ಕಾರ್ಕಳ : ಕಾಂತಾವರ ಕನ್ನಡ ಸಂಘ ಹಾಗೂ ಕಾರ್ಕಳ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಇವುಗಳ ಸಹಯೋಗದೊಂದಿಗೆ ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಿಂಗಳ ಅರಿವು-ತಿಳಿವು ಉಪನ್ಯಾಸ ಕಾರ್ಯಕ್ರಮವು ದಿನಾಂಕ 23-12-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕ ಶಿವಕುಮಾರ ಅಳಗೋಡು ಇವರು ‘ಜನ್ನನ ಯಶೋಧರ ಚರಿತೆಯ ಅಮೃತಮತಿ’ ವಿಷಯದ ಕುರಿತು ಉಪನ್ಯಾಸ ನೀಡುತ್ತಾ “ಕನ್ನಡ ಸಾಹಿತ್ಯಲೋಕದಲ್ಲಿ ಬಹುಬಗೆಯ ವಿಮರ್ಶೆಗೆ ಒಳಗಾದ ಜನ್ನನ ಯಶೋಧರ ಚರಿತೆ ಕಾವ್ಯದ ‘ಅಮೃತಮತಿ’ ಪಾತ್ರದ ಮೂಲಕ, ಹೆಣ್ಣೊಬ್ಬಳ ವಿಕೃತ ಪ್ರಣಯವನ್ನು ಚಿತ್ರಿಸಲಾಗಿದೆ. ‘ಜೀವದಯೆ ಜೈನಧರ್ಮ’, ‘ಅಹಿಂಸಾ ಪರಮೋ ಧರ್ಮಃ’ ಎನ್ನುವುದನ್ನು ಸಾರುವುದಕ್ಕೆ ಜನ್ನ ‘ಯಶೋಧರ ಚರಿತೆ’ ರಚಿಸಿದ್ದರೂ ಈ ಕಾವ್ಯದೊಳಗಿನ ಯಶೋಧರನ ಕಥೆ, ಅಮೃತಮತಿ ಹಾಗೂ ಅಷ್ಟಾವಂಕರ ಪ್ರಣಯ ಪ್ರಸಂಗಗಳು ವಿದ್ವತ್ ವಲಯದಲ್ಲಿ ಚರ್ಚೆಯ ಪ್ರಧಾನ ಅಂಶಗಳಾಗಿವೆ. ಸಕಲಗುಣಸಂಪನ್ನನಾದ ಗಂಡನನ್ನು ವಂಚಿಸಿ, ವಿಕಲಾಂಗನಾದ ಮಾವಟಿಗನೊಂದಿಗೆ ಅನೈತಿಕ ಸಂಬಂಧ ಹೊಂದುವ ಅಮೃತಮತಿ, ಗಂಡ ಹಾಗೂ ಅತ್ತೆ ಚಂದ್ರಮತಿಯನ್ನು ಕೊಂದು ತಾನೂ ಕುಷ್ಠರೋಗದ ಯಾತನೆಯಿಂದ ಸಾಯುತ್ತಾಳೆ. ಈ ಪಾತ್ರದ ಮೂಲಕ ಕವಿಯು ಹೆಣ್ಣೊಬ್ಬಳ ಕಾಮವಿಕಾರವನ್ನು ಸಶಕ್ತವಾಗಿ ಕಟ್ಟಿಕೊಟ್ಟಿದ್ದಾನೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಅತಿಥಿಗಳನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ಡಾ. ನಾ.ಮೊಗಸಾಲೆ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿಯ ಗೌರವ ಅಧ್ಯಕ್ಷರಾದ ನಿತ್ಯಾನಂದ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಾನಂದ ಪೈ ಪ್ರಾರ್ಥಿಸಿ, ಸುಲೋಚನ ಬಿ.ವಿ. ಸ್ವಾಗತಿಸಿ, ಶೈಲಜಾ ಹೆಗ್ಡೆ ಅತಿಥಿಗಳನ್ನು ಪರಿಚಯಿಸಿ, ಅಭಾಸಾಪ ಕಾರ್ಕಳ ಸಮಿತಿಯ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ವಂದಿಸಿ, ಡಾ. ಸುಮತಿ ಪಿ. ಕಾರ್ಯಕ್ರಮ ನಿರೂಪಿಸಿದರು.