ಮಂಗಳೂರು : ಶ್ರೀಮತಿ ಶಕುಂತಲಾ ಮತ್ತು ತಂಡದಿಂದ ‘ಜಾಂಬವತಿ ಕಲ್ಯಾಣ’ ಪ್ರಸಂಗದ ಯಕ್ಷಗಾನ ಪ್ರದರ್ಶನವು ದಿನಾಂಕ 11-01-2024ರಂದು ಮಂಗಳೂರಿನ ಚಿಲಿಂಬಿಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ನಡೆಯಿತು.
ಪ್ರದರ್ಶನವನ್ನು ವೀಕ್ಷಿಸಿದ ಅವಧೂತ ಶ್ರೀ ವಿನಯ್ ಗುರೂಜಿ ಮಾತನಾಡಿ “ಇಂದು ಯುಕ್ಷಗಾನದ ಸಂದೇಶಗಳ ಮೂಲಕ ಸಮಾಜ ಪರಿವರ್ತನೆ ಮಾಡಲು ಸಾಧ್ಯವಿದೆ. ಅಸತ್ಯದ ವಿರುದ್ಧ ಸತ್ಯ ಗೆಲ್ಲುತ್ತದೆ. ಧರ್ಮ ಸಾರಲ್ಪಡುತ್ತದೆ. ಆ ದೃಷ್ಟಿಯಲ್ಲೂ ಯಕ್ಷಗಾನ ಕಲೆ ಎಲ್ಲೆಡೆ ಮಾನ್ಯತೆ ಪಡೆದಿದೆ.” ಎಂದರು.
ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಅಧ್ಯಕ್ಷ ಶ್ರೀ ವಿಶ್ವಾಸ್ ಕುಮಾರ್ ದಾಸ್ ಮಾತನಾಡಿ “ಯುಕ್ಷಗಾನ ಕಲೆ ರಾಜಕಲೆ. ಅದಕ್ಕೆ ಕಲಾ ಸಂಘಟಕರು ಹಾಗೂ ಕಲಾ ಪೋಷಕರು ನಿರಂತರ ಪ್ರೋತ್ಸಾಹ ನೀಡಬೇಕು. ಆ ನಿಟ್ಟಿನಲ್ಲಿ ಶಕುಂತಳಾ ತಂಡಕ್ಕೆ ನಾವಿಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟಿದ್ದೇವೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅನೇಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶಗಳಿವೆ. ಅದರಲ್ಲಿ ಇದೂ ಒಂದು. ಇನ್ನು ಮುಂದೆಯೂ ಈ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾವು ಪ್ರದರ್ಶನಾವಕಾಶ ಕೊಡುತ್ತೇವೆ.” ಎಂದರು. ಮಂದಿರದ ಇನ್ನೋರ್ವ ವಿಶ್ವಸ್ಥೆ ಶ್ರೀಮತಿ ಲಾವಣ್ಯ ವಿಶ್ವಾಸ್ ದಾಸ್ ಶುಭಕೋರಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸೋಮೇಶ್ವರ ಪುರಸಭಾ ಸದಸ್ಯ ಶ್ರೀ ದೀಪಕ್ ಪಿಲಾರ್, ಮೆಸ್ಕಾಂನ ಅಧಿಕಾರಿ ಶ್ರೀ ನಿತೇಶ್, ಯುವ ಉದ್ಯಮಿ ರಕ್ಷಿತ್, ಮಧುಸೂದನ ಎ., ಲಕ್ಷೀನಾರಾಯಣ ಹೊಳ್ಳ, ಅಂಬಾತನಯ ಅರ್ನಾಡಿ ಹಾಗೂ ನಾಗರಾಜ ಖಾರ್ವಿ ಭಾಗವಹಿಸಿದರು. ಶ್ರೀ ಅದ್ವಿತ್ ಪ್ರಾರ್ಥಿಸಿ, ಶ್ರೀ ನಿಹಾಲ್ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ, ಶ್ರೀಮತಿ ವಿಜಯಲಕ್ಷ್ಮೀ ನಿರೂಪಿಸಿ, ವೀಣಾ ಕೆ. ಉಜಿರೆ ಧನ್ಯವಾದವಿತ್ತರು.