ಕಾಸರಗೋಡು : ಕಾಸರಗೋಡಿನ ಸಿರಿಬಾಗಿಲಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದಿಂದ ನಿರ್ಮಿಸಲ್ಪಟ್ಟ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನವು ದಿನಾಂಕ 26-12-2023ರಂದು ಲೋಕಾರ್ಪಣೆಗೊಂಡಿತು. ಗಡಿನಾಡ ಕವಿ, ಪಾರ್ತಿ ಸುಬ್ಬರ ಯಕ್ಷ ಪ್ರಸಂಗಗಳನ್ನು ತಾಳೆ ಗರಿಗಳಲ್ಲಿ ಸಂಗ್ರಹಿಸಿ ಪುಸ್ತಕ ರೂಪಕ್ಕಿಳಿಸಿದ ಮಹಾನುಭಾವ ದಿ. ಸಿರಿಬಾಗಿಲು ವೆಂಕಪ್ಪಯ್ಯರ ಸ್ಮರಣಾರ್ಥ ಅವರ ಮಗ ಧರ್ಮಸ್ಥಳ ಮೇಳದ ಮುಖ್ಯ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರ ಭಗೀರಥ ಯತ್ನದ ಫಲ ಈ ಭವ್ಯ ಭವನ. ಯಕ್ಷಗಾನೀಯ ಮತ್ತು ಇನ್ನಿತರ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೇಂದ್ರವನ್ನಾಗಿಸಬೇಕೆಂಬ ಮಹದಾಸೆಯಿಂದ ನಿರ್ಮಾಣಗೊಂಡ ಈ ಭವನದಲ್ಲಿ ಸುಸಜ್ಜಿತವಾದ ಸಭಾಂಗಣ, ಗ್ರಂಥಾಲಯ, ಮ್ಯೂಸಿಯಂ, ವಿಶ್ರಾಂತಿ ಕೊಠಡಿಗಳಿದ್ದು ಈಗಾಗಲೇ ಇಲ್ಲಿ ಅನೇಕ ಕಾರ್ಯಕ್ರಮಗಳು ನಡೆದಿವೆ.
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಭವನವನ್ನು ದೀಪ ಪ್ರಜ್ವಲನಗೊಳಿಸಿ, ದಿ. ವೆಂಕಪ್ಪಯ್ಯರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಲೋಕಾರ್ಪಣೆಗೊಳಿಸಿದರು. “ಕಾಸರಗೋಡು ಯಕ್ಷಗಾನಕ್ಕೆ ಅನೇಕ ಕಲಾವಿದರನ್ನು ಕೊಡುಗೆಯನ್ನಾಗಿ ನೀಡಿದ ನೆಲ. ಧರ್ಮಸ್ಥಳ ಮೇಳದಲ್ಲೂ ಇಲ್ಲಿನವರು ಅನೇಕರು ಇದ್ದರು, ಈಗಲೂ ಇದ್ದಾರೆ. ಇಂತಹ ನೆಲದಲ್ಲಿ ಯಕ್ಷಗಾನಕ್ಕೆ ಒಂದು ಭವನ ನಿರ್ಮಾಣ ಆಗಿರುವುದು ಸಂತಸದ ವಿಚಾರ. ಸರ್ವಾಂಗ ಸುಂದರ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಎಡನೀರು ಮಠದ ಹಿರಿಯ ಯತಿಗಳಾದ ಬ್ರಹ್ಮೈಕ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತಿಯವರ ಯಕ್ಷಗಾನೀಯವಾದ ಕೊಡುಗೆ ಬಹಳ ಮಹತ್ವಪೂರ್ಣವಾದುದು. ಎಲ್ಲಾ ಯಕ್ಷಗಾನ ಕಲಾವಿದರಿಗೆ ಅವರ ಮಠ ಶ್ರೇಷ್ಠ ಆಶ್ರಯತಾಣ ಆಗಿತ್ತು. ಪಾರ್ತಿ ಸುಬ್ಬರ ಪ್ರತಿಮೆಯನ್ನು ಸ್ಥಾಪಿಸಿ ಅವರ ನೆನಪು ಶಾಶ್ವತ ಆಗುವಂತೆ ಮಾಡಿದುದು ಶ್ಲಾಘನೀಯವಾದ ಕಾರ್ಯ. ಈ ಕೇಂದ್ರದಿಂದ ಯಕ್ಷಗಾನ ಮುಂದಿನ ಪೀಳಿಗೆಗೆ ವರ್ಗಾಯಿಸುವ ಕಾರ್ಯ ಸಮರ್ಥವಾಗಿ ನಡೆಯಲಿ. ಸದ್ಯಕ್ಕೆ ಯಕ್ಷ ಪ್ರದರ್ಶನಗಳು ಕಾಳಮಿತಿಯಲ್ಲಿ ನಡೆಯುತ್ತಿವೆ. ಮುಂದೆ ಅಗತ್ಯ ಬಂದರೆ ಪೂರ್ಣ ರಾತ್ರಿಯೂ ಆಗಬಹುದು” ಎಂದು ಡಾ. ಹೆಗ್ಗಡೆಯವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಅನುಗ್ರಹ ನುಡಿಯನ್ನು ನುಡಿದರು. ಈ ಸಂದರ್ಭದಲ್ಲಿ ಹೆಗ್ಗಡೆಯವರನ್ನು ಪ್ರತಿಷ್ಠಾನದ ಮತ್ತು ಊರ ಸಂಘ ಸಂಸ್ಥೆಗಳ ವತಿಯಿಂದ ವಿಜೃಂಭಣೆಯಿಂದ ಸನ್ಮಾನಿಸಲಾಯಿತು ಮತ್ತು ನೆನಪಿನ ಕಾಣಿಕೆಯಾಗಿ ರಜತ ನಿರ್ಮಿತ ಮೋದಕದ ಹಾರವನ್ನು ಸಮರ್ಪಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರತಿಷ್ಠಾನದಿಂದ ಪ್ರಕಾಶಿಸಲ್ಪಟ್ಟ ಏಳು ಪುಸ್ತಕಗಳು ಬಿಡುಗಡೆಗೊಂಡವು. ಗತಿಸಿದ ಯಕ್ಷಗಾನ ಕಲಾವಿದರ ಕುರಿತ ಮರೆಯಲಾರದ ಮಹಾನುಭಾವರು 4 ಸಂಚಿಕೆಗಳು, ವಿದ್ವಾಂಸ ಶ್ರೀ ಕೊಕ್ಕಡ ವೆಂಕಟರಮಣ ಭಟ್ಟರ ಸರಿಕನ್ನಡ – ಸರಿಗನ್ನಡ, ಸಿರಿಬಾಗಿಲು ಕೃತಿ ಸಂಪುಟ, ಯುವಕವಿ ಕು.ಶ್ರದ್ದಾ ಹೊಳ್ಳರ ಕವನ ಸಂಕಲನಗಳನ್ನು ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿಯವರು ಮತ್ತು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಯತಿಗಳು ಲೋಕಾರ್ಪಣೆಗೊಳಿಸಿದರು. ಯಕ್ಷದರ್ಶಿನಿಯ ಉದ್ಘಾಟನೆಯನ್ನು ಮುಂಬೈ ಹೇರಂಬ ಇಂಡಸ್ಟ್ರೀಸ್ ಮಾಲಕರಾದ ಶ್ರೀ ಸದಾಶಿವ ಶೆಟ್ಟಿ ಕೂಳೂರು, ಕನ್ಯಾನ ನೆರವೇರಿಸಿ ಪ್ರತಿಷ್ಠಾನದ ಸರ್ವ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು. ಗ್ರಂಥಾಲಯಕ್ಕೆ ಅಹ್ಮದ್ ನಗರದ ಉದ್ಯಮಿಗಳಾದ ಶ್ರೀ ಕೆ.ಕೆ.ಶೆಟ್ಟಿ ಅವರು ಚಾಲನೆ ನೀಡಿದರು. ಮರೆಯಲಾರದ ಮಹಾನುಭಾವರ ಛಾಯಾಚಿತ್ರ ಫಲಕವನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಅನಾವರಣಗೊಳಿಸಿದರು. ಗಡಿನಾಡ ಅಭಿವೃದ್ದಿ ಪ್ರಾಧಿಕಾರದ ಫಲಕವನ್ನು ಪ್ರಾಧಿಕಾರದ ನಿರ್ದೇಶಕ ಶ್ರೀ ಪ್ರಕಾಶ್ ಮತ್ತಿಹಳ್ಳಿ ಅನಾವರಣಗೊಳಿಸಿದರು.
ಕೊಂಡೆವೂರು ಮಠಾಧೀಶ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಕಾಸರಗೋಡು ವಿಧಾನಸಭಾ ಸದಸ್ಯ ಶ್ರೀ ಎನ್.ಎ. ನೆಲ್ಲಿಕ್ಕುನ್ನು, ಮಂಜೇಶ್ವರ ವಿಧಾನಸಭಾ ಸದಸ್ಯ ಶ್ರೀ ಎ.ಕೆ.ಯಂ. ಆಶ್ರಫ್, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ ಕಲ್ಕೂರ ಮತ್ತಿತರ ಗಣ್ಯರು ಪಾಲ್ಗೊಂಡರು.
ಪ್ರತಿಷ್ಠಾನ ಸಂಚಾಲಕ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕಲಾವಿದ ರಾಧಾಕೃಷ್ಣ ಕಲ್ಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಸ್ವಾಗತ ಸಮಿತಿ ಸಂಚಾಲಕ ಡಾ.ಜಯಪ್ರಕಾಶ ನಾರಾಯಣ ಸರ್ವರನ್ನೂ ಸ್ವಾಗತಿಸಿದರು. ದಾಮೋದರ ಶರ್ಮ ಮತ್ತು ರಾಜಾರಾಮ ರಾವ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಾ. ಶ್ರುತಕೀರ್ತಿರಾಜ, ಯೋಗೀಶ ರಾವ್ ಚಿಗುರುಪಾದೆ ಧನ್ಯವಾದ ಸಮರ್ಪಣೆ ಮಾಡಿದರು. ಸಂಜೆ ಧರ್ಮಸ್ಥಳ ಮೇಳದವರಿಂದ ‘ನಂದಿ-ನಂದಿನಿ’ ಎಂಬ ಯಕ್ಷಗಾನ ಸೇವಾ ರೂಪವಾಗಿ ಪ್ರದರ್ಶನಗೊಂಡಿತು.
ಮ್ಯೂಸಿಯಂನಲ್ಲಿ ಯಕ್ಷಗಾನ ವೇಷದ ಗೊಂಬೆಗಳನ್ನು, ಚೌಕಿಯ ಸಾಂಕೇತಿಕ ವ್ಯವಸ್ಥೆಯನ್ನು, ಪಾರ್ತಿ ಸುಬ್ಬರ ಮೂರ್ತಿಯನ್ನು ಅದ್ಭುತವಾದ ವ್ಯವಸ್ಥೆಯೊಳಗೆ ಸ್ಥಾಪಿಸಲಾಗಿದೆ. ತೆಂಕುತಿಟ್ಟು ಪಾತ್ರಗಳ ಗೊಂಬೆಗಳಲ್ಲಿ ಪಾರಂಪರಿಕ ಬಣ್ಣಗಾರಿಕೆಯನ್ನು ಕಾಣಬಹುದು ಮತ್ತು ಪಾತ್ರಗಳಿಗೆ ಅನುಗುಣವಾದ ಪ್ರಸಾದನಗಳನ್ನೂ ಕಾಣಬಹುದು. ಇದು ಭವಿಷ್ಯದ ಅಧ್ಯಯನಕಾರರಿಗೆ ಒಳ್ಳೆಯ ಆಕರವಾಗಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಗ್ರಂಥಾಲಯದಲ್ಲೂ ಬಹಳಷ್ಟು ಅಧ್ಯಯನ ಯೋಗ್ಯ ಪುಸ್ತಕಗಳ ಸಂಗ್ರಹ ಇದೆ.
ಪ್ರತಿಷ್ಠಾನದ ಪ್ರಕಾಶಿಸಲ್ಪಟ್ಟ ಪುಸ್ತಕ ಮಾಲಿಕೆ ‘ಮರೆಯಲಾರದ ಮಹಾನುಭಾವರು’ ಎಲ್ಲಾ ದೃಷ್ಟಿಯಿಂದಲೂ ಸಂಗ್ರಹ ಯೋಗ್ಯವಾದ ಪುಸ್ತಕ. ಸುಮಾರು 1860ರಿಂದ ಆಗಿ ಹೋದ ತೆಂಕು-ಬಡಗಿನ ಸುಮಾರು 230 ಕಲಾವಿದರ ಸಮಗ್ರ ವಿವರಗಳು ಅವರ ಭಾವಚಿತ್ರದೊಂದಿಗೆ ಈ ಪುಸ್ತಕಗಳಲ್ಲಿ ದಾಖಲೆಯಾಗಿವೆ. ಜೊತೆಗೆ ಅಷ್ಟೂ ಕಲಾವಿದರ ಬೃಹತ್ ಭಾವಚಿತ್ರಗಳು ಭವನದ ಗೋಡೆಗಳಲ್ಲಿ ರಾರಾಜಿಸುತ್ತಿವೆ. ಖಂಡಿತವಾಗಿಯೂ ಯಕ್ಷಗಾನದ ಸಮಗ್ರ ಅಧ್ಯಯನಕ್ಕೆ ಭವಿಷ್ಯದಲ್ಲಿ ಈ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ಒಂದು ಭದ್ರ ಕೇಂದ್ರವಾಗಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.