ಉಳ್ಳಾಲ : ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಉಳ್ಳಾಲ ಇದರ ವತಿಯಿಂದ ಸಾಹಿತಿ ಪ್ರೊ. ಅಮೃತ ಸೋಮೇಶ್ವರರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 09-01-2024ರ ಮಂಗಳವಾರದಂದು ತೊಕ್ಕೊಟ್ಟು ಒಳಪೇಟೆಯಲ್ಲಿರುವ ಅಬ್ಬಕ್ಕ ಉತ್ಸವ ಸಮಿತಿಯ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಾಗೂ ಸಮಿತಿಯ ಸ್ವಾಗತಾಧ್ಯಕ್ಷ ಕೆ. ಜಯರಾಮ ಶೆಟ್ಟಿ ಮಾತನಾಡಿ “ಅಮೃತರು ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದರು. ಸಾಹಿತ್ಯ ಲೋಕದ ದಿಗ್ಗಜರೂ, ಶ್ರೇಷ್ಠ ವಿದ್ವಾಂಸ, ಶಿಕ್ಷಕ, ಹಾಗೂ ಸಮಿತಿಯ ಗೌರವ ಸಲಹೆಗಾರರಾಗಿದ್ದು, ಸಮಿತಿಗೆ ಮಾರ್ಗದರ್ಶಕರಾಗಿದ್ದರು.” ಎಂದು ಹೇಳಿದರು.
ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್ ಮಾತನಾಡಿ “ಅಮೃತ ಸೋಮೇಶ್ವರರು ಅಪೂರ್ವ ಮೇಧಾವಿ, ಕಳೆದ 26 ವರ್ಷಗಳಿಂದ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವ ಸಲಹೆಗಾರರಾಗಿದ್ದು, ಪ್ರತಿವರ್ಷ ಅಬ್ಬಕ್ಕ ಪ್ರಶಸ್ತಿ, ಪುರಸ್ಕಾರದ ಆಯ್ಕೆ ಅವರಿಂದಲೇ ನಡೆಯುತ್ತಿತ್ತು. ಅವರ ಆಯ್ಕೆಯೇ ಅಂತಿಮವಾಗುತ್ತಿತ್ತು. ಅಲ್ಲದೆ ಅಬ್ಬಕ್ಕ ಸಂಕಥನ, ಉಳ್ಳಾಲದ ಇತಿ-ಅದಿ ಪುಸ್ತಕದ ಪ್ರಧಾನ ಸಂಪಾದಕರಾಗಿದ್ದರು. ಅಬ್ಬಕ್ಕ ನಾಟಕ ಕೂಡಾ ಅವರಿಂದಲೇ ರಚನೆಯಾಗಿತ್ತು. ಅವರ ನಿಧನ ಸಾಹಿತ್ಯ ಲೋಕಕ್ಕೆ, ವಿಶೇಷವಾಗಿ ಅಬ್ಬಕ್ಕ ಉತ್ಸವ ಸಮಿತಿಗೆ ತುಂಬಲಾರದ ನಷ್ಟ.” ಎಂದರು.
ಅಬ್ಬಕ್ಕ ಉತ್ಸವ ಸಮಿತಿಯ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಉಪಾಧ್ಯಕ್ಷ ಯು.ಪಿ. ಆಲಿಯಬ್ಬ, ದೇವಕಿ ಆರ್. ಉಳ್ಳಾಲ್, ಸಮಿತಿಯ ಪದಾಧಿಕಾರಿಗಳಾದ ಕೆ.ಎಂ.ಕೆ. ಮಂಜನಾಡಿ, ಡಿ.ಎನ್. ರಾಘವ, ಸತೀಶ್ ಭಂಡಾರಿ, ಚಿದಾನಂದ ಎ., ರತ್ನಾವತಿ ಜೆ. ಬೈಕಾಡಿ, ಮಲ್ಲಿಕಾ ಭಂಡಾರಿ, ಶಶಿಕಲಾ ಗಟ್ಟಿ, ಹೇಮ ಯು., ಶಶಿಕಾಂತಿ ಉಳ್ಳಾಲ್, ವಾಣಿ ಲೋಕಯ್ಯ, ಸತ್ಯವತಿ, ಲತಾ ಶ್ರೀಧರ್, ಸ್ವಪ್ನ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.