ಕಾಸರಗೋಡು : ಕಾಸರಗೋಡು ಜಿಲ್ಲೆಯ ಪುರಾಣ ಪ್ರಸಿದ್ಧ ದೇವಸ್ಥಾನವಾದ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಸನ್ನಿಧಿಯಲ್ಲಿ ದಿನಾಂಕ 18-12-2023ರ ಸೋಮವಾರದಂದು ಷಷ್ಠಿ ಮಹೋತ್ಸವವು ಅತ್ಯಂತ ಭಕ್ತಿ ಶ್ರದ್ಧೆಯಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರುಗಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಸ್ರಾರು ಭಗವದ್ಭಕ್ತರು ಭಾಗವಹಿಸಿ ಶ್ರೀ ದೇವರ ಸೇವೆಗೈದು ಅನ್ನ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು. ಈ ಮಹೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10.00 ಘಂಟೆಯಿಂದ ಮಧ್ಯಾಹ್ನ 12.00 ಘಂಟೆಯ ತನಕ ದೇವಸ್ಥಾನದ ಮಯೂರ ಮಂಟಪದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ದೇವಸ್ಥಾನದ ಆಡಳಿತ ವರ್ಗದವರಾದ ಶ್ರೀ ಶ್ರೀಧರ ಮಾಸ್ಟರ್ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸುವುದರ ಮೂಲಕ ಆರಂಭಗೊಂಡು ಬಹಳ ವಿಜೃಂಭಣೆಯಿಂದ ನಡೆದು ನೆರೆದಿರುವ ಸಾವಿರಾರು ಪ್ರೇಕ್ಷಕರ ಮನ ಸೂರೆಗೊಂಡಿತು.
ಡಾ. ವಾಣಿಶ್ರೀ ಕಾಸರಗೋಡು ಅವರು ಸಾಹಿತ್ಯ ಪ್ರಸ್ತುತಿ ಸಹಿತ ಕಾರ್ಯಕ್ರಮದ ಸಮಗ್ರ ನಿರೂಪಣೆ ಮಾಡಿದರು. ಸಂಸ್ಥೆಯ ಅಪ್ರತಿಮ ಕಲಾವಿದರಾದ ಗುರುರಾಜ್ ಕಾಸರಗೋಡು, ಜ್ಞಾನ ರೈ ಪುತ್ತೂರು, ವರ್ಷಾ ಶೆಟ್ಟಿ, ಆಜ್ಞಾ ರೈ ಪುತ್ತೂರು, ಸನುಷಾ ಸುಧಾಕರನ್, ನವ್ಯಶ್ರೀ ಕುಲಾಲ್, ದಿಯಾ ಸುಕೇಶ್ ಗಟ್ಟಿ, ಉಷಾ ಸುಧಾಕರನ್, ಮಧುಲತಾ ಮನೋಜ್, ಶ್ರೀರಕ್ಷಾ ಸರ್ಪಂಗಳ, ಆರಾಧ್ಯ ಎಸ್. ಭಟ್, ಹರೀಶ್ ಪಂಜಿಕಲ್ಲು ಮುಂತಾದವರು ವೈವಿದ್ಯಮಯ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಕೊನೆಗೆ ಸಂಸ್ಥೆಯ ವತಿಯಿಂದ ಪುತ್ತೂರಿನ ಖ್ಯಾತ ಉದ್ಯಮಿ ಶ್ರೀ ಜಯರಾಮ್ ರೈ ಕುರಿಯ ಹಾಗೂ ಶ್ರೀ ಶ್ರೀಧರ್ ಮಾಸ್ಟರ್ ಉಪಸ್ಥಿತಿಯಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ದೇವಸ್ಥಾನದ ವತಿಯಿಂದ ಕಾರ್ಯಕ್ರಮ ನಡೆಸಿಕೊಟ್ಟ ಸಂಸ್ಥೆಯ ಅಧ್ಯಕ್ಷರು ಡಾ. ವಾಣಿಶ್ರೀ ಕಾಸರಗೋಡು ಹಾಗೂ ಗುರುರಾಜ್ ಕಾಸರಗೋಡು ಅವರನ್ನು ಶ್ರೀ ದೇವರ ಪ್ರಸಾದ ನೀಡಿ ಹರಸಲಾಯಿತು.