ತೆಕ್ಕಟ್ಟೆ: ಉಳ್ತೂರು ಮೂಡುಬೆಟ್ಟಿನ ಚಿತ್ತೇರಿ ನಾಗಬ್ರಹ್ಮ, ಶ್ರೀ ನಂದಿಕೇಶ್ವರ ಸಪರಿವಾರ ದೈವಸ್ಥಾನ ವಾರ್ಷಿಕ ಹಾಲು ಹಬ್ಬ ಹಾಗೂ ಗೆಂಡಸೇವೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ಮಕ್ಕಳ ಮೇಳದ ತಾಳಮದ್ದಳೆ ಪ್ರಸ್ತುತಿಯು ದಿನಾಂಕ 15-01-2024 ರಂದು ನಡೆಯಿತು.
ತಂಡವನ್ನು ಗೌರವಿಸಿ ಮಾತನಾಡಿದ ಕಲಾ ಪೋಷಕರಾದ ರಮೇಶ್ ಅಡಿಗ ಉಳ್ತೂರು “ಕಲೆಗಳು ಮಕ್ಕಳಲ್ಲಿ ಬೆರೆತಾಗ ಕಲೆಯೂ ಬೆಳೆಯುತ್ತದೆ. ತೆಕ್ಕಟ್ಟೆಯಲ್ಲಿ ಸಾಂಸ್ಕೃತಿಕ ಕಲಾತಾಣವಾಗಿ ಹೆಮ್ಮರವಾಗಿ ಬೆಳೆದ ಯಶಸ್ವೀ ಕಲಾವೃಂದದ ಪುಟಾಣಿಗಳ ಪ್ರತಿಭೆ ಅಸಾಧಾರಣವಾದದ್ದು. ‘ದ್ರೌಪದಿ ಪ್ರತಾಪ’ ಯಕ್ಷಗಾನ ತಾಳಮದ್ದಳೆ ಪ್ರಸ್ತುತಿಯ ಮೂಲಕ ಪ್ರಬುದ್ಧ ಕಲಾ ಪ್ರತಿಭೆಯನ್ನು ಹೊರ ಹಾಕಿ ಜನಮನವನ್ನು ಗೆದ್ದ ಮಕ್ಕಳು ಭವಿಷ್ಯದ ಕಲಾ ಪ್ರತಿಭೆಯ ರೂವಾರಿಗಳು.” ಎಂದು ಅಭಿಪ್ರಾಯಪಟ್ಟರು.
ಆಡಳಿತ ಮುಕ್ತೇಸರರಾದ ರಾಜೀವ ಶೆಟ್ಟಿ ಚಿಣ್ಣರ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸಿ ಹುರಿದುಂಬಿಸಿ ಮಾತನಾಡಿ “ಮಕ್ಕಳಲ್ಲಿನ ಪ್ರತಿಭೆ ಎನ್ನುವುದು ಹರಿಯುವ ನೀರು. ನಿಂತ ನೀರಲ್ಲ. ಪ್ರತಿಭೆ ಅರಳಿ ಹಂಚಿ ಪಸರಿಸಿದಲ್ಲಿ ಅವರು ಸಮಾಜದ ಕಲಾ ಶಕ್ತಿಗಳು. ಇಂತಹ ಮಕ್ಕಳನ್ನು ಪ್ರೋತ್ಸಾಹಿಸುವುದು ಸಮಾಜದ ಪ್ರಮುಖರ ಕರ್ತವ್ಯ.” ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು, ಯಲ್ಲಾಪುರ ರಾಘವೇಂದ್ರ ಹೆಗಡೆ, ಕೋಟ ಶಿವಾನಂದ ಹಾಗೂ ಯಶಸ್ವೀ ಕಲಾವೃಂದದ ಬಾಲ ಪ್ರತಿಭೆಗಳು ರಂಗದಲ್ಲಿ ಉಪಸ್ಥಿತರಿದ್ದರು.