ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಘಟಕ ಮತ್ತು ಕೆ.ಪಿ.ಎಸ್. ಪ್ರೌಢಶಾಲಾ ವಿಭಾಗ ಮುನಿಯಾಲು ಇವರ ಸಹಕಾರದೊಂದಿಗೆ ‘ಕನ್ನಡ ಡಿಂಡಿಮ’ ಸರಣಿಯ 7ನೇ ಕಾರ್ಯಕ್ರಮ ದಿನಾಂಕ 22-12-2023ರಂದು ಕೆ.ಪಿ.ಎಸ್. ಮುನಿಯಾಲು ಇಲ್ಲಿ ನಡೆಯಿತು.
ಕನ್ನಡ ಭುವನೇಶ್ವರಿಗೆ ಪುಷ್ಪನಮನ ಸಲ್ಲಿಸಿ, ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಂತೋಷ ಅಮೀನ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮುನಿಯಾಲು ಇಲ್ಲಿ ಉದ್ಯಮಿಗಳಾದ ದಿನೇಶ ಪೈ ಉದ್ಘಾಟಿಸಿ, ಮಾತನಾಡಿ “ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ಕನ್ನಡ ಡಿಂಡಿಮದಂತಹ ಕಾರ್ಯಕ್ರಮಗಳ ಮೂಲಕ ಕನ್ನಡ ಪ್ರೀತಿಯನ್ನು ಬೆಳೆಸುವುದರಿಂದ ಆತ್ಮವಿಶ್ವಾಸ ಬೆಳೆಯುತ್ತದೆ. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಸ್ಪರ್ಧೆ ಮಾಡಿ ಗುರುತಿಸಿ ಅಭಿನಂದಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ಶ್ಲಾಘನೀಯವಾದದ್ದು.” ಎಂದು ಹೇಳಿದರು.
ಗೋಪಿನಾಥ ಭಟ್ ಮಾತನಾಡಿ “ಇದು ವಿದ್ಯಾರ್ಥಿಗಳಿಗೆ ಕನ್ನಡ ಡಿಂಡಿಮ ಸರಣಿ ಕಾರ್ಯಕ್ರಮದ ಮೂಲಕ ಭಾಷೆಯ ಬಗ್ಗೆ ಆಸಕ್ತಿ ಬೆಳೆಸುವ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳು ಶಾಲಾ ಕಾಲೇಜುಗಳಲ್ಲಿ ಹೆಚ್ಚು ನಡೆಯಬೇಕು. ವಿದ್ಯಾರ್ಥಿಗಳು ಮತ್ತು ನಾವು ಎಲ್ಲೇ ಹೋದರು ಕನ್ನಡದ ಕಂಪನ್ನು ಉತ್ತೇಜಿಸೋಣ.” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮುನಿಯಾಲು ಇಲ್ಲಿನ ಉದ್ಯಮಿಗಳಾದ ಶ್ರೀ ಗೋಪಿನಾಥ ಭಟ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಜ್ಯೋತಿ ಹರೀಶ್ ಪೂಜಾರಿ, ಉಪ ಪ್ರಾಂಶುಪಾಲರಾದ ಲಕ್ಷೀನಾರಾಯಣ ಬೋರ್ಕರ್, ಕ.ಸಾ.ಪ ಗೌರವ ಕಾರ್ಯದರ್ಶಿಗಳಾದ ಡಾ.ಪ್ರವೀಣ್ ಕುಮಾರ್, ಮಂಜುನಾಥ ಕೆ. ಶಿವಪುರ, ರಾಮಚಂದ್ರ ಭಟ್ ವರಂಗ ಉಪಸ್ಥಿತರಿದ್ದರು. ಕ.ಸಾ.ಪ. ಹೆಬ್ರಿ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ಆಶಯ ನುಡಿಗಳನ್ನಾಡಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಕೆ.ಪಿ. ಎಸ್. ಮುನಿಯಾಲು ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾದ ಸೃಜನ್ ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಕ್ಕೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಕೆ.ಪಿ.ಎಸ್. ಮುನಿಯಾಲು ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ಕನ್ನಡ ಡಿಂಡಿಮ ಕಾರ್ಯಕ್ರಮದನ್ವಯ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಕ.ಸಾ.ಪ. ಪದಾಧಿಕಾರಿಗಳಾದ ವೀಣಾ ಆರ್. ಭಟ್ ಸ್ವಾಗತಿಸಿ, ಕನ್ನಡ ಶಿಕ್ಷಕಿ ಶೈಲಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಮಮತಾ ಮೇಡಂ ಬಹುಮಾನ ಪತ್ರ ವಾಚಿಸಿ, ಶೈಲಜಾ ಶಿವಪುರ ಧನ್ಯವಾದವಿತ್ತರು.