ಮಂಗಳೂರು : ಸುರತ್ಕಲ್ಲಿನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ ಗೋವಿಂದ ದಾಸ ಕಾಲೇಜು ವತಿಯಿಂದ ‘ನೀನಾಸಂ ತಿರುಗಾಟ ನಾಟಕೋತ್ಸವ 2024’ ಕಾರ್ಯಕ್ರಮವು ದಿನಾಂಕ 14-01-2024 ಮತ್ತು 15-01-2024ರಂದು ಸಂಜೆ ಗಂಟೆ 6.50ಕ್ಕೆ ಗೋವಿಂದ ದಾಸ ಕಾಲೇಜಿನ ರಂಗ ಮಂದಿರದಲ್ಲಿ ನಡೆಯಲಿದೆ. ಈ ನಾಟಕೋತ್ಸವವನ್ನು ಪ್ರೊ. ಯಚ್.ಜಿ.ಕೆ. ರಾವ್ ದತ್ತಿನಿಧಿ, ಸುರತ್ಕಲ್ ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘ, ಬಿ.ಎ.ಎಸ್.ಎಫ್. ಬಾಳ, ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, 1982ರ ವಿಜ್ಞಾನ ತಂಡದ ದತ್ತಿನಿಧಿ, ಶಿಕ್ಷಕ ರಕ್ಷಕ ಸಂಘ, ಅಲ್ಯುಮ್ನಿ ಅಸೋಸಿಯೇಶನ್ ಇವುಗಳ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 14-01-2024ರಂದು ಡಾ. ಚಂದ್ರಶೇಖರ ಕಂಬಾರ ರಚಿಸಿದ, ಕೆ.ಜಿ. ಕೃಷ್ಣಮೂರ್ತಿಯವರ ನಿರ್ದೇಶನದ ‘ಹುಲಿಯ ನೆರಳು’ ಮತ್ತು ದಿನಾಂಕ 15-01-2024ರಂದು ಲೂಯಿ ನ ಕೋಶಿ ಅವರ ರಚನೆಯ ಶ್ವೇತಾರಾಣಿ ಎಚ್.ಕೆ. ಇವರ ನಿರ್ದೇಶನದ ‘ಆ ಲಯ ಈ ಲಯ’ ನಾಟಕ ಪ್ರದರ್ಶನಗೊಳ್ಳಲಿದೆ.
‘ಹುಲಿಯ ನೆರಳು’
ಹುಲಿ ಬೇಟೆಯೊಂದರ ಹೆಳೆಯಲ್ಲಿ ಪ್ರಾರಂಭವಾಗುವ ಈ ನಾಟಕ ಕಣ್ಣಿಗೆ ಅಡ್ಡವಾಗಿರುವ ತೋರಿಕೆಯ ಪರದೆಯನ್ನು ಸರಿಸಿ ಸತ್ಯವನ್ನು ಕಾಣುವುದು ಎಂದರೇನು ಎಂಬ ಪ್ರಶ್ನೆಯನ್ನು ನಮ್ಮೆದುರಿಗಿಡುತ್ತದೆ. ರಾಮಗೊಂಡನು ತನ್ನ ತಂದೆ ಯಾರು ಎಂಬ ಹುಡುಕಾಟಕ್ಕೆ ತೊಡಗುತ್ತಾನೆ. ತನ್ನ ತಾಯ್ತಂದೆಯರನ್ನು ತಿಳಿಯುವ ಹೋರಾಟವು ಸತ್ಯವನ್ನು ಅರಿಯುವ ಹುಡುಕಾಟವಾಗಿ ಪರಿವರ್ತಿತವಾಗುವುದನ್ನು ಈ ನಾಟಕ ರಮ್ಯಾದ್ಭುತ ಜಗತ್ತಿನಲ್ಲಿ ಕಟ್ಟಿಕೊಡುತ್ತದೆ. ಹಾಗಾಗಿಯೇ ಮನುಷ್ಯನ ಮನಸ್ಸಿನಲ್ಲಿ ಮೂಡಬಹುದಾದ ಅತಿಮಾನುಷ ರೂಪಗಳು ರಂಗದ ಮೇಲೆ ಕಾಣಿಸಿಕೊಳ್ಳುತ್ತವೆ. ಒಬ್ಬರು ಮತ್ತೊಬ್ಬರಾಗುತ್ತಾರೆ. ಮನುಷ್ಯರು ಮತ್ತೇನೇನೋ ಆಗುತ್ತಾರೆ. ಹುಲಿ. ಭೂತ, ಯಕ್ಷಿಣಿ, ಮಾಯದ ಕನ್ನಡಿ, ರಾಕ್ಷಸ, ದೇವ ದೇವತೆಗಳಾದಿಯಾಗಿ ಜನಪದ ಮತ್ತು ಪುರಾಣ ಲೋಕದ ಪಾತ್ರಗಳು ರಾಮಗೊಂಡನೆಂಬ ಮನುಷ್ಯನ ಆಸ್ಮಿತೆಯ ಹುಡುಕಾಟದಲ್ಲಿ ಮಾರ್ಗಗಳಾಗಿಯೂ, ಮಾರ್ಗಸೂಚಿಗಳಾಗಿಯೂ, ದಾರಿ ತಪ್ಪಿಸುವ ಮರೀಚಿಕೆಗಳಾಗಿಯೂ ನಾಟಕವನ್ನು ಮುನ್ನಡೆಸುತ್ತವೆ. ನಾವು ಯಾರು ? ನಮ್ಮ ಮೂಲ ಯಾವುದು ? ಎಂಬ ಅಸ್ಮಿತೆಯನ್ನು ಕುರಿತ ಪ್ರಶ್ನೆಗಳು ಮಹತ್ವವನ್ನು ಪಡೆದುಕೊಂಡಿರುವ ಈ ಕಾಲದಲ್ಲಿ ಕಂಬಾರರ ನಾಟಕಕ್ಕೆ ಬೇರೆಯದೇ ಧ್ವನಿ ದಕ್ಕಿಬಿಡುತ್ತದೆ. ಭಾರತೀಯ ಜನಪದ ಪರಂಪರೆಯಲ್ಲಿ ಗಟ್ಟಿಯಾಗಿ ಬೇರೂರಿರುವ ಈ ಕೃತಿಯು ಪಾಶ್ಚಾತ್ಯ ರಂಗಭೂಮಿಯ ‘ಈಡಿಪಸ್’ ಮುಂತಾದ ಕೃತಿಗಳನ್ನು ನೆನಪಿಸುತ್ತದೆ.
‘ಆ ಲಯ ಈ ಲಯ’
ಜನಾಂಗೀಯ ಹಿಂಸೆಯು ಭಾರತದ ಸ್ಮೃತಿಯಲ್ಲಿ ಅಷ್ಟಾಗಿ ಘಾಸಿ ಮಾಡದ ಸಂಗತಿ. ವಸಾಹತುಶಾಹಿಯ ಕಾಲದಲ್ಲಿ ಬಿಳಿಯರ ಅಳ್ವಿಕೆಯಿದ್ದರೂ ಅದು ಜನಾಂಗೀಯ ಕಲಹದ ಬಣ್ಣ ಪಡೆದುಕೊಂಡದ್ದು ಇಲ್ಲವೇ ಇಲ್ಲವೆನ್ನಬಹುದು. ಹಾಗಿದ್ದೂ ಆಫ್ರಿಕಾ, ಅಮೇರಿಕಾ ಮೊದಲಾದ ದೇಶಗಳಲ್ಲಿ ನಡೆದ ಜನಾಂಗೀಯ ಸಂಘರ್ಷದ ಚಿತ್ರಣವು ನಮ್ಮನ್ನು ತಟ್ಟಿ ಅಲುಗಾಡಿಸುವುದು ಏಕೆಂದರೆ ಹಿಂಸೆಯ ಕತೆಗಳು ಮಾನವ ಸ್ಮೃತಿಯನ್ನು ದೇಶ ಭಾಷೆಗಳ, ವೈಯಕ್ತಿಕ ಅನುಭವಗಳ ಗಡಿ ಮೀರಿ ಒಂದುಗೂಡಿಸಿಬಿಡುತ್ತವೆ. ಲೂಯಿ ನಕೋಸಿ ಬರೆದ ನಾಟಕ ‘ದ ರಿದಮ್ ಆಫ್ ವಯಲೆನ್ಸ್’ ಆಫ್ರಿಕಾದ ವಿದ್ಯಾರ್ಥಿ ಸಮೂಹವೊಂದು ಜನಾಂಗೀಯ ಹಿಂಸೆಗೆ ಪ್ರತಿಕ್ರಿಯಿಸಿದ ಬಗೆಯನ್ನು ಬಿಚ್ಚಿಡುತ್ತದೆ. ವಿದ್ಯಾರ್ಥಿಗಳ ಕೂಡು ತಾಣವಾದ ಕೆಫೆಯೊಂದರಲ್ಲಿ ನಡೆಯುವ ಈ ನಾಟಕದ ದೃಶ್ಯಗಳು ಯುವಕ ಯುವತಿಯರ ಆಸೆ. ಆತಂಕ, ಪ್ರಣಯ, ಪ್ರಲೋಭನೆ. ಬಯಕೆ. ಬಸವಳಿಕೆ, ಕನಸು, ತುಡಿತ, ತತ್ವ, ತೀರ್ಮಾನಗಳೆಲ್ಲವನ್ನೂ ಆ ದಿನ ರಾತ್ರಿ ನಡೆಯುವ ಸ್ಪೋಟಕ ಘಟನೆಯೊಂದರ ಹಿನ್ನೆಲೆಯಾಗಿ ಚಿತ್ರಿಸುತ್ತವೆ; ಜನಾಂಗೀಯ ಸಂಘರ್ಷದ ಕುರಿತು ತೀರ್ಮಾನಗಳನ್ನು ಘೋಷಿಸದೆಯೇ ಹಿಂಸೆಯ ಬಗ್ಗೆ ಜಿಗುಪ್ಪೆ ಹುಟ್ಟುವಂತೆ ಮಾಡುತ್ತವೆ. ಜಾಜ್ ಮತ್ತು ಹೋರಾಟದ ಹಾಡುಗಳ ಮುಖಾಂತರ ಸಂಗೀತಕ್ಕೂ ಪ್ರತಿರೋಧಕ್ಕೂ ಇರುವ ಸಂಬಂಧದ ಕಲಾಮೀಮಾಂಸೆಗೂ ಈ ಪ್ರಯೋಗ ಕೈ ಹಾಕುತ್ತದೆ.