ಮಂಗಳೂರು : ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಶನ್ಸ್ ಪ್ರಕಟಿಸಿದ ಪತ್ರಕರ್ತ ಸಾಹಿತಿ ರಘುನಾಥ ಎಂ. ವರ್ಕಾಡಿ ಬರೆದಿರುವ ‘ಸೂರ್ಯೆ ಚಂದ್ರೆ ಸಿರಿ’ ದೇವಕಿ ಬೈದ್ಯೆತಿ ಹೇಳಿರುವ ತುಳು ಜನಪದ ಕಥಾ ಸಂಕಲನ ಲೋಕಾರ್ಪಣೆಯ ಕಾರ್ಯಕ್ರಮ ದಿನಾಂಕ 04-01-2024ರಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು.
ಕೃತಿಕಾರ ರಘುನಾಥ ಎಂ. ವರ್ಕಾಡಿ ಸ್ವಾಗತಿಸಿದರು. ಶ್ರೀನಿವಾಸ ವಿಶ್ವವಿದ್ಯಾನಿಲಯ ಮುಕ್ಕದ ಪ್ರೊ. ಎಂ.ಎಸ್. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕ ಅಧ್ಯಕ್ಷರು ಡಾ. ತುಕಾರಾಮ ಪೂಜಾರಿ ‘ಸೂರ್ಯೆ ಚಂದ್ರೆ ಸಿರಿ’ ಕೃತಿ ಲೋಕಾರ್ಪಣೆಗೊಳಿಸಿದರು.
ಡಾ. ತುಕಾರಾಮ ಪೂಜಾರಿ ಮಾತನಾಡಿ “ಕೃತಿಕಾರರು 30 ಕತೆಗಳನ್ನು ಬಾರೀ ಅಂದವಾಗಿ ಜೋಡಣೆ ಮಾಡಿದ್ದಾರೆ. ಮೊದಲ ಕತೆಯೆ ಅತಿಕಾರ ತಳಿಯ ಬಗ್ಗೆ ಇದೆ. ಈ ತಳಿಯ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇದನ್ನು ಎಣೆಲ್ ನಲ್ಲಿ ಬಿತ್ತಿದರೂ ಪೈರು ಆಗುವುದು ಸುಗ್ಗಿಯಲ್ಲಿ. ತುಳುನಾಡನ್ನು ಯಾವ ರೀತಿಯಲ್ಲಿ ನೋಡುವುದಾದರೂ ಶಾಸನ ಆಧಾರವಾಗಿದೆ. ಶಾಸನ ಬರೆಸುವವನು ರಾಜ. ನಾಣ್ಯ ಮಾಡಿಸುವವನು ರಾಜ. ಕೋಟೆ ಕೊತ್ತಲ ಕಟ್ಟಿಸುವವನು ರಾಜ. ಹಾಗಾದರೆ ಇತಿಹಾಸ ಯಾರದ್ದು? ಅದು ರಾಜನದ್ದು. ನಮ್ಮದೆಂದು ಆಗುವುದಿಲ್ಲ. ಜನ ಸಾಮಾನ್ಯರ ಚರಿತ್ರೆ ತಿಳಿಯಲು ಯಾವುದರಿಂದ ಸಾಧ್ಯ? ಅದಕ್ಕೆ ಒಂದು ಉದಾಹರಣೆ ಈ ಕೃತಿ. 500 ವರ್ಷ ಕಳೆದರೆ ಇದು ದಾಖಲೆಯಾಗುತ್ತದೆ. ನಮ್ಮ ಹಿರಿಯರು ಕಲಿಯದಿದ್ದರೂ ಬುದ್ದಿವಂತಿಕೆಯಲ್ಲಿ ಚರಿತ್ರೆ ಉಳಿಸಿದ್ದಾರೆ.” ಎಂದು ಹೇಳಿದರು.
ಪ್ರಗತಿಪರ ಕೃಷಿಕ ಹಾಗೂ ಮಂಗಳೂರು ನಾರಾಯಣ ಗುರು ಯುವ ವೇದಿಕೆಯ ಸಲಹಾ ನಿರ್ದೇಶಕರಾದ ನೀಲಯ ಯಂ. ಅಗರಿ ಮಾತನಾಡಿ “ಪವಿತ್ರವಾದ ಅತಿಕಾರ ತಳಿ ಕೋಟಿ ಚೆನ್ನಯರ ಕಾಲದಲ್ಲಿಯೂ ಇತ್ತು. ವರ್ಕಾಡಿಯವರು ಈ ತಳಿಯ ಉಲ್ಲೇಖ ಮಾಡಿದ್ದಾರೆ. ಅವರು ಇನ್ನೂ ಇಂಥಹ ಕೃತಿ ಬರೆಯುವಂತಾಗಲಿ.” ಎಂದರು.
ಪ್ರೊ. ಎಂ.ಎಸ್. ಕೋಟ್ಯಾನ್ ಅಧ್ಯಕ್ಷತೆಯ ನುಡಿಗಳನ್ನಾಡಿ “ಪ್ರಾಮಾಣಿಕ, ನೇರ, ಸತ್ಯ ಮತ್ತು ನಿಷ್ಠೆಯ ವರ್ಕಾಡಿಯವರು ಗ್ರಾಮೀಣ ಮಟ್ಟದಲ್ಲಿ ಬೆಳೆದು ಅತ್ಯಂತ ತಿಳುವಳಿಕೆಯುಳ್ಳವರಾಗಿದ್ದಾರೆ. ಈ ಕೃತಿ ಬರೆದು ತಾಯಿ ಮೇಲಿನ ಪ್ರೀತಿ ತೋರಿಸಿದ್ದು ಮಾತ್ರವಲ್ಲ, ಇಂಥಹ ಸಾಹಿತ್ಯಗಳನ್ನು ತಾಯಿಯಿಂದ ಕೇಳಿ ತಿಳಿದು ಉಳಿಸಿದ್ದಾರೆ. ಮುಂದಿನ ಪೀಳಿಗೆಗೆ ಇದರಿಂದ ತಿಳಿಯಲು ಸಾಧ್ಯ.” ಎಂದರು.
ನಮ್ಮಕುಡ್ಲ ಟಿವಿ ಚಾನಲ್ ನಿರ್ದೇಶಕ ಸುರೇಶ್ ಬಿ. ಕರ್ಕೇರ, ಕೃತಿಕಾರರ ಪುತ್ರ ಸೂರ್ಯ ಶಶಾಂಕ ವರ್ಕಾಡಿ ಉಪಸ್ಥಿತರಿದ್ದರು.