ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಾರತೀಯ ವಿದ್ಯಾಭವನ ಸಹಯೋಗದೊಂದಿಗೆ ವಿದ್ವಾನ್ ಶ್ರೀನಿವಾಸ ಉಡುಪ ಸ್ಮರಣಾರ್ಥ ಪಿಟೀಲು ವಾದನ ಕಛೇರಿಯು ದಿನಾಂಕ 31-12-2023ರಂದು ಮಂಗಳೂರಿನ ಶಾರದಾ ವಿದ್ಯಾಲಯದ ಸಭಾಭವನದಲ್ಲಿ ನಡೆಯಿತು.
ಬೆಂಗಳೂರಿನ ಹೊಸಹಳ್ಳಿ ರಘುರಾಮ, ಮತ್ತೂರು ವಿಶ್ವಜಿತ್ ಹಾಗೂ ಕಾರ್ತಿಕೇಯ ಅವರ ಪಿಟೀಲು ವಾದನಕ್ಕೆ ಮೃದಂಗದಲ್ಲಿ ಆನೂರು ವಿನೋದ್ ಶ್ಯಾಮ್ ಬೆಂಗಳೂರು ಹಾಗೂ ಖಂಜೀರದಲ್ಲಿ ಸುಮುಖ ಕಾರಂತ ಮಂಗಳೂರು ಪಕ್ಕವಾದ್ಯದಲ್ಲಿ ಸಾಥ್ ನೀಡಿದರು. ಇದಕ್ಕೂ ಮೊದಲು ಸುನಾದ ಎಸ್.ಪಿ. ಅವರ ಹಾಡುಗಾರಿಕೆ ಕಛೇರಿ ನಡೆಯಿತು. ಇವರಿಗೆ ಪಿಟೀಲಿನಲ್ಲಿ ಸುಪ್ರೀತ ಪಿ.ಎಸ್. ಹಾಗೂ ಮೃದಂಗದಲ್ಲಿ ಸುಮುಖ ಕಾರಂತ ಸಹಕರಿಸಿದರು. ಇದೇ ಸಂದರ್ಭದಲ್ಲಿ ಸಂಗೀತ ಲೋಕದ ದಿಗ್ಗಜ, ಸಂಗೀತ ಕಲಾನಿಧಿ ಚೆನ್ನೈನ ಓ.ಎಸ್. ತ್ಯಾಗರಾಜನ್ ಅವರನ್ನು ಸ್ಮರಿಸಲಾಯಿತು.
ವೈದ್ಯ ಡಾ. ಸಿ.ವಿ. ರಘುವೀರ್, ನ್ಯಾಯವಾದಿ ಅನಂತಕೃಷ್ಣ ಉಡುಪ ಅವರನ್ನು ಗೌರವಿಸಲಾಯಿತು. ಸಂಗೀತ ಪರಿಷತ್ತಿನ ಜತೆ ಕಾರ್ಯದರ್ಶಿ ಅಶ್ವಿನಿ ಸ್ವಾಗತಿಸಿ ಕಲಾವಿದರನ್ನು ಪರಿಚಯಿಸಿದರು. ಖಜಾಂಚಿ ಸುಬ್ರಹ್ಮಣ್ಯ ಉಡುಪ ವಂದಿಸಿದರು.