ಮಂಗಳೂರು : ಗೋವಿಂದ ದಾಸ ಕಾಲೇಜು, ಸುರತ್ಕಲ್‌ನ ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರದ ವತಿಯಿಂದ ಪ್ರೊ. ಯಚ್.ಜಿ.ಕೆ. ರಾವ್ ದತ್ತಿನಿಧಿ, ವಿದ್ಯಾದಾಯಿನೀ ಹಳೆವಿದ್ಯಾರ್ಥಿ ಸಂಘ, ಬಿ.ಎ.ಎಸ್.ಎಫ್. ಬಾಳ, ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, 1982ರ ವಿಜ್ಞಾನ ತಂಡದ ದತ್ತಿನಿಧಿ, ರಕ್ಷಕ ಶಿಕ್ಷಕ ಸಂಘ, ಗೋವಿಂದ ದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್‌ಗಳ ಸಹಭಾಗಿತ್ವದಲ್ಲಿ ನೀನಾಸಂ ತಿರುಗಾಟ ನಾಟಕೋತ್ಸವ -2024 ಗೋವಿಂದ ದಾಸ ಕಾಲೇಜಿನ ರಂಗ ಮಂದಿರದಲ್ಲಿ ದಿನಾಂಕ 14-01-2024 ಮತ್ತು 15-01-2024ರಂದು ನಡೆಯಿತು.
ನೀನಾಸಂ ನಾಟಕೋತ್ಸವವನ್ನು ಹಿಂದೂ ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ ಹೊಸಬೆಟ್ಟು ಉದ್ಘಾಟಿಸಿ ಶುಭ ಹಾರೈಸಿದರು.ರಂಗನಟಿ ಗೀತಾ ಸುರತ್ಕಲ್ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಮತ್ತು ಜನತೆಯಲ್ಲಿ ಸಾಂಸ್ಕೃತಿಕ ಅಭಿರುಚಿ ಒಡಮೂಡಲು ಸಾಧ್ಯವಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಪಿ. ಮಾತನಾಡಿ “ನೀನಾಸಂ ನಾಟಕೋತ್ಸವ ನಿರಂತರವಾಗಿ ನಡೆಯುವ ಮೂಲಕ ಹೊಸ ಪ್ರೇಕ್ಷಕ ಸಮುದಾಯ ಸೃಷ್ಟಿಗೊಂಡಿದೆ” ಎಂದರು. ಹಿಂದೂ ವಿದ್ಯಾದಾಯಿನೀ ಸಂಘದ ಮಾಜಿ ಕಾರ್ಯದರ್ಶಿ ಎಂ. ವೆಂಕಟ್ರಾವ್, ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ ಹೆಚ್., ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಎಸ್.ಜಿ., ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹರೀಶ, ನೀನಾಸಂ ನಾಟಕ ತಂಡದ ಮಂಜುನಾಥ ಹಿರೇಮಠ ಉಪಸ್ಥಿತರಿದ್ದರು. ವಿನೋದ್ ಕಾರ್ಯಕ್ರಮ ನಿರೂಪಿಸಿದರು.
ಈ ನಾಟಕೋತ್ಸವದಲ್ಲಿ ಚಂದ್ರಶೇಖರ ಕಂಬಾರರ ರಚನೆಯ ಕೆ.ಜಿ.ಕೃಷ್ಣಮೂರ್ತಿ ನಿರ್ದೇಶನದ ‘ಹುಲಿಯ ನೆರಳು’ ನಾಟಕ ಮತ್ತು ಲೂಯಿ ನ ಕೋಶಿ ರಚನೆಯ, ನಟರಾಜ ಹೊನ್ನವಳ್ಳಿಯವರು ಕನ್ನಡಕ್ಕೆ ಭಾಷಾಂತರಿಸಿದ, ಶ್ವೇತಾರಾಣಿ ಎಚ್.ಕೆ. ನಿರ್ದೇಶನದ ‘ಆ ಲಯ ಈ ಲಯ’ ನಾಟಕವು ಪ್ರದರ್ಶನಗೊಂಡವು.