ಕಾಂಬೋಡಿಯಾ : ಕರ್ನಾಟಕದ ಹಿರಿಯ ಕಲಾವಿದರಾದ ಶ್ರೀ ಗಣಪತಿ ಎಸ್. ಹೆಗಡೆ ಅವರು ‘ಗ್ಲೋಬಲ್ ಅಚೀವರ್ಸ್ ಅವಾರ್ಡ್’ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದಿನಾಂಕ 07-12-2023ರಂದು ಕಾಂಬೋಡಿಯಾದ ಸೀಮ್ ರಿಪ್ ಮಹಾನಗರದ ಅಂಕೋರ್ ಮಿರಾಕಲ್ ರೆಸಾರ್ಟ್ ಪಂಚತಾರಾ ಭವನದಲ್ಲಿ ಈ ಅಭೂತಪೂರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪದ್ಮಭೂಷಣ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ವಿಶ್ವವಾಣಿ ಪ್ರಧಾನ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಮತ್ತು ಕಾಂಬೋಡಿಯಾ ಸರ್ಕಾರದ ಅನೇಕ ಗಣ್ಯರು ಸೇರಿ ವಿದೇಶಿ ನೆಲದಲ್ಲಿ ಈ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿ ಅಭಿನಂದಿಸಿದರು.
ಕಲೆಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಗೆ ಈ ಪ್ರಶಸ್ತಿಯನ್ನು ಗಣಪತಿ ಎಸ್. ಹೆಗಡೆ ಅವರಿಗೆ ನೀಡಲಾಗಿದೆ. ಕಾಂಬೋಡಿಯಾ ಆನರರಿ ಕಾನ್ಸುಲೇಟ್ ಮತ್ತು ಕರ್ನಾಟಕದ ಅತ್ಯಂತ ಪ್ರಸಿದ್ಧ ಪತ್ರಿಕೆಯಾದ ವಿಶ್ವವಾಣಿ ಸಹಯೋಗದಲ್ಲಿ ಈ ಪ್ರಶಸ್ತಿ ಆಯೋಜನೆ ಮಾಡಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕರ್ನಾಟಕದ ಹತ್ತು ಸಾಧಕರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಕರ್ನಾಟಕ ಹಾಗೂ ಕಾಂಬೋಡಿಯಾ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು. ಇಂತಹ ಪ್ರಶಸ್ತಿಗಳು, ಕಾರ್ಯಕ್ರಮಗಳು ಪರಸ್ಪರ ದೇಶದ ಭಾಂದವ್ಯ ವೃದ್ಧಿಸಲು ಸಹಕಾರಿಯಾಗಿದೆ. ಅದಲ್ಲದೆ ಇಲ್ಲಿಯ ಸಂಸ್ಕೃತಿ, ಸಾಂಸ್ಕೃತಿಕ, ಸಂಪ್ರದಾಯ ತಿಳಿಯಲು ಕೂಡ ಸಹಾಯವಾಗುತ್ತದೆ ಮತ್ತು ಅಂಕೋರ್ ವಾಟ್ ದೇವಾಲಯ ಜಗತ್ತಿನ ಎಂಟನೇ ಅದ್ಭುತವಾಗಿರುವುದರಿಂದ ಇಲ್ಲಿಯೇ ಪ್ರಶಸ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು ಎನ್ನುವುದು ಆಯೋಜಕರ ಅಭಿಪ್ರಾಯ. ದೇಗುಲಗಳ ದೇಶದಲ್ಲಿ ಇಂತಹ ಪ್ರಶಸ್ತಿ ಸ್ವೀಕರಿಸಿದ್ದು, ಅವಿಸ್ಮರಣೀಯ ಅನುಭವ ಎನ್ನುವುದು ಗಣಪತಿ ಹೆಗಡೆಯವರ ಮನದಾಳದ ಮಾತು.
ಗಣಪತಿ ಎಸ್. ಹೆಗಡೆ ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಗ್ರಾಮದವರು. 1983ರಲ್ಲಿ ಅವರು ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾನಿಲಯದಿಂದ ಕಲಾ ಡಿಗ್ರಿ ಪಡೆದ ಇವರು ಕರ್ನಾಟಕ ಸರ್ಕಾರದ ಜಾಹೀರಾತು ಸಂಸ್ಥೆ ಎಂ.ಸಿ.&ಎ.ಯಲ್ಲಿ ಕಲಾವಿದನಾಗಿ ಕೆಲಸ ಪ್ರಾರಂಭಿಸಿ, ನಂತರ ಕೇಂದ್ರ ಸರ್ಕಾರದ ಉದ್ದಿಮೆಯಾದ ಬಿ.ಇ.ಎಂ.ಎಲ್. ಲಿಮಿಟೆಡ್ ಬೆಂಗಳೂರಿನಲ್ಲಿ 39 ವರ್ಷಗಳ ಸೇವೆ ಸಲ್ಲಿಸಿ ಕಳೆದ ಎಪ್ರಿಲ್ 2023ರಲ್ಲಿ ನಿವೃತ್ತಿಗೊಂಡರು. ಹೆಗಡೆಯವರ ಕಲಾತ್ಮಕ ಸೃಷ್ಟಿಗಳು ಕರ್ನಾಟಕ ಲಲಿತ ಕಲಾ ಅಕಾಡೆಮಿ ಮತ್ತು ಮೈಸೂರು ದಸರಾ ಹಾಗೂ ಚಿತ್ರಕಲಾ ಪರಿಷತ್ ದೇಶದ ನಾನಾ ಭಾಗಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಪ್ರದರ್ಶಿಸಲ್ಪಟ್ಟಿವೆ. ಅವರು ಚಿತ್ರಕಲಾ ಪರಿಷತ್‌ನಲ್ಲಿ ಏಕವ್ಯಕ್ತಿ ಪ್ರದರ್ಶನಗಳನ್ನು ಆಯೋಜಿಸಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಅನೇಕ ಸಮೂಹ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಅವರಿಗೆ ಕರ್ನಾಟಕದ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ, ರೋಟರಿ ಪ್ರಶಸ್ತಿ, ಬಿ.ಇ.ಎಂ.ಎಲ್. ರಾಜ್ಯೋತ್ಸವ ಪ್ರಶಸ್ತಿ, ರಾಜರಾಜೇಶ್ವರಿ ರತ್ನ ಪ್ರಶಸ್ತಿ, ಸಾಹಿತ್ಯ ಪರಿಷತ್ ಪ್ರಶಸ್ತಿ ಹೀಗೆ ಅನೇಕ ಸಂಘ ಸಂಸ್ಥೆಗಳ ಗೌರವ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ಕಲಾ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ.
2017ರಲ್ಲಿ ಅವರು ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. 6 ವರ್ಷಗಳ ಕಾಲ ಅಖಿಲ ಹವ್ಯಕ ಮಹಾಸಭೆಯ ಕಲಾ ವೇದಿಕೆಯ ಯೋಜಕರಾಗಿದ್ದರು. ರಾಜರಾಜೇಶ್ವರಿ ನಗರದ ಹವ್ಯಕ ಪ್ರತಿಷ್ಠಾನದ ಉಪಾಧ್ಯಕ್ಷರಾಗಿದ್ದಾರೆ
ಮತ್ತು ದಾವಣಗೆರೆ ಕಲಾಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘಟನೆಯ ಉಪಾಧ್ಯಕ್ಷರಾಗಿದ್ದಾರೆ.
2007ರಲ್ಲಿ ಹೆಗಡೆ ಕೋಬಾಲ್ಟ್ ಫೋರಂ ಆಫ್ ಆರ್ಟ್ ಅಂಡ್ ಮ್ಯೂಸಿಕ್ ಸಂಸ್ಥೆಯನ್ನು ಸ್ಥಾಪಿಸಿ, ಅನೇಕ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು, ಕಲಾಶಿಬಿರಗಳು, ಕಲಾ ಪ್ರಾತ್ಯಕ್ಷಿಕೆಗಳು, ಕಲಾಪ್ರದರ್ಶನಗಳು ಮತ್ತು ಯಕ್ಷಗಾನ, ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಸಾವಿರಾರು ಮಕ್ಕಳು ಮತ್ತು ವಯಸ್ಕರಿಗೆ ಕಲಾ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಕಲೆ ಮತ್ತು ಸಂಸ್ಕೃತಿಯನ್ನು ಬೆಳೆಸುವುದರೊಂದಿಗೆ ಹೊಸ ಹೊಸ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬಂದಿರುವುದು ಇವರ ಹೆಗ್ಗಳಿಕೆ. 2018ರಿಂದ ವಿಶೇಷವಾಗಿ, ಅವರದೇ ಆದ ಸ್ವಂತ ‘ಕೋಬಾಲ್ಟ್ ಆರ್ಟ್ ಗ್ಯಾಲರಿ’ ಸ್ಥಾಪಿಸಿದ್ದಾರೆ. ಇವರ ಕಲಾಕೃತಿಗಳು ದೇಶ ವಿದೇಶಗಳ ಸಂಗ್ರಹದಲ್ಲಿವೆ
1 Comment
Congratulations sir. We were also happy to be honored for an unexpected art service.