ಮಂಗಳೂರು : ಭರತನಾಟ್ಯ ಗುರು ಶ್ರೀಕಾಂತ್ ಸುಬ್ರಹ್ಮಣ್ಯಂ ಅವರ ಶಿಷ್ಯೆ ಅನನ್ಯಾ ಚಿಂಚಳ್ಳರ್ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 07-01-2024ರಂದು ಮಧ್ಯಾಹ್ನ 3.30ಕ್ಕೆ ಮಂಗಳೂರಿನ ಡಾನ್ ಬಾಸ್ಕೊ ಸಭಾಂಗಣದಲ್ಲಿ ನಡೆಯಿತು.
ಅನನ್ಯಾ ಚಿಂಚಳ್ಳರ್ ಅವರು ವಿದೇಶದಲ್ಲಿ ಹುಟ್ಟಿ ಬೆಳೆದು, ವಿದೇಶದಲ್ಲಿದ್ದುಕೊಂಡೇ ಅಪ್ಪಟ ಭಾರತೀಯ ಶಾಸ್ತ್ರೀಯ ಭರತನಾಟ್ಯವನ್ನು ಕಲಿತು, ಭಾರತದಲ್ಲಿ ಪ್ರದರ್ಶನ ನೀಡಿದರು. ಇಂಗ್ಲೆಂಡ್‌ನ ಲೀಡ್ಸ್ ನಗರದಲ್ಲಿ ಹುಟ್ಟಿ ತನ್ನ ಶಾಲಾ ಶಿಕ್ಷಣದ ಜತೆಗೆ ಗುರು ಶ್ರೀಕಾಂತ್ ಸುಬ್ರಹ್ಮಣ್ಯಂ ಅವರ ಶಿಷ್ಯೆಯಾಗಿ, ತನ್ನ ಐದನೇ ವಯಸ್ಸಿನಲ್ಲಿಯೇ ಭರತನಾಟ್ಯದ ಅಭ್ಯಾಸವನ್ನು ಪ್ರಾರಂಭಿಸಿದ ಅನನ್ಯಾ ಅವರು 6 ಗ್ರೇಡಿನ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ.
ಈಕೆ ನಗರದ ಡೊಂಗರಕೇರಿಯ ಡಾ. ಪ್ರವೀಣ್ ಪ್ರಭಾಕರ್ ಮತ್ತು ಡಾ. ದೀಪಾ ಪ್ರವೀಣ್ ಅವರ ಪುತ್ರಿ. ಈ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಮಂಗಳೂರಿನ ನೃತ್ಯಭಾರತಿ ನಿರ್ದೇಶಕಿ ವಿದುಷಿ ಗೀತಾ ಸರಳಾಯ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಅತಿಥಿಯಾಗಿ ಭಾಗವಹಿಸಿದ್ದರು.