ಮಂಗಳೂರು : ಕಥಾ ಕೀರ್ತನದ ಮೇರು ನಾಡೋಜ ಸಂತ ಭದ್ರಗಿರಿ ಅಚ್ಯುತದಾಸರು ಹಾಗೂ ಕೀರ್ತನಾಚಾರ್ಯ ಲಕ್ಷ್ಮಣದಾಸ ವೇಲಣಕರ್ ಅವರ ಸ್ಮರಣಾರ್ಥ ಬೆಂಗಳೂರಿನ ಷಡ್ಜ ಕಲಾ ಕೇಂದ್ರ ಹಾಗೂ ರಾಮಕೃಷ್ಣ ಮಠ ಮಂಗಳೂರು ಜಂಟಿಯಾಗಿ ಆಯೋಜಿಸಿದ್ದ ‘ಕಥಾ ಕೀರ್ತನ ವೈಭವ -2023’ ಮತ್ತು ‘ಅಚ್ಯುತಶ್ರೀ ರಾಷ್ಟ್ರೀಯ ಪುರಸ್ಕಾರ’ ಪ್ರದಾನ ಸಮಾರಂಭವು ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ದಿನಾಂಕ 17-12-2023ರಂದು ನಡೆಯಿತು.
ಪ್ರತಿ ವರ್ಷ ಕಥಾಕೀರ್ತನ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ನೀಡಲಾಗುವ ‘ಅಚ್ಯುತಶ್ರೀ’ ರಾಷ್ಟ್ರೀಯ ಪುರಸ್ಕಾರವನ್ನು ಈ ಬಾರಿ ಮಹಾರಾಷ್ಟ್ರದ ಪುಣೆಯ ಹರಿದಾಸರಾದ ಚಾರುದತ್ತ ಆಫಳೆ ಬುವಾ ಅವರಿಗೆ ನೀಡಿ ಗೌರವಿಸಲಾಯಿತು. ಇದೇ ವೇಳೆ ನಾಡಿನ ಖ್ಯಾತ ಹರಿದಾಸರಾದ ಪೊಳಲಿ ಜಗದೀಶದಾಸರು ರಚಿಸಿದ “ಸುವರ್ಣ ಸಿರಿ – ದೃಷ್ಟಾಂತ ಕಥಾಕೀರ್ತನ” ಗ್ರಂಥದ ಲೋಕಾರ್ಪಣೆಗೊಳಿಸಲಾಯಿತು. ಬಳಿಕ ಹರಿಕಥಾ ಕ್ಷೇತ್ರದಲ್ಲಿ 50 ವಸಂತಗಳನ್ನು ಪೂರೈಸುತ್ತಿರುವ ಪೊಳಲಿ ಜಗದೀಶದಾಸರು ಹಾಗೂ ಹರಿಕಥಾ ಕಲಾ ಸೇವೆಗೈದ ಶ್ರೀ ಎಂ. ಲಕ್ಷ್ಮೀನಾರಾಯಣ ಭಟ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ, ವಿಧಾನಪರಿಷತ್ ಸದಸ್ಯರಾಗಿರುವ ಪ್ರತಾಪ್ ಸಿಂಹ ನಾಯಕ್, ಮಂಗಳೂರಿನ ಹರಿಕಥಾ ಪರಿಷತ್ತಿನ ಅಧ್ಯಕ್ಷರಾಗಿರುವ ಶ್ರೀ ಕೆ. ಮಹಾಬಲ ಶೆಟ್ಟಿ, ಷಡ್ಜ ಕಲಾ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ದತ್ತಾತ್ರೇಯ ವೇಲಣಕರ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಕುಮಾರಿ ವೈಭವಿ ಕುಂಬ್ಳೆ ‘ಪಾಶುಪತ ಪ್ರದಾನ’ ಹರಿಕಥೆ ಪ್ರಸ್ತುತಪಡಿಸಿದರು.
ಸಭೆಯ ಪ್ರಾಸ್ತಾವಿಕ ನುಡಿಗಳಲ್ಲಿ ಡಾ. ದತ್ತಾತ್ರೇಯ ವೇಲಣಕರ್ “ಸಂತ ಭದ್ರಗಿರಿ ಅಚ್ಯುತದಾಸರು ಹಾಗೂ ತಂದೆ ಕೀರ್ತನಾಚಾರ್ಯ ಲಕ್ಷ್ಮಣದಾಸ ವೇಲಣಕರ್ ಅವರು ಹರಿಕಥಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಿಸುತ್ತಾ ಐದು ವರ್ಷಗಳಿಂದ ಈ ಕಾರ್ಯಕ್ರಮ ಹಮ್ಮಿಕೊಂಡು ಬಂದಿದ್ದು, ಪ್ರತಿ ವರ್ಷ ಹರಿಕಥಾ ಕ್ಷೇತ್ರಕ್ಕೆ ಕೊಡುಗೆ ನೀಡಿದ ಮಹನೀಯರಿಗೆ ಅಚ್ಯುತಶ್ರೀ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ” ಎಂದರು.
ಮಂಗಳೂರು ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ “ಕಥಾಕೀರ್ತನ ಹಾಗೂ ಅಧ್ಯಾತ್ಮದ ನಡುವೆ ಅವಿನಾಭಾವ ಸಂಬಂಧವಿದೆ. ರಾಮಕೃಷ್ಣ ಮಠ ಈ ರೀತಿ ಆಧ್ಯಾತ್ಮಿಕತೆಯೆಡೆಗೆ ಕರೆದುಕೊಂಡು ಹೋಗುವ ಕಲೆಗಳನ್ನು ಮೊದಲಿನಿಂದಲೂ ಪ್ರೋತ್ಸಾಹಿಸಿಕೊಂಡು ಬಂದಿದೆ” ಎಂದರು.
ನಂತರ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, “ಭಾರತದ ಆತ್ಮ ಎಂದರೆ ಅದು ಅಧ್ಯಾತ್ಮ. ಬಾಲ್ಯದಲ್ಲಿ, ಹರಿಕಥೆ, ಸಂಕೀರ್ತನೆಗಳ ಸಂಸ್ಕಾರ ಯಾರ ಮೇಲೆ ಆಗಿರುತ್ತದೋ, ಅವರ ಯೋಚನೆ, ನಡವಳಿಕೆ ಹಾಗೂ ಒಟ್ಟಾರೆ ಜೀವನದ ಮೇಲೆ ಅದರ ಪರಿಣಾಮ ತಿಳಿದೋ ತಿಳಿಯದೆಯೋ ಬಿದ್ದೇ ಬೀಳುತ್ತದೆ. ಅವರ ಒಳಗಿರುವ ಅಗೋಚರ ಶಕ್ತಿ ಅವರನ್ನು ಸರಿಯಾದ ದಾರಿಯಲ್ಲಿ ನಡೆಯಲು ಪ್ರೇರಣೆ ಹಾಗೂ ಮಾರ್ಗದರ್ಶನವನ್ನು ನೀಡುತ್ತಿರುತ್ತದೆ. ಆ ಸಂಸ್ಕಾರ ನೀಡುವ ಶಕ್ತಿ ಹರಿಕಥೆಗೆ ಇದೆ” ಎಂದರು.
ಸಭಾ ಕಾರ್ಯಕ್ರಮದ ನಂತರ ಶ್ರೀ ಚಾರುದತ್ತ ಆಫಳೆ ಬುವಾ ನಾರದೀಯ ಶೈಲಿಯಲ್ಲಿ ಸಂತ ನಾಮದೇವ ಜೀವನ ಆಧಾರಿತ ಹರಿಕಥೆ ನಡೆಸಿಕೊಟ್ಟರು. ಅವರಿಗೆ ತಬಲಾದಲ್ಲಿ ಶ್ರೀದತ್ತ ಪ್ರಭು ಹಾಗೂ ಹಾರ್ಮೋನಿಯಂನಲ್ಲಿ ಗೋಪಾಲ್ ಪ್ರಭು ಸಮರ್ಥ ಸಾಥ್ ನೀಡಿದರು. ಹರಿದಾಸರಾದ ಎಸ್.ಪಿ. ಗುರುದಾಸ್ ಕಾರ್ಯಕ್ರಮದ ನಿರೂಪಣೆಯನ್ನು ಸುಂದರವಾಗಿ ನಡೆಸಿಕೊಟ್ಟರು.