ಕಾಸರಗೋಡು : ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ವಿದ್ಯಾನಿಕೇತನ ಮತ್ತು ಕಾಸರಗೋಡು ಭಾರತೀಯ ವಿದ್ಯಾನಿಕೇತನ ಇವುಗಳ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಕಲೋತ್ಸವ ‘ಶಿವೋಹಂ-2023’ ಕಾರ್ಯಕ್ರಮವು ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ವಿದ್ಯಾನಿಕೇತನದ ಆವರಣದಲ್ಲಿ ದಿನಾಂಕ 01-12-2023ರಂದು ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ಸಿ.ಟಿ. ರಾಜಗೋಪಾಲನ್ ಇವರು ಉದ್ಘಾಟಿಸಿ ಮಾತನಾಡಿ “ಭಾರತೀಯ ವಿದ್ಯಾ ನಿಕೇತನದ ಸಂಸ್ಥೆ ಶ್ರೀ ಮಹಾಲಿಂಗೇಶ್ವರ ವಿದ್ಯಾನಿಕೇತನವು ಭಾರತೀಯ ಸಂಸ್ಕೃತಿ ಆಚಾರ, ವಿಚಾರ, ಸಂಸ್ಕಾರ ನೀಡುವ ಜೊತೆಗೆ ಶಾಲೆ ಉತ್ತಮ ಸಾಧನೆ ಮಾಡುತ್ತಿದೆ” ಎಂದು ಹೇಳಿದರು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಜೀನ್ ಲವೀನಾ ಮೊಂತೆರೊ “ಕಲೆ ಇದ್ದಲ್ಲಿ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುವುದು. ಆದುದರಿಂದ ಮಕ್ಕಳಿಗೆ ಅವರ ಕಲೆಗೆ ಪ್ರೋತ್ಸಾಹ ನೀಡಿ” ಎಂದು ಹೇಳಿದರು. ಸುಭೋದ್ ಕೂಡ್ಲು ಮಾತನಾಡಿ, “ವಿದ್ಯಾರ್ಥಿಗಳು ಮೊಬೈಲ್ ವೀಕ್ಷಿಸುವುದು ಹೊರತುಪಡಿಸಿ, ಪಾಠದ ಕಡೆ ಗಮನ ಕೊಡಬೇಕು. ಶಿಸ್ತು ಸಮಯ ಪರಿಪಾಲನೆ ಮಾಡಬೇಕು ಎಂದು ಹೇಳಿದರು. ರಾಜೇಂದ್ರ ವಿ. ಶೆಟ್ಟಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಸುರೇಶ್ ಶೆಟ್ಟಿ ಪೊಕಟ್ಟೆ, ಡಾ. ಜಯಪಾಲ್ ಶೆಟ್ಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷ್ಣ ಶೆಟ್ಟಿ ತಾರೆಮಾರ್, ಭಾರತೀಯ ವಿದ್ಯಾನಿಕೇತನ ಕಾಸರಗೋಡು ಜಿಲ್ಲಾ ಅಧ್ಯಕ್ಷ ಶಿವಶಂಕರ್ ನಾಯರ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಜಿಲ್ಲಾ ಕಲೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ಬಿ. ಪದವು, ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಮಾಡ, ಶಾಲಾ ಸಂಚಾಲಕ ದಾಮೋದರ್ ಶೆಟ್ಟಿ, ಶಾಲಾ ಪ್ರಾಂಶುಪಾಲೆ ಬಬಿತಾ ಸೂರಜ್ ಮತ್ತಿತರರು ಉಪಸ್ಥಿತರಿದ್ದರು.
2022-23ನೇ ಸಾಲಿನಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಬಳಿಕ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ವಾನ್ ಶ್ರಾವಣ್ ಉಳ್ಳಾಲ್ ಮತ್ತು ಬಳಗದವರಿಂದ ‘ತಿಶಕ್ತಿ’ ನೃತ್ಯ ರೂಪಕ ಪ್ರದರ್ಶನಗೊಂಡಿತು. ಶಾಲಾ ವ್ಯವಸ್ಥಾಪನ ಸಮಿತಿ ಸಂಚಾಲಕ ದಾಮೋದರ್ ಶೆಟ್ಟಿ ಸ್ವಾಗತಿಸಿ, ದಿನಕರ, ಗಂಗಾಧರ್ ಕೊಂಡೆವೂರು ಮತ್ತು ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.
ದಿನಾಂಕ 02-12-2023ರಂದು ಬೆಳಿಗ್ಗೆ 9 ಗಂಟೆಯಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆದವು. ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಕೆ.ಎ. ಶೆಟ್ಟಿ ಚಕ್ರತೀರ್ಥ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದರು. ಈ ವೇಳೆ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವಕೀಲ ನವೀನ್ ರಾಜ್ ಹೊಸಂಗಡಿ, ಭಾರತೀಯ ವಿದ್ಯಾನಿಕೇತನದ ಜೊತೆ ಕಾರ್ಯದರ್ಶಿ ವಿಟ್ಠಲ್ ಭಟ್, ಹರಿಶ್ಚಂದ್ರ ಮಂಜೇಶ್ವರ, ವಾರಿಜಾ, ಸಂತೋಷ್ ಕುಮಾರ್, ಮಂಜೇಶ್ವರ ಗ್ರಾ.ಪಂ. ವಾರ್ಡ್ ಪ್ರತಿನಿಧಿ ರಾಜೇಶ್ ಮಜಲು, ಗಣೇಶನ್ ಪುದಿಯಕಂಡಂ, ಭಾರತೀಯ ವಿದ್ಯಾನಿಕೇತನ ಕಾರ್ಯದರ್ಶಿ ಮಣಿಕಂಠನ್ ಪಿ., ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ವಿದ್ಯಾನಿಕೇತನ ಶಾಲಾ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಶಾಲಾ ಸಂಚಾಲಕ ದಾಮೋದರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪ್ರಾಂಶುಪಾಲೆ ಬಬಿತಾ ಸೂರಜ್ ಸ್ವಾಗತಿಸಿ, ಸ್ಮೃತಿ ಕಾರ್ಯಕ್ರಮವನ್ನು ನಿರೂಪಿಸಿ, ಶಾಲಾ ಸಂಚಾಲಕ ದಾಮೋದರ್ ಶೆಟ್ಟಿ ವಂದಿಸಿದರು.