ಬಂಟ್ವಾಳ: ಪುತ್ತೂರು ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರದ ಆಶ್ರಯದಲ್ಲಿ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನೃತ್ಯಧಾರ ಮತ್ತು ಕಲಾನಯನ ಪ್ರಶಸ್ತಿ ಪ್ರದಾನ ಸಮಾರಂಭವು ಬಿ.ಸಿ. ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ದಿನಾಂಕ 07-01-2024ರ ಭಾನುವಾರದಂದು ನಡೆಯಿತು.
ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ. ಚಂದ್ರಶೇಖರ ನಾವಡ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಹಾಸ್ಯ ಕಲಾವಿದ ರಸಿಕರತ್ನ ದಿ. ನಯನ ಕುಮಾರ್ ಸ್ಮರಣಾರ್ಥ ನೀಡಲಾಗುವ ಕಲಾನಯನ ಪ್ರಶಸ್ತಿಯನ್ನು ಪುತ್ತೂರಿನ ಚರ್ಮವಾದ್ಯ ತಯಾರಕ ಮತ್ತು ಕೊಳಲು ವಾದಕ ಪಿ. ರಾಜರತ್ನಂ ದೇವಾಡಿಗ ಅವರಿಗೆ ಪ್ರದಾನ ಮಾಡಲಾಯಿತು. ವಸ್ತ್ರ ವಿನ್ಯಾಸಗಾರ ಮತ್ತು ಮುಖವರ್ಣಿಕೆ ಕಲಾವಿದ ಸುನೀಲ್ ಉಚ್ಚಿಲ ದಂಪತಿ ಅವರನ್ನು ಸನ್ಮಾನಿಸಲಾಯಿತು.
ತುಳುವೆರ್ ಜನಪದ ಕೂಟದ ಖಜಾಂಜಿ ಪ್ರಭು ರೈ ಮಾತನಾಡಿ “ಇದೊಂದು ಅರ್ಥಗರ್ಭಿತ ಕಾರ್ಯಕ್ರಮವಾಗಿದ್ದು, ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ವ್ಯಕ್ತಿತ್ವ ನಿರ್ಮಾಣದ ಕೆಲಸವು ಸಂಸ್ಥೆಯಿಂದಾಗುತ್ತಿರುವುದು ಅಭಿನಂದನೀಯ ಎಂದರು.” ಬಾಲಕೃಷ್ಣ ಪ್ರಭು ವೇದಿಕೆಯಲ್ಲಿದ್ದರು. ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರದ ಸಂಚಾಲಕ ಉದಯ ವೆಂಕಟೇಶ್ ಭಟ್ ಸ್ವಾಗತಿಸಿ, ನೃತ್ಯ ನಿರ್ದೇಶಕಿ ರೋಹಿಣಿ ಉದಯ್ ಪ್ರಸ್ತಾವಿಸಿ, ಮಂಜುಳಾ ಶೆಟ್ಟಿ ನಿರೂಪಿಸಿದರು. ಬಳಿಕ ನೃತ್ಯ ನಿರ್ದೇಶಕಿ, ವಿದುಷಿ ರೋಹಿಣಿ ಉದಯ್ ತಂಡದಿಂದ ‘ನೃತ್ಯಧಾರ’ ಪ್ರದರ್ಶನ ನಡೆಯಿತು.