ಕಾರ್ಕಳ : ಭುವನೇಂದ್ರ ಪ್ರೌಢ ಶಾಲೆಯ ಶಿಕ್ಷಕಿ, ಲೇಖಕಿ ಪ್ರಜ್ವಲಾ ಶೆಣೈ ಅವರ ಕವನಸಂಕಲನ ‘ಸಮರ್ಪಣ’ ಇದರ ಲೋಕಾರ್ಪಣಾ ಕಾರ್ಯಕ್ರಮವು ದಿನಾಂಕ 17-12-2023ರಂದು ಕಾರ್ಕಳದ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಕೆ. ಶಾಂತಾರಾಮ ಕಾಮತ್ ಸಾಂಸ್ಕೃತಿಕ ಕಲಾಮಂಟಪದಲ್ಲಿ ನಡೆಯಿತು.
ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮುದ್ರಾಡಿಯ ಎನ್. ಎಸ್. ಡಿ. ಎಮ್. ಅನುದಾನಿತ ಪ್ರಾಢಶಾಲೆಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ “ಮನಸ್ಸಿಗೆ ಮುದವನ್ನು ನೀಡುವ ಜೀವನಕ್ಕೆ ಹಿತವನ್ನು ಒದಗಿಸುವ ಸಾಧನವೇ ಸಾಹಿತ್ಯಪ್ರಕಾರ. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಎಲ್ಲ ಚಟುವಟಿಕೆಗಳು ಕೂಡ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುತ್ತದೆ. ಕಲೆ ಸಾಹಿತ್ಯ ಸಂಗೀತದಿಂದ ಅಧ್ಯಾತ್ಮದ ಅನುಸಂಧಾನ ಕೂಡ ಸಾಧ್ಯವಿದೆ.” ಎಂದು ಹೇಳಿದರು.
ಮುಖ್ಯಅತಿಥಿಗಳಾಗಿ ಅತ್ತೂರು ಸಂತ ಲಾರೆನ್ಸ್ ಅನುದಾನಿತ ಪ್ರೌಢ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸುಬ್ರಮಣ್ಯ ಉಪಾಧ್ಯ, ಉಡುಪಿ ಸರಕಾರಿ ಪದವಿಪೂರ್ವ ಕಾಲೇಜು ಇದರ ಪ್ರೌಢಶಾಲಾ ವಿಭಾಗದ ಸಂಸ್ಕೃತ ಶಿಕ್ಷಕಿ ಲಕ್ಷ್ಮೀ ಹೆಗ್ಡೆ, ವಿಶ್ರಾಂತ ಪತ್ರಕರ್ತ ಕೆ. ಪದ್ಮಾಕರ ಭಟ್, ಉದ್ಯಮಿ ಹರೀಶ ಶೆಣೈ, ಚಾರ್ಟರ್ಡ್ ಅಕೌಂಟೆಂಟ್ ರಂಜನ್ ಭಾವೆ ಹಾಗೂ ಬೆಂಗಳೂರಿನ ಸಾಫ್ಟ್ ವೇರ್ ಇಂಜಿನೀಯರ್ ಅರ್ಚನಾ ಭಾವೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದತ್ತಾತ್ರೇಯ ಹಿರಿಯಂಗಡಿ ಸ್ವಾಗತಿಸಿ, ಕವಯಿತ್ರಿ ಪ್ರಜ್ವಲಾ ಶೆಣೈ ಕೃತಿಯ ಕುರಿತು ಮಾತನಾಡಿ, ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು ಕಾರ್ಯಕ್ರಮ ನಿರ್ವಹಿಸಿ, ಶ್ರೀಮತಿ ಧಾರಿಣಿ ವಂದಿಸಿದರು.