ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಬೆಳ್ತಂಗಡಿ ಹಳೆಕೋಟೆ ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ರಮಾನಂದ ಸಾಲಿಯಾನ್ ವೇದಿಕೆಯಲ್ಲಿ ಸುವರ್ಣ ಕರ್ನಾಟಕ ಭಾಷೆ-ಸಾಹಿತ್ಯ-ಸಂಸ್ಕೃತಿ ಆಶಯದಲ್ಲಿ ಬೆಳ್ತಂಗಡಿ ತಾಲೂಕಿನ 18ನೇ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 17-12-2023ರಂದು ನಡೆಯಿತು.
ಈ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಎ. ಕೃಷ್ಣಪ್ಪ ಪೂಜಾರಿ “ಜೀವನ ಮೌಲ್ಯಗಳು ಮಾತೃ ಭಾಷೆಯಿಂದಲೇ ಬರುವುದು. ಮಾತೃಭಾಷೆಯಲ್ಲಿ ಮೂಡಿ ಬಂದ ಸಾಹಿತ್ಯ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಉದಾತ್ತವಾದ ಸಮಾಜ ನಿರ್ಮಾಣವೇ ಸಾಹಿತ್ಯದ ಮುಖ್ಯ ಕಾರ್ಯವಾಗಲಿ” ಎಂದು ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯ ನಾಗರಾಜ್ ರಾವ್ ಕಲ್ಕಟ್ಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಭಾಷೆ ಎಂಬುದು ಜ್ಞಾನದ ವಾಹಿನಿಯೇ ಹೊರತು ಭಾಷೆಯೇ ಜ್ಞಾನ ಅಲ್ಲ. ಇಂಗ್ಲೀಷ್ ನಮಗೆ ವಿದ್ಯೆಯ ಮಾಧ್ಯಮವಾಗಿರಲಿ ಹೊರತು ಸಂಸ್ಕೃತಿಯಾಗಿ ಸಲ್ಲದು. ಸತ್ವಗುಣ ರೂಪಿಸಲು ಸಾಹಿತ್ಯ ಮುಖ್ಯವಾದುದು. ಜನರ ಜೊತೆ ಬೆರೆಸುವ, ಜನರ ಮಧ್ಯೆ ಬದುಕಿಸುವ ಶಕ್ತಿ ಸಾಹಿತ್ಯದ್ದಾಗಿರಬೇಕು. ಸಾಹಿತ್ಯ ನಮ್ಮೊಳಗೆ ಇರುವ ಋಣಾತ್ಮಕ ಯೋಚನೆಗಳನ್ನು ನಾಶ ಮಾಡಬೇಕು. ಯಾರಿಗೆ ವಿಶಾಲ ಹೃದಯ ಇಲ್ಲವೋ ಆತ ಉತ್ತಮ ಕವಿ, ಸಾಹಿತಿಯಾಗಲು ಸಾಧ್ಯವಿಲ್ಲ. ಸಾಹಿತಿ ತಾನು ಬೆಳೆಯುವ ಜೊತೆ ಇನ್ನೊಬ್ಬ ಸಾಹಿತಿಯನ್ನು ಬೆಳೆಸುವಂತಿರಬೇಕು” ಎಂದರು.
ಸಾಹಿತ್ಯ ಸಮ್ಮೇಳನದ ವಿಶೇಷ ಸಂಚಿಕೆ ‘ಚಾರುಮುಡಿ’ಯನ್ನು ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಹರೀಶ್ ಪೂ೦ಜ, “ಕನ್ನಡ ಸಾಹಿತ್ಯಗಳ ಮೂಲಕ ಕರ್ನಾಟಕ ಒಂದಾಗಿದೆಯೇ ಹೊರತು ರಾಜಕಾರಣದಿಂದಲ್ಲ. ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ ಕೆಲಸವನ್ನು ಸಾಹಿತಿಗಳು ಮಾಡುತ್ತಾ ಬಂದಿದ್ದಾರೆ. ಬೆಳ್ತಂಗಡಿ ತಾಲೂಕಿನವರಾದ ಲೀಲಾವತಿಯಂತ ಕಲಾವಿದೆಯಿಂದ ಸಾಹಿತ್ಯದ ಭಾಗವಾದ ಕಲೆಗೆ ಅಪಾರ ಕೊಡುಗೆಯಿದೆ” ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ ಶುಭ ಹಾರೈಸಿದರು. ಜ್ಞಾನಪೀಠ ಪುರಸ್ಕೃತರಾಗಿರುವ ಎಂಟು ಮಂದಿ ಸಾಹಿತ್ಯ ಲೋಕದ ದಿಗ್ಗಜರ ನೆನಪು, ‘ಸುವರ್ಣ ಕರ್ನಾಟಕ : ಭಾಷೆ-ಸಾಹಿತ್ಯ-ಸಂಸ್ಕೃತಿ’ ಸಂವಾದ ಗೋಷ್ಠಿ ಮತ್ತು ಬೆಳ್ತಂಗಡಿ ತಾಲೂಕು ಪದವಿ ಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ‘ಯುವ ಕವಿಗೋಷ್ಠಿ’ ನಡೆಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಶಾಲಪ್ಪ ಗೌಡ, ಬೆಳ್ತಂಗಡಿ ಚಿಕಿತ್ಸಾ ಫಾರ್ಮ್ ನ ಶ್ರೀಶ ಮುಚ್ಚಿನ್ನಾಯ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಸಮಿತಿ ಸದಸ್ಯ ಡಾ. ಎಂ.ಕೆ. ಮಾಧವ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಜೇಶ್ವರೀ, ತಾಲೂಕು ಘಟಕದ ಗೌರವ ಕಾರ್ಯದರ್ಶಿ ಪ್ರಮೀಳಾ, ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಮಂಗಳೂರು ಘಟಕದ ಮಂಜುನಾಥ್ ಎಸ್. ರೇವಣ್ಕರ್, ಸಮ್ಮೇಳನ ಸಂಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೋಹನ ಗೌಡ ಕೊಯ್ಯೂರು, ಕೋಶಾಧಿಕಾರಿ ಮೀನಾಕ್ಷಿ ಎನ್. ಗುರುವಾಯನಕೆರೆ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಉಡುಪಿಯ ಕಲಾಮಯಂ ತಂಡದವರಿಂದ ಜನಪದ ನೃತ್ಯ, ಸಂಗೀತ ಮತ್ತು ವಾದ್ಯ ಪರಿಕರಗಳ ಸಮ್ಮಿಲನ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಸಮ್ಮೇಳನ ಸಂಯೋಜನಾ ಸಮಿತಿಯ ಅಧ್ಯಕ್ಷ ಜಯಾನಂದ ಗೌಡ ಸ್ವಾಗತಿಸಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಡಿ. ಯದುಪತಿ ಗೌಡ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಆಶಯ ನುಡಿಗಳನ್ನಾಡಿದರು. ಶಿಕ್ಷಕ ದೇವುದಾಸ್ ನಾಯಕ್ ಸಮ್ಮೇಳನ ಅಧ್ಯಕ್ಷರನ್ನು ಪರಿಚಯಿಸಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ವಂದಿಸಿ, ಮಹಾವೀರ ಜೈನ್ ಇಚ್ಲಂಪಾಡಿ ಮತ್ತು ವಸಂತಿ ಮುಂಡಾಜೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.