ಮಣಿಪಾಲ : ವಿದುಷಿ ಭ್ರಮರಿ ಶಿವಪ್ರಕಾಶ್ ಅವರು ಮಂಡಿಸಿದ ಸಾಹಿತಿ ರಂಗಕರ್ಮಿ ಪ್ರೊ. ಉದ್ಯಾವರ ಮಾಧವ ಆಚಾರ್ಯರ ‘ಸಮೂಹ-ಉಡುಪಿ ರಂಗ ಪ್ರಯೋಗಗಳ ಅಧ್ಯಯನ’ ಎಂಬ ವಿಷಯದ ಕುರಿತು ನಡೆಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಾಹೆ ವಿ.ವಿ.ಯು ಪಿಎಚ್.ಡಿ. ನೀಡಿದೆ.
ಇವರು ಮಾಹೆ ವಿ.ವಿ.ಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸ್ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರದ (ಆರ್.ಆರ್.ಸಿ.) ಮೂಲಕ ಮಣಿಪಾಲ ಸೆಂಟರ್ ಫಾರ್ ಯುರೋಪಿಯನ್ ಸ್ಟಡೀಸ್ ವಿಭಾಗದ ಮುಖ್ಯಸ್ಥೆ ಡಾ. ನೀತಾ ಇನಾಂದಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.
ಶ್ರೀಮತಿ ಭ್ರಮರಿ ಶಿವಪ್ರಕಾಶ್ ಶಾಸ್ತ್ರೀಯ ಭರತನಾಟ್ಯ ಕ್ಷೇತ್ರದಲ್ಲಿ ತನ್ನ ಅಧ್ಯಯನ ಆಧಾರಿತ ಸೃಜನಶೀಲ ನೃತ್ಯ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಕಲಾವಿದೆ. ವಸುಂಧರಾ ನೃತ್ಯ ಬಾಣಿಯ ಹರಿಕಾರ್ತಿ, ಹಿರಿಯ ಗುರು ಡಾ. ವಸುಂಧರಾ ದೊರೆಸ್ವಾಮಿಯವರಲ್ಲಿ ಕಳೆದ 26 ವರ್ಷಗಳಿಂದ ಶಿಷ್ಯತ್ವ ವಹಿಸಿದ್ದಾರೆ.
ಪ್ರಸ್ತುತ ಮಂಗಳೂರಿನ ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಬರಲ್ ಟ್ರಸ್ಟ್ ಎಂಬ ಸಾಂಸ್ಕೃತಿಕ ಸಂಸ್ಥೆಯ ಮೂಲಕ ಕಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡು ನೃತ್ಯ ತರಗತಿಗಳನ್ನೂ ನಡೆಸುತ್ತಿದ್ದಾರೆ. ಹಿರಿಯ ರಂಗನಿರ್ದೇಶಕ ಪ್ರೊ. ಉದ್ಯಾವರ ಮಾಧವ ಆಚಾರ್ಯ ಅವರ ಸುಮಾರು 20 ವೈವಿಧ್ಯಮಯ ಕನ್ನಡ ಸಾಹಿತ್ಯ ಕೃತಿ ಆಧಾರಿತ ರಂಗಪ್ರಯೋಗಗಳಿಗೆ ನೃತ್ಯ ಸಂಯೋಜಿಸಿ, ಅವುಗಳಲ್ಲಿ ಅಭಿನಯಿಸಿರುತ್ತಾರೆ. ಪಾಂಚಾಲಿ, ಊರ್ವಶಿ, ಹಂಸನಾದ, ದೇವಯಾನಿಯ ಸ್ವಗತ, ಸೀತೆಯ ಸ್ವಗತ, ಕೋದಂಡದ ಕೊನೆ ಮೊದಲಾದ ಏಕವ್ಯಕ್ತಿ ನೃತ್ಯನಾಟಕಗಳನ್ನೂ ಪ್ರಸ್ತುತಪಡಿಸಿರುತ್ತಾರೆ.
ಕಲಾಸಂಶೋಧನೆ ಹಾಗೂ ಪ್ರದರ್ಶನಗಳನ್ನು ನೀಡುತ್ತಿರುವ ಇವರು ಕೇಂದ್ರ ಸಂಸ್ಕೃತಿ ಸಚಿವಾಲಯದ ಜ್ಯೂನಿಯರ್ ಫೆಲೊ ಆಗಿದ್ದು, ಯು.ಜಿ.ಸಿ.ಯ ನೆಟ್ ಪರೀಕ್ಷೆಯ ಮಾನ್ಯತೆ ಪಡೆದಿರುತ್ತಾರೆ.