ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಬೊಳುವಾರು ಶ್ರೀ ಅಂಜನೇಯ ಯಕ್ಷಗಾನ ಕಲಾ ಸಂಘದ 55ರ ಸಂಭ್ರಮ ಕಾರ್ಯಕ್ರಮವು ದಿನಾಂಕ 23-12-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ “ತಾಳಮದ್ದಳೆಗೆ ಸೀಮಿತವಾಗಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘವು ತನ್ನ 55ನೇ ವರ್ಷಾಚರಿಸುವುದು ನೋಡಿದರೆ ಯಕ್ಷಗಾನ ತಾಳಮದ್ದಳೆ ಎಷ್ಟು ಪ್ರಬಲವಾದ ಮಾಧ್ಯಮ ಅನ್ನುವುದನ್ನು ತೋರಿಸಿಕೊಟ್ಟಿದೆ. ಭಾಸ್ಕರಾಚಾರ್ಯ ಅವರು ಈ ಸಂಘದ ಸಾರಥ್ಯ ವಹಿಸಿಕೊಂಡು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ. 10 ವರ್ಷಗಳ ಹಿಂದೆ ಮಹಿಳಾ ಸಂಘ ಪುತ್ತೂರಿನಲ್ಲಿ ಆರಂಭಿಸಿ ಹಲವು ಮಹಿಳಾ ಅರ್ಥಧಾರಿಗಳಿಗೆ ತರಬೇತಿ ನೀಡಿದ್ದಾರೆ. ಒಟ್ಟಿನಲ್ಲಿ ಈ ಸಂಘದಿಂದ ಯಕ್ಷಗಾನಕ್ಕೆ ಇನ್ನಷ್ಟು ಸೇವೆ ಸಿಗಲಿ” ಎಂದು ಹಾರೈಸಿದರು.
ಸ್ವರ್ಣೋದ್ಯಮಿ ಶ್ರೀ ಲಕ್ಷ್ಮೀಕಾಂತ್ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, “ಕಲಾ ಸಂಘ ಮತ್ತಷ್ಟು ಬೆಳವಣಿಗೆ ಕಾಣಲಿ” ಎಂದು ಶುಭ ಹಾರೈಸಿದರು. ಹಿರಿಯ ಯಕ್ಷಗಾನ ಕಲಾವಿದ ಡಾ. ಪ್ರಭಾಕರ ಜೋಶಿ ಮಾತನಾಡಿ, “ಈ ಕಾಲ ಯಕ್ಷಗಾನಕ್ಕೆ ಭಾಗ್ಯ. ಕಲಾವಿದರಿಗೆ ವೇದಿಕೆ ಇದೆ” ಎಂದರು. ಡಾ.ವಿದ್ವಾನ್ ವಿನಾಯಕ ಭಟ್, ಗಾಳಿಮನೆ ಅವರು ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನಾ ಮಾತುಗಳನ್ನಾಡಿದರು. ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಕಾರ್ಯದರ್ಶಿ ಶ್ರೀಮತಿ ಹರಿಣಾಕ್ಷಿ ಜೆ. ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಆ೦ಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಶ್ರೀ ಭಾಸ್ಕರ್ ಬಾರ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀ ಅಂಜನೇಯ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ ಶ್ರೀಮತಿ ಟಿ. ಪ್ರೇಮಲತಾ ರಾವ್ ಮಹಿಳಾ ಸಂಘದ ಕುರಿತು ಮಾತನಾಡಿದರು. ಸಂಘದ ಗೌರವ ಕಾರ್ಯದರ್ಶಿಗಳಾದ ಶ್ರೀ ರಂಗನಾಥ ರಾವ್, ಸಂಘದ ಜೊತೆ ಕಾರ್ಯದರ್ಶಿ ಶ್ರೀ ಅಚ್ಯುತ ಪಾಂಗಣ್ಣಾಯ, ಕೋಶಾಧಿಕಾರಿ ಶ್ರೀ ದುಗ್ಗಪ್ಪ ನಡುಗಲ್ಲು, ಉಪಾಧ್ಯಕ್ಷ ಶ್ರೀ ಪ್ರವೀಣ್ ಕುಮಾರ್, ಅ೦ಜನೇಯ ಮಹಿಳಾ ಸಂಘದ ಕಲಾವಿದೆ ಶ್ರೀಮತಿ ಕಿಶೋರಿ ದುಗ್ಗಪ್ಪ, ನಿವೃತ್ತ ಪ್ರೊ. ದಂಬೆ ಈಶ್ವರ ಶಾಸ್ತ್ರಿ ಮೊದಲಾದವರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಪೂಕಳ ಶ್ರೀ ಲಕ್ಷ್ಮೀನಾರಾಯಣ ಭಟ್ ಅವರಿಗೆ ‘ಶ್ರೀ ಯಕ್ಷಾಂಜನೇಯ ಪ್ರಶಸ್ತಿ’ ಹಾಗೂ ಅರ್ಥಧಾರಿ ಜಬ್ಬಾರ್ ಸಮೋ ಅವರಿಗೆ ‘ಶ್ರೀ ಅ೦ಜನೆಯು 55ರ ಗೌರವ’ ಪ್ರದಾನ ಮಾಡಲಾಯಿತು. ಸಂಘದ ಕೋಶಾಧಿಕಾರಿ ದುಗ್ಗಪ್ಪ ಎನ್. ವಂದಿಸಿದರು. ಶ್ರೀ ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಶ್ರೀ ಸುಬ್ಬಪ್ಪ ಕೈಕಂಬ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಶ್ರೀ ಆನಂದ ಸವಣೂರು, ಉಪಾಧ್ಯಕ್ಷ ಶ್ರೀ ಪ್ರವೀಣ್ ಬೊಳುವಾರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಆನ೦ದಾಶ್ರಮದ ಅಧ್ಯಕ್ಷೆ ಡಾ. ಗೌರಿ ಪೈ ಕಾರ್ಯಕ್ರಮಕ್ಕೆ ಬೆಳಗ್ಗೆ ಚಾಲನೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ವಿದುಷಿ ಡಾ. ಪವಿತ್ರಾ ರೂಪೇಶ್ ಅವರಿಂದ ಶಾಸ್ತ್ರೀಯ ಸಂಗೀತ, ಶ್ರೀ ಅಂಜನೇಯ ಮಹಿಳಾ ಯಕ್ಷಗಾನ ಸಂಘದ ಕಲಾವಿದರಿಂದ ಹನುಮಾನ್ ಚಾಲೀಸ್ ಮತ್ತು ‘ವೀರಮಣಿ’ ಪ್ರಸಂಗದ ತಾಳಮದ್ದಳೆ, ಕೆ. ಮಹಾಬಲ ಕೂಡ್ಲು ಇವರಿಂದ ಶರಸೇತು ಕಥಾ ಭಾಗದ ‘ಹರಿಕಥಾ ಕಾಲಕ್ಷೇಪ’, ವಿದುಷಿ ಮೇಘ ದೇವಾಡಿಗ ಪುತ್ತೂರು ಇವರಿಂದ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮಗಳು ಜರುಗಿತು.