ಮಂಗಳೂರು : ‘ಆರ್ಟಿಸ್ಟ್ಸ್ ಕಂಬೈನ್ಸ್’ ವತಿಯಿಂದ ಚಿತ್ರಕಲಾ ಪ್ರದರ್ಶನ ಹಾಗೂ ಅಭಿನಂದನಾ ಸಮಾರಂಭವು ದಿನಾಂಕ 15-01-2024ರಂದು ಬಲ್ಲಾಳ್ ಭಾಗ್ ಇಲ್ಲಿರುವ ಪ್ರಸಾದ ಆರ್ಟ್ ಗ್ಯಾಲರಿಯಲ್ಲಿ ನಡೆಯಿತು. ಗಲ್ಫ್ ಬಿಸಿನೆಸ್ ಮೆಷಿನ್ಸ್ (ಐಬಿಎಂ) ಕಂಪನಿಯ ನಿವೃತ್ತ ಹಣಕಾಸು ವ್ಯವಸ್ಥಾಪಕ ಸಿ.ಎ. ಜೋಸೆಫ್ ರಾಡ್ರಿಗಸ್ ಇವರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಿತ್ರಕಲಾವಿದ ಉಡುಪಿ ಆರ್ಟಿಸ್ಟ್ಸ್ ಫೋರಂ ಅಧ್ಯಕ್ಷ ಯು.ರಮೇಶ್ ರಾವ್ ಮಾತನಾಡುತ್ತಾ “ಇಂದಿನ ಸೂಕ್ಷ್ಮ ವಾತಾವರಣದಲ್ಲಿ ಕಲಾವಿದರಿಗೆ ರಕ್ಷಣೆ ಕೊಡಲು ಕಲಾವಿದರದ್ದೇ ಆದ ಸಂಘಟನೆಗಳು ಬೇಕೇ ಬೇಕು. ಕಲೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಹಾಗೂ ಜೀವನಕ್ಕಾಗಿ ಕಲೆಯನ್ನು ಅವಲಂಬಿಸಿರುವ ಚಿತ್ರ ಕಲಾವಿದರು ಇದ್ದಾರೆ. ಕಲೆಗಾಗಿಯೇ ಜೀವನವನ್ನು ಮುಡಿಪಾಗಿಟ್ಟವರಿಗೆ ಸಂಘಟನೆ ಅತ್ಯಗತ್ಯ. ಕಲಾವಿದ ಗಣೇಶ ಸೋಮಯಾಜಿ, 1981ರಲ್ಲಿ ಸ್ಥಾಪನೆಯಾದ ಆರ್ಟಿಸ್ಟ್ಸ್ ಕಂಬೈನ್‌ಗೆ ಸತತ 42 ವರ್ಷಗಳಿಂದಲೂ ಟ್ರೆವರ್ ಪಿಂಟೊ ಅಧ್ಯಕ್ಷರು. ಈ ಸಂಘಟನೆಯ ಕಾರ್ಯದರ್ಶಿ ಹಾಗೂ ಖಜಾಂಚಿಗಳೂ ಬದಲಾಗಿಲ್ಲ. ಸಂಘಟನೆಗಾಗಿ ಈ ಮೂವರ ಬದ್ಧತೆ ಅಷ್ಟಿದೆ. ಕಲಾವಿದ ಬೆಳೆಯಲು ಮನೆಯವರ, ಗೆಳೆಯರ ಹಿತೈಷಿ ಪ್ರೋತ್ಸಾಹದ ಜೊತೆಗೆ ಪ್ರತಿಸ್ಪರ್ಧಿ ಹಾಗೂ ವೈರಿಗಳು ಬೇಕು. ಭಿನ್ನಾಭಿಪ್ರಾಯಗಳೂ ಬೇಕು” ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಕಲಾಪೋಷಕ, ಕೃಷಿಕ, ಸಾಮಾಜಿಕ ಕಾರ್ಯಕರ್ತ ಟ್ರೆವರ್ ಪಿಂಟೊ ಅವರಿಗೆ ‘ಕಲಾಪೋಷಕ’ ಪ್ರಶಸ್ತಿ ಹಾಗೂ ಹಿರಿಯ ಚಿತ್ರ ಕಲಾವಿದ ಮಂಗಳೂರು ಮಿನರನ್ಸ್ ಲಿ. ಮುಖ್ಯ ಲೆಕ್ಕಾಧಿಕಾರಿ ಕಮಾಲ್ ಅವರಿಗೆ ‘ಕಲಾ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕಮಾಲ್ ‘ಪ್ರಶಸ್ತಿಗೆ ಹಾಗೂ ನಿಮ್ಮೆಲ್ಲರ ಪ್ರೀತಿಗೆ ಅಭಾರಿ. ಈ ಪ್ರಶಸ್ತಿಯು ಯುವ ಕಲಾವಿದರಿಗೆ ಪ್ರೇರಣೆಯಾಗಲಿ’ ಎಂದರು.
ಪ್ರಸಾದ್ ಆರ್ಟ್ ಗ್ಯಾಲರಿ ಕೋಟಿ ಪ್ರಸಾದ್ ಆಳ್ವ, ಅರುಣ್ ಕುಮಾರ್, ಬಿ.ಗಣೇಶ ಸೋಮಯಾಜಿ, ಅನಂತಪದ್ಮನಾಭ ರಾವ್, ಶರತ್ ಹೊಳ್ಳ ಮತ್ತಿತರರು ಭಾಗವಹಿಸಿದ್ದರು. ಪ್ರಶಸ್ತಿ ವಿಜೇತರ ಕುರಿತು ಆರ್ಟಿಸ್ಟ್ಸ್ ಕಂಬೈನ್ಸ್ ಉಪಾಧ್ಯಕ್ಷ ಶರತ್ ಹೊಳ್ಳ, ಕಾರ್ಯದರ್ಶಿ ಅನಂತ ಪದ್ಮನಾಭ ಮಾತನಾಡಿದರು. ಡಾ. ಎಸ್.ಎಂ. ಶಿವಪ್ರಕಾಶ್ ನಿರೂಪಿಸಿದರು.
ಬಿ.ಗಣೇಶ್ ಸೋಮಯಾಜಿ, ಶರತ್ ಹೊಳ್ಳ, ಕಮಾಲ್, ಮರ್ಲಿನ್ ರಸ್ಕಿನ್ಹಾ, ಕೋಟಿ ಪ್ರಸಾದ್ ಆಳ್ವ, ಎಡ್ಡಿ ಸಿಕ್ಕೇರಾ, ಅನಂತ ಪದ್ಮನಾಭ ರಾವ್, ಡಾ. ಎಸ್.ಎಂ. ಶಿವಪ್ರಕಾಶ್, ಗೌರಿ ಮಲ್ಯ, ಮಂಜುಳಾ ಹಾಗೂ ದಯಾನಂದ ಅವರು ರಚಿಸಿರುವ ಚಿತ್ರ ಕಲಾಕೃತಿಗಳ ಪ್ರದರ್ಶನವನ್ನು ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಲಾಗಿತ್ತು. ಜನವರಿ 24ರವರೆಗೆ ಪ್ರತಿದಿನ ಬೆಳಿಗ್ಗೆ 9.30ರಿಂದ ಸಂಜೆ 7ರವರೆಗೆ ಸಾರ್ವಜನಿಕರಿಗೆ ಚಿತ್ರಕಲಾ ಪ್ರದರ್ಶನದ ವೀಕ್ಷಣೆಗೆ ಅವಕಾಶ ಇದೆ.