ಉಡುಪಿ : ಅಂಬಲಪಾಡಿಯ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಳದ ಆಶ್ರಯದಲ್ಲಿ ರಂಗಭೂಮಿ ಉಡುಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಕಾರದಲ್ಲಿ ಆಯೋಜಿಸಲಾದ ಎರಡು ದಿನಗಳ ನೀನಾಸಂ ತಿರುಗಾಟದ ನಾಟಕಗಳ ಪ್ರದರ್ಶನ ‘ಅಂಬಲಪಾಡಿ ನಾಟಕೋತ್ಸವ -2023’ವು ದೇವಳದ ಬಯಲು ರಂಗ ಮಂದಿರದಲ್ಲಿ ದಿನಾಂಕ 31-12-2023ರಂದು ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ಎನ್.ಬಿ. ವಿಜಯ ಬಲ್ಲಾಳ್ ಇವರು ಉದ್ಘಾಟಿಸಿ ಮಾತನಾಡಿ “ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಜನರನ್ನು ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ರಂಗಭೂಮಿಯ ಕೊಡುಗೆ ಅಪಾರ. ಜಗದೀಶನಾಡುವ ಜಗವೇ ನಾಟಕ ರಂಗ ಎಂದು ದಾಸರ ಹಾಡಿನಂತೆ ನಾಟಕಗಳ ಕಥಾ ವಸ್ತುಗಳು ಜನರ ಬದುಕಿನ ನಾನಾ ರೀತಿಯ ಘಟನೆಗಳಲ್ಲಿ ಹಾಸುಹೊಕ್ಕಾಗಿರುವುದರಿಂದ ಸಮಾಜದ ಅಂಕುಡೊಂಕುಗಳ ಬಗ್ಗೆ ನಾಟಕಗಳು ವಿಮರ್ಶೆ ಮಾಡುತ್ತವೆ. ಜನರಲ್ಲಿ ಸಮಾಜಕ್ಕೆ ಬೇಕಾದ ಒಳಿತು ಕೆಡುಕನ್ನು ನಿರ್ಧರಿಸುವಲ್ಲಿ ಜಾಗೃತಿ ಮೂಡಿಸುತ್ತವೆ. ಬ್ರಿಟಿಷರ ಕಾಲದಲ್ಲಿಯೂ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸಲು ಇದೇ ನಾಟಕಗಳು ಕಾರಣವಾಗಿದ್ದವು. ಅಂಬಲಪಾಡಿ ದೇವಳದ ಹಿಂದಿನ ಧರ್ಮದರ್ಶಿ ತಮ್ಮ ತಂದೆ, ದಿ. ಎನ್.ಬಿ. ಅಣ್ಣಾಜಿ ಬಲ್ಲಾಳರಿಗೆ ನಾಟಕ, ಯಕ್ಷಗಾನ, ಗಮಕಗಳ ಬಗ್ಗೆ ವಿಶೇಷ ಆಸಕ್ತಿ ಇತ್ತು. ಅವರ ಸ್ಮರಣಾರ್ಥ ಈ ನಾಟಕೋತ್ಸವವನ್ನು ಹಮ್ಮಿಕೊಂಡಿರುವುದು ತುಂಬಾ ಸಂತೋಷ ತಂದಿದೆ. ದೇವಳದ ಆ ಪರಿಸರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವ ಹಾಗೆ ಒಂದು ಸುಸಜ್ಜಿತ ಬಯಲು ರಂಗ ಮಂದಿರ ನಿರ್ಮಾಣದ ಚಿಂತನೆ ಇದೆ” ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತಾನಾಡಿ, “ರಂಗಭೂಮಿ ಉಡುಪಿ ಸಂಸ್ಥೆ ಪ್ರತೀ ವರ್ಷ 22ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಯುವ ಜನರಲ್ಲಿ ರಂಗಾಸಕ್ತಿಯನ್ನು ಬೆಳೆಸುತ್ತಿದೆ. ಇದೇ ಪ್ರಪ್ರಥಮ ಬಾರಿಗೆ ಸಂಪೂರ್ಣ ರಾಮಾಯಣವನ್ನು ರಂಗಭೂಮಿಯಲ್ಲಿ ಆಡಿ ತೋರಿಸುವ ವಿಭಿನ್ನ ಪ್ರಯೋಗಕ್ಕೆ ರಂಗಭೂಮಿ ಸಂಸ್ಥೆ ಮುಂದಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಪ್ರೊ. ಆರ್.ಎಲ್. ಭಟ್ ಅವರಿಗೆ ರಂಗ ಸನ್ಮಾನ ನಡೆಯಿತು. ಕಾರ್ಯಕ್ರಮದಲ್ಲಿ ಟ್ಯಾಕ್ಸ್ ಕನ್ಸಲ್ಟೆಂಟ್ ಬಿ.ಎಮ್. ಭಟ್ ಹಾಗೂ ಎ.ಜೆ. ಅಸೋಸಿಯೇಟ್ಸ್ ಉಡುಪಿ ಸಂಸ್ಥೆಯ ಆರ್ಕಿಟೆಕ್ ಹಾಗೂ ಇಂಜಿನಿಯರ್ ಎಂ. ಗೋಪಾಲ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ರಂಗಭೂಮಿ ಉಡುಪಿಯ ಉಪಾಧ್ಯಕ್ಷರುಗಳಾದ ವಾಸುದೇವ ರಾವ್ ಹಾಗೂ ರಾಜಗೋಪಾಲ್ ಉಪಸ್ಥಿತರಿದ್ದರು.
ರಂಗಭೂಮಿ ಉಡುಪಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಲಕ್ಷ್ಮೀನಾರಾಯಣ ಕೊಡವೂರು ಸನ್ಮಾನಿತರನ್ನು ಪರಿಚಯಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಾಟಕಕಾರ ಚಂದ್ರಶೇಖರ್ ಕಂಬಾರ ರಚನೆಯ ಕೆ.ಜಿ. ಕೃಷ್ಣಮೂರ್ತಿ ನಿರ್ದೇಶನದ ನೀನಾಸಂ ತಿರುಗಾಟದ ನಾಟಕ ‘ಹುಲಿಯ ನೆರಳು ‘ಪ್ರದರ್ಶನಗೊಂಡಿತು.