ಕೊಣಾಜೆ : ಕರ್ನಾಟಕ ಸಾಹಿತ್ಯ ಪರಿಷತ್ತು ಉಳ್ಳಾಲ ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಅಮೃತ ನಮನ ಕಾರ್ಯಕ್ರಮವು ದಿನಾಂಕ 11-01-2024ರಂದು ಕೊಣಾಜೆ ಪದವು ಇಲ್ಲಿನ ದ.ಕ.ಜಿ.ಪ. ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರೊ. ಅಮೃತ ಸೋಮೇಶ್ವರರಿಗೆ ನುಡಿನಮನ ಸಲ್ಲಿಸಿ ಮಾತನಾಡಿದ ತೋನ್ಸೆ ಪುಷ್ಕಳ್ ಕುಮಾರ್ “ಮೃದು ಸ್ವಭಾವ, ಸರಳ ವ್ಯಕ್ತಿತ್ವದ ಕವಿ, ಸಾಹಿತಿ ಪ್ರೊ. ಅಮೃತ ಸೋಮೇಶ್ವರರು ಮಾನವೀಯ ಸಂವೇದನೆಯ ಕವಿ. ಪ್ರಕೃತಿ, ಕನ್ನಡ ಹಾಗೂ ತುಳು ನಾಡು ನುಡಿಯ ಬಗೆಗೆ ಅಪಾರ ಪ್ರೀತಿ ಹಾಗೂ ಸಾತ್ವಿಕ ವೈಚಾರಿಕತೆ ಅವರ ಕವಿತೆ ಮತ್ತು ಒಟ್ಟು ಸಾಹಿತ್ಯದಲ್ಲಿತ್ತು. ಗಾಯನಯೋಗ್ಯವಾದ ಅನೇಕ ಕವಿತೆಗಳನ್ನು ಅವರು ಬರೆದಿದ್ದಾರೆ. ಗೋವಿಂದ ಪೈ, ಕುವೆಂಪು, ಶಿವರುದ್ರಪ್ಪರಂತಹ ರಾಷ್ಟ್ರಕವಿಗಳ ಸಾಲಿನಲ್ಲಿ ಅಮೃತರಿಗೂ ಸ್ಥಾನ ದೊರಕಬೇಕಿತ್ತು. ಅವರು ಆ ತೂಕದ ಕವಿ. ಎಳೆಯ ಮಕ್ಕಳಿಂದ ಹಿರಿಯರವರೆಗೆ ಯಾರು ಯಾವ ಸಂದೇಹಗಳನ್ನು ಕೇಳಿದರೂ ಅವರು ಯೋಚಿಸಿ ತಮ್ಮದೇ ರೀತಿಯ ಆಲೋಚನೆಗಳನ್ನು ಹಂಚುತ್ತಿದ್ದರು. ಮಾತ್ರವಲ್ಲ ಒಂದು ಮನುಷ್ಯಪರ ನಿಲುವನ್ನು ತೋರಿಸಿಕೊಡುತ್ತಿದ್ದರು. 500ಕ್ಕೂ ಹೆಚ್ಚು ಕೃತಿಗಳಿಗೆ ಮುನ್ನುಡಿ ಬರೆದು ಬರಹಗಾರರ ಬೆನ್ನು ತಟ್ಟಿದವರು. ಮೂಲ ನಂಬಿಕೆ ಬೇಕು ಮೂಢನಂಬಿಕೆ ಬೇಡ ಎಂದು ಹೇಳಿ ಅಂತೆಯೇ ಬದುಕಿದವರು.” ಎಂದರು
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಉಳ್ಳಾಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಮಾತನಾಡಿ “ಯಾರು ಸಾರ್ಥಕ ಬದುಕು ಸಾಗಿಸಿ ಸಮಾಜಕ್ಕೆ ಕೊಡುಗೆಯಾಗಿರುತ್ತಾರೋ ಅವರು ‘ಅಮೃತ’ರಾಗುತ್ತಾರೆ. ಹಾಗೆಯೇ ಅಮೃತರು ಹೃದಯವಂತರಾಗಿ, ವಾತ್ಸಲ್ಯಮಯಿಯಾಗಿ ಬದುಕಿದವರು ಹಾಗೂ ಬರೆದವರು. ಜನರ ನಡುವಿನಿಂದಲೇ ವಸ್ತುವನ್ನು ಎತ್ತಿಕೊಂಡು ಬರೆದ ಅಮೃತರಿಗೆ ಅಪಾರ ಸಹೃದಯರ ಪ್ರೀತಿ, ಅಭಿಮಾನ ದೊರೆತಿದೆ. ಇದು ಎಲ್ಲ ಪ್ರಶಸ್ತಿಗಿಂತ ಹಿರಿದು.” ಎಂದರು. ಕಾರ್ಯಕ್ರಮವನ್ನು ಕೊಣಾಜೆ ಪದವು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗಾಯತ್ರಿ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿರುವ ಕೊಣಾಜೆ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷ ಅಚ್ಯುತ ಗಟ್ಟಿ ಕೆಳಗಿನಮನೆ ಇವರನ್ನು ಪರಿಷತ್ತಿನ ವತಿಯಿಂದ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಕವನ, ಕತೆ, ಪ್ರಬಂಧ, ಚುಟುಕು ರಚನೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಉಳ್ಳಾಲ ಕಸಾಪ ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್, ಕಸಾಪ ಉಳ್ಳಾಲ ಹೋಬಳಿ ಅಧ್ಯಕ್ಷರಾದ ವಿಜಯಲಕ್ಷ್ಮೀ ಪ್ರಸಾದ್ ರೈ, ಪರಿಷತ್ತಿನ ಹರೇಕಳ ಗ್ರಾಮ ಸಂಚಾಲಕರಾದ ದೈಹಿಕ ಶಿಕ್ಷಕ ತ್ಯಾಗಂ ಹರೇಕಳ, ನಿವೃತ್ತ ಮುಖ್ಯೋಪಾಧ್ಯಾಯರಾದ ಜಯಪ್ರಕಾಶ್, ಎ.ಪಿ.ಎಂ.ಸಿ. ಮಾಜಿ ಉಪಾಧ್ಯಕ್ಷೆ ಮುತ್ತು ಎನ್. ಶೆಟ್ಟಿ, ಸುರೇಂದ್ರ ರೈ , ಎ.ಕೆ. ರೆಹಮಾನ್ ಉಪಸ್ಥಿತರಿದ್ದರು. ಕೊಣಾಜೆಪದವು ಪ್ರೌಢಶಾಲೆಯ ದೈಹಿಕ ಶಿಕ್ಷಕ ರಾಜೀವ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.