ಮಂಗಳೂರು : ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 20-12-2023ರಂದು ಕರಾವಳಿ ಕರ್ನಾಟಕದ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ ನಾಡು-ನುಡಿ-ವೈಭವದ ರತ್ನೋತ್ಸವವು ವೈಭವಪೂರ್ಣವಾಗಿ ನಡೆಯಿತು. ಸಮಾರಂಭದ ಸರ್ವಾಧ್ಯಕ್ಷ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡರು ಸರ್ವಾಧ್ಯಕ್ಷರಾಗಿ ಸಾಹಿತ್ಯದ ಒಳಗು ಹೊರಗುಗಳ ವಿವರವಾದ ವಿಶ್ಲೇಷಣೆ ಮಾಡಿದರು. ಪ್ರಧಾನ ಉಪನ್ಯಾಸ ಮಾಲಿಕೆಯಲ್ಲಿ ಡಾ. ಧನಂಜಯ ಕುಂಬಳೆಯವರ ಅಧ್ಯಕ್ಷತೆಯಲ್ಲಿ ಡಾ. ಮೀನಾಕ್ಷಿ ರಾಮಚಂದ್ರ ಹಾಗೂ ಶ್ರೀ ಮುನಿರಾಜ ರೆಂಜಾಳರು ಕ್ರಮವಾಗಿ ದಾಸ ಸಾಹಿತ್ಯ ಹಾಗೂ ಇಂದಿನ ಸಾಹಿತ್ಯಗಳ ಕುರಿತಾಗಿ ಸೋದಾಹರಣ ಸಹಿತ ಮಾತನಾಡಿದರು.
ನಂತರ ನಡೆದ ಕವಿ ಕಾವ್ಯ ಚಿತ್ರ ಗಾಯನದಲ್ಲಿ ಊರಿನ ಪ್ರಸಿದ್ಧ ಕವಿಗಳಾದ ಕರುಣಾಕರ ಬಳ್ಕೂರು, ಸಂಶೀರ್ ಬುಡೋಳಿ, ಜೋಯ್ಸ್ ಪಿಂಟೋ, ಚಂದ್ರಹಾಸ್ ಕೋಟೆಕಾರ್, ಶಾಂತಪ್ಪ ಬಾಬು, ನಾರಾಯಣ ಕುಂಬ್ರ ಮತ್ತು ವಸಂತಿ ನಿಡ್ಕೆಯವರು ಸ್ವರಚಿತ ಗೇಯ ಕವನಗಳನ್ನು ವಾಚನ ಮಾಡಿ, ಅದೇ ಕವನವನ್ನು ಗಾಯಕ ತೋನ್ಸೆ ಪುಷ್ಕಳ ಕುಮಾರ್ ಹಾಗೂ ಗಾಯಕಿ ಸೌಮ್ಯಾ ಕಟೀಲ್ ಸಂಗೀತ ಸಹಿತವಾಗಿ ಹಾಡಿದರು. ಅದೇ ಗಾಯನದ ಜೊತೆಗೆ ಆಶು ಚಿತ್ರಕಲಾ ಪ್ರವೀಣೆ ಕು. ಆಶ್ರಿತಾ ರೈಯವರು ಚಿತ್ರ ಬರೆದು ಮನ ಸೆಳೆದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿಯವರು “ಸರ್ವಕವಿಗಳ ಕವನದ ಬಗ್ಗೆ ಮಾತನಾಡುತ್ತಾ, ಬರೆದಾಗ ಗದ್ಯವಾದರೆ ಅದು ಕಟ್ಟುವ ಕೆಲಸವಾಗುತ್ತದೆ. ಅದೇ ಗದ್ಯವನ್ನು ಭಾವದೊಳಗೆ ಬಂಧಿಸಿದಾಗ ಕವನವಾಗಿ ಹುಟ್ಟುತ್ತದೆ. ಹಾಗೆ ಹುಟ್ಟಿದ ಕವನವು ಗಾಯಕನಿಗೆ ದೊರಕಿದಾಗ ಹಲವು ತರಕಾರಿಗಳನ್ನು ಬಳಸಿ ಮಾಡಿದ ವ್ಯಂಜನದಂತೆ ರುಚಿ ಕೊಡುವ ಖಾದ್ಯವಾಗುತ್ತದೆ” ಎಂದರು. ಬಳಿಕ ಸ್ವರಚಿತ ಕವನ ‘ನೇಸರ’ವನ್ನು ವಾಚಿಸಿ, ಅದೇ ಕವನವನ್ನು ಯುಗಳ ಗಾಯಕರು ಸುಶ್ರಾವ್ಯವಾಗಿ ಹಾಡಿದರು. ಕಾರ್ಯಕ್ರಮ ಸಂಯೋಜಕ ಹಾಗೂ ನಿರೂಪಕ ಭಾಸ್ಕರ ರೈ ಕುಕ್ಕುವಳ್ಳಿಯವರು ಆಶಯ ಕವನ ವಾಚಿಸಿದರು. ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು ದಂಪತಿಗಳೂ, ಗಣ್ಯ ಸಾಹಿತಿಗಳೂ, ಶಿಕ್ಷಕ ಶಿಕ್ಷಕಿಯರೂ ಊರ ಪ್ರಮುಖರೂ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಹಿತ ಕಿಕ್ಕಿರಿದ ಉಪಸ್ಥಿತಿಯಿತ್ತು.
ಅಶೋಕ್ ಪೊಳಲಿ ಇವರಿಂದ ಕೋಳಿನೃತ್ಯ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ವೀರಗಾಸೆ, ಗಾಯನ, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜನೆ ನೀಡಿದುವು.