ಮಂಗಳೂರು: ಭಾರತ್ ಫೌಂಡೇಶನ್ ವತಿಯಿಂದ ಮಿಥಿಕ್ ಸೊಸೈಟಿ ಸಹಯೋಗದಲ್ಲಿ ‘ಮಂಗಳೂರು ಲಿಟ್ ಫೆಸ್ಟ್’ನ ಆರನೇ ಆವೃತ್ತಿ ಜನವರಿ 19, 20 ಮತ್ತು 21 ರಂದು ಮಂಗಳೂರಿನ ಟಿ. ಎಂ. ಎ. ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ.
ಒಟ್ಟು 29 ಕಲಾಪಗಳನ್ನೊಳಗೊಂಡ ವಿಚಾರ ಸಂಕಿರಣದಲ್ಲಿ 60ಕ್ಕೂ ಅಧಿಕ ಮಂದಿ ಸಾಹಿತಿ, ವಾಗ್ಮಿಗಳು ಭಾಗವಹಿಸಲಿದ್ದಾರೆ. ಜನವರಿ 19ರಂದು ಸಂಜೆ ಉದ್ಘಾಟನೆ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದ ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ, ಹೆಸರಾಂತ ಕಲಾವಿದೆ ರಾಧೆ ಜಗ್ಗಿ, ನಿಟ್ಟೆ ವಿಶ್ವವಿದ್ಯಾಲಯದ ಡಾ. ವಿನಯ್ ಹೆಗ್ಡೆ, ಮಿಥಿಕ್ ಸೊಸೈಟಿಯ ಕಾರ್ಯದರ್ಶಿ ರವಿ ಹಾಗೂ ವನಿತಾ ಸೇವಾ ಸಮಾಜ ಧಾರವಾಡದ ಕಾರ್ಯದರ್ಶಿ ಮಧುರಾ ಹೆಗಡೆ ಭಾಗವಹಿಸಲಿದ್ದಾರೆ. ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಸಂಸ್ಥೆ ( ಐ. ಸಿ. ಎಸ್. ಎಸ್. ಆರ್. ) ಸದಸ್ಯ ಕಾರ್ಯದರ್ಶಿ ಡಾ. ಧನಂಜಯ ಸಿಂಗ್, ರಕ್ಷಣಾ ಸಚಿವರ ಸಲಹೆಗಾರ ಲೆ. ಜ. ವಿನೋದ ಖಂಡಾರೆ ಸಹಿತ ಮತ್ತಿತರರು ಪಾಲ್ಗೊಳ್ಳಲಿರುವರು.
ಈ ಬಾರಿಯ ‘ದಿ ಐಡಿಯಾ ಆಫ್ ಭಾರತ್’ ಪ್ರಶಸ್ತಿಗೆ ವನಿತಾ ಸೇವಾ ಸಮಾಜ ಧಾರವಾಡ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಹೆಸರಾಂತ ಭರತನಾಟ್ಯ ಕಲಾವಿದೆ ರಾಧೆ ಜಗ್ಗಿಅವರಿಂದ ದಿನಾಂಕ 19-01-2024 ಮತ್ತು ಶಾಸ್ತ್ರೀಯ ಸಂಗೀತ ಕಲಾವಿದರಾದ ಸಂದೀಪ್ ನಾರಾಯಣ್ ಅವರಿಂದ ದಿನಾಂಕ 20-01-2024ರ ಸಂಜೆ ಕಾರ್ಯಕ್ರಮ ನಡೆಯಲಿದೆ. ಚಲನಚಿತ್ರ ಪ್ರದರ್ಶನ, ಮಕ್ಕಳ ಸಾಹಿತ್ಯ ಅಭಿರುಚಿ ಮತ್ತು ಕಥೆಯ ಬಗ್ಗೆ ಪಾಲಕರಿಗೆ ಆಸಕ್ತಿ ಬೆಳೆಸುವ ದೃಷ್ಟಿಯಿಂದ ಕಾರ್ಕಳದ ವಂದನಾ ರೈ ಅವರಿಂದ ಮಕ್ಕಳಿಗಾಗಿ ಚಿಣ್ಣರ ಅಂಗಳ ನಡೆಯಲಿದೆ. ಪುಸ್ತಕ ಮಳಿಗೆ, ತುಳು ಲಿಪಿ ಕಲಿಕಾ ಕಾರ್ಯಾಗಾರ, ಕ್ಲೇ ಮಾಡಲಿಂಗ್, ದೇಸಿ ಆಟಗಳು ಸೇರಿದಂತೆ ಲೇಖಕರು ಮತ್ತು ಪ್ರಮುಖರೊಂದಿಗೆ ಸಂವಾದ (ಹರಟೆ ಕಟ್ಟೆ) ಈ ಬಾರಿಯ ಲಿಟ್ ಫೆಸ್ಟ್‌ನ ವಿಶೇಷತೆ.
ಸಾಹಿತ್ಯ ಲೋಕದ ಮೂವರು ಸಾಧಕರಾದ ಕುವೆಂಪು, ಬೇಂದ್ರೆ ಮತ್ತು ಪಂಜೆ ಮಂಗೇಶರಾವ್ ಅವರ ಕುರಿತು ವಿಶೇಷ ಅವಧಿಗಳು ಜರುಗಲಿವೆ. ವಾಗ್ಮಿಗಳು, ಸಂಶೋಧಕರು, ವಿಷಯ ಪರಿಣಿತರು ಇರುವರು. ಡಾ.ಜಿ.ಬಿ. ಹರೀಶ, ಪ್ರಕಾಶ್ ಬೆಳವಾಡಿ, ಡಾ. ಅಜಕ್ಕಳ ಗಿರೀಶ್ ಭಟ್ ಸಹಿತ ವಿದ್ವಾಂಸರು ವಿವಿಧ ಗೋಷ್ಠಿಯಲ್ಲಿ ಭಾಗವಹಿಸುವರು. ಲೇಖಕರು ಮತ್ತು ಪ್ರಮುಖರೊಂದಿಗೆ ಸಂವಾದ ಈ ಬಾರಿಯ ಲಿಟ್ ಫೆಸ್ಟ್‌ನ ವಿಶೇಷತೆಯಾಗಿದೆ. 13ಮಂದಿ ಲೇಖಕರು ಒಟ್ಟು ಸೇರಿ ರಚಿಸಿದ ಐಡಿಯಾ ಆಫ್ ಭಾರತ್ ಪುಸ್ತಕ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆಯಾಗಲಿದೆ.