರೆ ಭಕ್ತಿಯೆಂಬ ರಸವನ್ನು, ರಸವ ಸೇವಿಸಿದಂತೆ ಪ್ರೀತಿಯೆಂಬ ಸವಿಯನ್ನು ಉಣ್ಣಲು ಖಂಡಿತಕ್ಕು ಸಾಧ್ಯ, ಈ ಕಾದಂಬರಿ ಓದೋಣ, ಬದುಕಿನಾನಂದ ಅನುಭವಿಸೋಣವೆನ್ನುತ್ತ – ಕಾದಂಬರಿಕಾರ್ತಿ ಮಲ್ಲಿಕಾ ಮಳವಳ್ಳಿಯವರಿಗೆ ಒಂದೊಳ್ಳೆ ಕಾದಂಬರಿಗಾಗಿ ಹಾರ್ದಿಕ ಅಭಿನಂದನೆಗಳು. 328 ಪುಟಗಳ ಈ ಕಾದಂಬರಿಯ ಮುಖಬೆಲೆ ರೂ.300/-
ಕೆ.ಬಿ. ಗುರುಮಲಮ್ಮ ಕಾವ್ಯನಾಮದಲ್ಲಿ ಸಾಹಿತ್ಯ ರಚನೆ ಮಾಡುವ ಕವಯತ್ರಿ ಮಲ್ಲಿಕಾ ಮಳವಳ್ಳಿಯವರು ಚಾಮರಾಜನಗರದ ಕೊಳ್ಳೆಗಾಲ ತಾಲೂಕಿನ ಕಾಮಗೆರೆಯವರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಬಸವ ಸ್ಮರಣೆ (ಆಧುನಿಕ ವಚನ), ಪ್ರಕೃತಿ ಮಾತೆ (ಕವನ ಸಂಕಲನ), ಶ್ರೀ ಮಹದೇಶ್ವರ ಭಕ್ತಿಗೀತೆಗಳು, ಶ್ರೀ ಸಿದ್ಧಗಂಗೆಯ ಶಿವಯೋಗಿ (ಕವನ ಸಂಕಲನ), ಮನೆಯಂಗಳ (ಕವನ ಸಂಕಲನ), ಆಧುನಿಕ ವಚನಗಳು, ಹೃದಯಗೀತೆ, ಶ್ರೀ ರಾಜೇಂದ್ರ ಶಿವಯೋಗಿ ಮುಂತಾದ ಭಕ್ತಿ ಗೀತೆಗಳನ್ನು ರಚಿಸಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ತಾಲೂಕು ರಾಜ್ಯೋತ್ಸವ ಪ್ರಶಸ್ತಿಗಳು ಅವರನ್ನರಸಿ ಬಂದಿವೆ.