ಮಂಗಳೂರು : ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಆಯೋಜಿಸಿದ 9ನೇ ವಚನ ಸಂಭ್ರಮ ಕಾರ್ಯಕ್ರಮ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಮಕ್ಕಳಿಗೆ ವಚನಕಾರರು ಸಮಾಜಕ್ಕೆ ನೀಡಿದ ಕೊಡುಗೆ’ ಎಂಬ ವಿಷಯದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮವು ದಿನಾಂಕ 30-12-2023 ರಂದು ಮಂಗಳೂರಿನ ಕೊಡಿಯಲ್ ಬೈಲಿನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆಯವರು ಮಾತನಾಡಿ “ವಚನಗಳು ಮನುಷ್ಯನ ಮನಸ್ಸನ್ನು ಶುದ್ಧಿಗೊಳಿಸುವ ಸರಳ ನುಡಿಗಳು ಇದರ ಸಾರ ಸರ್ವರಲ್ಲಿ ಬೆರೆಯಲಿ. ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರ ಮತ್ತು ತುಳು ಪರಂಪರೆಯ ಸಂಶೋಧನೆಗೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರನ್ನು ಗೌರವಪೂರ್ಣವಾಗಿ ಸನ್ಮಾನಿಸಲಾಯಿತು.
ಬೆಸೆಂಟ್ ಕಾಲೇಜಿನ ಪ್ರಾಧ್ಯಾಪಕರಾದ ಶ್ರಿ ರವಿರಾಜ್ ಇವರು ವಚನಕಾರರು ಸಮಾಜಕ್ಕೆ ಕೊಟ್ಟಿರುವ ಕೊಡುಗೆಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. “ಜಾತಿಭೇದಗಳನ್ನು ತೊಡೆದು ಹಾಕಲು ಮತ್ತು ಸ್ತ್ರೀ ಪುರುಷ ಸಮಾನತೆ ಬಗ್ಗೆ ವಚನಕಾರರು 12ನೇ ಶತಮಾನದಲ್ಲಿ ಸಾಹಿತ್ಯದ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರುವ ಪ್ರಯತ್ನವನ್ನು ಮಾಡಿದರು.” ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಕೀಲೆ ಶ್ರೀಮತಿ ಕವಿತಾ ಮುರುಗೇಶ್ ಮಾತನಾಡಿ “ವಚನಕಾರರ ಕೊಡುಗೆಗಳು ಅಮೂಲ್ಯ ಅವರ ಜೀವನ ಪದ್ಧತಿ ನಮ್ಮ ನಡೆಯಲ್ಲಿ ಬರಬೇಕು” ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀಮತಿ ಪೂರ್ಣಿಮಾ ಮಾತನಾಡಿ ಶಿಕ್ಷಣ ಇಲಾಖೆಯಿಂದ ಸಂಘಕ್ಕೆ ಸಹಕಾರ ನೀಡುವುದಾಗಿ ಶುಭ ಹಾರೈಸಿದರು. ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಶ್ರೀಮತಿ ಮಾಲತಿ ಶೆಟ್ಟಿ ಮಾಣೂರು ಅವರು ಸಂಘದ ಕಾರ್ಯ ವೈಖರಿಯು ಶ್ಲಾಘನೀಯ ಎಂದು ಶುಭನುಡಿದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸಂಘದ ಅಧ್ಯಕ್ಷ್ಯೆ ಸುಮಾ ಅರುಣ್ ಮಾನ್ವಿಯವರು ವಚನಕಾರರು 12ನೇ ಶತಮಾನದಲ್ಲಿ ಮಾಡಿದ ಸಾಮಾಜಿಕ ಕ್ರಾಂತಿ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. “ಇಂದಿನ ಬದಲಾದ ಸಮಾಜ ಅಂದು ವಚನಕಾರರು ಹಾಕಿಕೊಟ್ಟ ತಳಹದಿ. ವಚನಗಳ ಸಾರವನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಸಾತ್ವಿಕ ಜೀವನವನ್ನು ನಡೆಸಬಹುದು.“ ಎಂದು ಅಭಿಪ್ರಾಯಪಟ್ಟರು. ಪ್ರತಿ ವರ್ಷ ಸಂಘದ ವತಿಯಿಂದ ನಡೆಸುವ ವಚನಗಳಿಗೆ ಸಂಬಂಧಿಸಿದಂತೆ ಸ್ಪರ್ಧೆ ಮತ್ತು ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದರು.
ವಿವಿಧ ಶಾಲೆಗಳಿಂದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಎಸ್. ಡಿ. ಎಮ್ ಮಂಗಳ ಜ್ಯೋತಿ ಶಾಲೆಯ ಶ್ರೀ ಭರತ್ ಕುಮಾರ್ ವಾಮಂಜೂರು, ದ್ವಿತೀಯ ಬಹುಮಾನವನ್ನು ಕೊಣಾಜೆಯ ವಿಶ್ವಮಂಗಳ ಹೈಸ್ಕೂಲ್ ಮಂಗಳ ಗಂಗೋತ್ರಿಯ ಕುಮಾರಿ ಶ್ರೇಯ. ಸಿ., ಹಾಗೂ ತೃತಿಯ ಬಹುಮಾನವನ್ನು ಹಂಪನಕಟ್ಟೆಯ ಸರಕಾರಿ ಅಭ್ಯಾಸಿ ಪ್ರೌಢಶಾಲೆಯ ಕುಮಾರಿ ಶರಣ್ಯ ಇವರು ಗಳಿಸಿದರು.
ಸಭಾಕಾರ್ಯಕ್ರಮದ ಬಳಿಕ ಸುಮಂಗಲಾ ಕಲಾತಂಡದಿಂದ ವಚನ ಗಾಯನ ಮತ್ತು ವಿವಿಧ ವಚನ ನೃತ್ಯಾವಳಿಗಳು ನಡೆದವು.
ಕಾರ್ಯಕ್ರಮದಲ್ಲಿ ಶ್ರೀಮತಿ ಆಶಾ ಜಯದೇವ್ ಸ್ವಾಗತಿಸಿ, ಶ್ರೀಮತಿ ಸುರೇಖಾ ಯಾಳವಾರ ನಿರೂಪಿಸಿ, ಶ್ರೀಮತಿ ಉಮಾ ಪಾಲಾಕ್ಷಪ್ಪ ಧನ್ಯವಾದ ಅರ್ಪಿಸಿದರು.
ಸಂಘದ ಗೌರವ ಸಲಹೆಗಾರರಾದ ಶ್ರೀಮತಿ ಸುನಂದ ಕನ್ಹಾಹಿ, ಸಂಘದ ಪದಾಧಿಕಾರಿಗಳಾದ ಶ್ರೀಮತಿಯರಾದ ಜಯಶ್ರೀ ಮಂಜುನಾಥ, ಗೀತಾ ಕಾಳಗಿ, ಅನುಪಮ, ಶೋಭಾ ಎಂ, ಚಂದ್ರಕಲಾ ಕಬೂರ್ ಮತ್ತು ಸರ್ವ ಸದಸ್ಯರು ಪಾಲ್ಗೊಂಡಿದ್ದರು.