ಮಂಗಳೂರು : ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಸಹ ಸಂಸ್ಥೆಯಾದ ಕದ್ರಿ ಸಂಗೀತ ವಿದ್ಯಾನಿಲಯವು ದಿನಾಂಕ 03-12-2023ರಂದು ತನ್ನ 30ನೇ ವಾರ್ಷಿಕೋತ್ಸವವನ್ನು ಮಂಗಳೂರಿನ ಡಾನ್ ಬಾಸ್ಕೋ ಹಾಲಿನಲ್ಲಿ ಆಯೋಜಿಸಿತು. ಅಂದು ಸಂಸ್ಥೆಯ ಸಂಗೀತ ಗುರುಗಳಾದ ವಿದುಷಿ ಉಷಾ ಪ್ರವೀಣರ ಶಿಷ್ಯ ವೃಂದದವರಿಂದ ಸುಮಾರು ಮೂರು ಗಂಟೆಗಳ ಕಾಲ ಕರ್ನಾಟಕ ಸಂಗೀತ ಕಛೇರಿಯು ನಡೆಯಿತು. ಈ ಕಛೇರಿಗೆ ಮೃದಂಗದಲ್ಲಿ ವಿದ್ವಾನ್ ಮನೋಹರ್ ರಾವ್ ಹಾಗೂ ಪಿಟೀಲಿನಲ್ಲಿ ವಿದ್ವಾನ್ ಶ್ರೀಧರಾಚಾರ್ ಪಾಡಿಗಾರ್ ಇವರು ಸಹಕರಿಸಿದರು.
ನಂತರ ಅಂತರ್ರಾಷ್ಟ್ರೀಯ ಕಲಾವಿದರಾದ ಮೈಸೂರಿನ ಡಾಕ್ಟರ್ ವಿದುಷಿ ಸುಕನ್ಯ ಪ್ರಭಾಕರ್ ಇವರಿಂದ ಎರಡು ಗಂಟೆಗಳ ಕಾಲ ಕರ್ನಾಟಕ ಸಂಗೀತ ಕಛೇರಿಯು ನಡೆಯಿತು. ಇದರಲ್ಲಿ ಮಂಗಳೂರಿನ ಆಕಾಶವಾಣಿ ಕಲಾವಿದರಾದ ವಿದ್ವಾನ್ ಕೆ.ಎಚ್. ರವಿಕುಮಾರ್ ಮೃದಂಗದಲ್ಲಿಯೂ ಹಾಗೂ ವಿದ್ವಾನ್ ಗಣರಾಜ ಕಾರ್ಲೆಯವರು ಪಿಟೀಲಿನಲ್ಲಿಯೂ ಸಹಕರಿಸಿದರು. ಸಹ ಗಾಯಕರಾಗಿ ವಿದುಷಿ ನಿತ್ಯಶ್ರೀ ಆರ್. ಸಹಕರಿಸಿದರು. ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲ್ಪಟ್ಟ ವಿದುಷಿ ಸುಕನ್ಯಾ ಪ್ರಭಾಕರ್ ಅವರು, “72 ವರ್ಷಗಳ ನನ್ನನ್ನು ಸನ್ಮಾನಿಸಿದ ಈ ಸಂಸ್ಥೆಯು ಇನ್ನಷ್ಟು ದಿನ ಏನಾದರೂ ಸ್ವಲ್ಪ ಕೆಲಸ ಮಾಡಬಹುದು ಎಂಬ ಆಶ್ವಾಸನೆಯನ್ನು ನನಗೆ ನೀಡಿದೆ. ಇಂದು ಹಾಡಿದ ನೂರಾರು ಮಕ್ಕಳನ್ನು ಸಂಗೀತದ ಮೂಲಕ ಬೆಳೆಸಿ ಪೋಷಿಸುವ ಇಂತಹ ಸಂಸ್ಥೆಗಳ ಸಂತತಿ ಸಾವಿರವಾಗಲಿ” ಎಂದು ಹಾರೈಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೈಸೂರಿನ ‘ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್’ನ ಅಧ್ಯಕ್ಷರಾದ ಪ್ರೊಫೆಸರ್ ಕೆ. ರಾಮಮೂರ್ತಿಯವರು, “88 ವರ್ಷಗಳ ಹಿಂದೆ ಈ ಸಂಸ್ಥೆಯನ್ನು ಸ್ಥಾಪಿಸಿದ, ಕರ್ನಾಟಕದ ಶ್ರೇಷ್ಠ ನಾಟ್ಯಾಚಾರ್ಯ ಕೀರ್ತಿಶೇಷ ಶ್ರೀಯುತ ಎಸ್. ಕೃಷ್ಣರಾವ್ ಅವರ ಮಗ, ಮೊಮ್ಮಕ್ಕಳು ಸಂಗೀತ ನೃತ್ಯಗಳಿಂದ ಬೆಳಗಿಸುತ್ತಿರುವ ಈ ಸಂಸ್ಥೆಯು ‘ಸಂಗೀತ ನೃತ್ಯ ವಿಶ್ವವಿದ್ಯಾನಿಲಯ’ವಾಗಿದೆ. ಇಂದು ಈ ವೇದಿಕೆಯಲ್ಲಿ ಹಾಡಿದ ಸುಮಾರು 250 ಮಕ್ಕಳು ಸಂಖ್ಯಾಬಲವಲ್ಲದೆ ಗುಣಮಟ್ಟದಲ್ಲಿಯೂ ಶಿಸ್ತಿನಿಂದ ಹಾಡಿದ್ದಾರೆ. ಅದಕ್ಕಾಗಿ ವಿದ್ವಾನ್ ಯು.ಕೆ. ಪ್ರವೀಣ್ ಹಾಗೂ ವಿದುಷಿ ಉಷಾ ಪ್ರವೀಣ್ ದಂಪತಿಗಳನ್ನು ಅಭಿನಂದಿಸುತ್ತೇನೆ” ಎಂದರು.
ಸಮಾರಂಭದ ವೇದಿಕೆಯಲ್ಲಿ ಸಂಸ್ಥೆಯ ಸಹ ಗುರುಗಳಾದ ವಿದ್ವಾನ್ ಯು.ಪಿ. ಶರಣ್, ವಿದುಷಿ ನಿಶ್ವಿತಾ ಶರಣ್ ಹಾಗೂ ಸಂಸ್ಥೆಯ ಟ್ರಸ್ಟಿ ಶ್ರೀ ಅವನೀಶ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು, ಕಲಾವಿದರೆಲ್ಲರನ್ನು ಸಂಸ್ಥೆಯ ನಿರ್ದೇಶಕರೂ ನೃತ್ಯ ಗುರುಗಳು ಆದ ವಿದ್ವಾನ್ ಯು.ಕೆ. ಪ್ರವೀಣ್ ಸ್ವಾಗತಿಸಿ, ಸಂಗೀತ ಗುರು ಶ್ರೀಮತಿ ಉಷಾ ಪ್ರವೀಣ್ ಧನ್ಯವಾದಗಳನ್ನು ಸಮರ್ಪಿಸಿದರು. ನಂತರ ಸಂಸ್ಥೆಯ ಶಿಷ್ಯ ವೃಂದದವರಿಂದ ವೈವಿಧ್ಯಮಯ ಹಾಡುಗಳ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಈ ಎಲ್ಲಾ ಕಾರ್ಯಕ್ರಮಗಳು ಸಂಸ್ಥೆಯ ಸಂಸ್ಥಾಪಕರಾದ ಕೀರ್ತಿಶೇಷ ಶ್ರೀ ಯು.ಎಸ್. ಕೃಷ್ಣರಾಯರ 109ನೇ ಜನ್ಮದಿನದ ಸಲುವಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಡನೆ ನಡೆಯಿತು.