ಕಾಸರಗೋಡು : ಮಾಯ್ಪಾಡಿಯ ಡಯಟ್ ವಿದ್ಯಾಸಂಸ್ಥೆಯ TTC ವಿದ್ಯಾರ್ಥಿಗಳಿಗೆ ರಂಗಚಿನ್ನಾರಿಯ ಸಂಗೀತ ಘಟಕ ಸ್ವರಚಿನ್ನಾರಿಯು ಏರ್ಪಡಿಸಿದ ಒಂದು ದಿನದ ಕನ್ನಡ ನಾಡಗೀತೆ -ಭಾವಗೀತೆಗಳ ಕಲಿಕಾ ಶಿಬಿರ ‘ಕನ್ನಡ ಧ್ವನಿ’ ದಿನಾಂಕ 06-01-2024ರ ಶನಿವಾರದಂದು ನಡೆಯಿತು.
ಕಾರ್ಯಕ್ರಮವನ್ನು ಡಯಟ್ ಮಾಯ್ಪಾಡಿಯ ಪ್ರಾoಶುಪಾಲರು ಶ್ರೀ ಡಾ ಕೆ ರಘುರಾಮ್ ಭಟ್ ಉಧ್ಘಾಟಿಸಿ ಮಾತನಾಡುತ್ತಾ “ಕಾಸರಗೋಡಿನ ಕನ್ನಡಿಗರು ತಮ್ಮ ಮಾತೃಭಾಷೆಯನ್ನು ಗೌರವಿಸಿ ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಇಂತಹ ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅನಿವಾರ್ಯ ಮತ್ತು ರಂಗಚಿನ್ನಾರಿಯು ಈ ಕೆಲಸವನ್ನು ಮಾಡುತ್ತಿರುವುದು ಪ್ರಶಂಸನೀಯ. ಮುಂದೆಯೂ ವಿವಿಧ ಕನ್ನಡ ಕಾರ್ಯಕ್ರಮಗಳಿಗೆ ಸಂಸ್ಥೆ ಮುಕ್ತ ಬೆಂಬಲ ನೀಡಲಿದೆ.” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಂಗಚಿನ್ನಾರಿ ನಿರ್ದೇಶಕರಲ್ಲಿ ಓರ್ವರಾದ ಶ್ರೀ ಕೆ ಸತೀಶ್ಚಂದ್ರ ಭಂಡಾರಿ ಮಾತನಾಡಿ ರಂಗಚಿನ್ನಾರಿಯ ಹುಟ್ಟಿನ ಉದ್ದೇಶ ಹಾಗೂ ಇದುವರೆಗೆ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡ ಶ್ರಮವನ್ನು ನೆನಪಿಸುತ್ತಾ “ವಿದ್ಯಾರ್ಥಿಗಳು ಭಾಷಾಭಿಮಾನ ಮತ್ತು ವಿದ್ಯೆ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಮುನ್ನಡೆಯಿರಿ.” ಎಂದು ಕಿವಿಮಾತನ್ನು ಹೇಳಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಡಯಟ್ ಸಂಸ್ಥೆಯ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ರಂಗಚಿನ್ನಾರಿ ನಿರ್ದೇಶಕರು ಶ್ರೀ ಸತ್ಯನಾರಾಯಣ ಕೆ, ಶಿಬಿರ ನಿರ್ದೇಶಕರು ಮತ್ತು ಗಾಯಕರಾದ ಶ್ರೀ ಕಿಶೋರ್ ಪೆರ್ಲ ಹಾಗೂ ಪ್ರತಿಜ್ಞಾ ರಂಜಿತ್ ಉಪಸ್ಥಿತರಿದ್ದರು. ಸಭೆಯ ನಂತರ ಸುಮಾರು 44 ವಿದ್ಯಾರ್ಥಿಗಳಿಗೆ ಕನ್ನಡ ನಾಡಗೀತೆ ಹಾಗೂ ಒಂದು ಕನ್ನಡ ಭಾವಗೀತೆಯನ್ನು ಕರೋಕೆ ಜೊತೆ ಹಾಡುವುದನ್ನು ಕಿಶೋರ್ ಪೆರ್ಲ ಮತ್ತು ಪ್ರತಿಜ್ಞಾ ರಂಜಿತ್ ತರಬೇತಿ ನೀಡಿದರು. ತುಳು ಸಂಶೋಧಕ ಸಾಹಿತಿ ಅಮೃತಸೋಮೇಶ್ವರ ಅವರ ನಿಧನಕ್ಕೆ ರಂಗಚಿನ್ನಾರಿ ನಾರಿಚಿನ್ನಾರಿ ಹಾಗೂ ಸ್ವರಚಿನ್ನಾರಿ ಪರವಾಗಿ ಮೌನ ಪ್ರಾರ್ಥನೆಯ ಮೂಲಕ ಸಂತಾಪ ವ್ಯಕ್ತಪಡಿಸಲಾಯಿತು. ಸ್ವರಚಿನ್ನಾರಿಯ ಸಕ್ರಿಯ ಸದಸ್ಯರು ಶ್ರೀಮತಿ ಬಬಿತಾ ಆಚಾರ್ಯ ಮತ್ತು ಶ್ರೀಮತಿ ಅಕ್ಷತಾ ಪ್ರಕಾಶ್ ಉಪಸ್ಥಿತರಿದ್ದರು. ಶಿಬಿರದ ಕೊನೆಗೆ ವಿದ್ಯಾರ್ಥಿಗಳು ತಮ್ಮ ಅನುಭವ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಮತ್ತು ಕೆಲವು ಕನ್ನಡ ಭಾವಗೀತೆಗಳನ್ನು ಹಾಡಿ ಕಾರ್ಯಕ್ರಮವನ್ನು ಮುಕ್ತಯಗೊಳಿಸಲಾಯಿತು.
ಸ್ವರಚಿನ್ನಾರಿಯ ಅಧ್ಯಕ್ಷರಾದ ಶ್ರೀ ಪುರುಷೋತ್ತಮ್ ಕೊಪ್ಪಲ್ ಸ್ವಾಗತಿಸಿ, ರಂಗಚಿನ್ನಾರಿ ನಿರ್ದೇಶಕರು ಖ್ಯಾತ ರಂಗಕರ್ಮಿ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕ ನುಡಿಯ ಜೊತೆ ಸಭೆಯನ್ನು ನಿರ್ವಹಿಸಿ ವಂದಿಸಿದರು.