ಕೋಟ : ಕಾರ್ಕಡ ಸುಬ್ರಾಯ ಹೊಳ್ಳ ಮತ್ತು ಜಲಜಾಕ್ಷಿ ಹೊಳ್ಳ ಕುಟುಂಬದ ಪೂರ್ವಜರ ಹರಕೆಯಾಟವಾಗಿ ಕಾರ್ಕಡದ ಮೂಲ ಮನೆ ‘ಸದಾನಂದ’ದಲ್ಲಿ ಕೋಟ ಅಮೃತೇಶ್ವರಿ ಮೇಳದ ಪ್ರದರ್ಶನ ದಿನಾಂಕ 13-01-2024ನೇ ಶನಿವಾರದಂದು ನಡೆಯಿತು.
ಇದೇ ಸಂದರ್ಭದಲ್ಲಿ ಮೇಳದ ಹಿರಿಯ ಸ್ತ್ರೀ ವೇಷ ಕಲಾವಿದ ಮೊಳಹಳ್ಳಿ ಕೃಷ್ಣ ನಾಯಕ್ ಮತ್ತು ಎರಡನೇ ವೇಷಧಾರಿ ಕೋಟ ಸುರೇಶ್ ಅವರನ್ನು ಹೊಳ್ಳ ಕುಟುಂಬದ ಪರವಾಗಿ ಗೌರವ ಧನದೊಂದಿಗೆ ಸನ್ಮಾನಿಸಲಾಯಿತು. ಸ್ಥಳೀಯ ಯುವ ಪ್ರತಿಭೆ ಅಮೃತೇಶ್ವರಿ ಮೇಳದ ಸಂಗೀತಗಾರ ಚಂದ್ರಕಾಂತ್ ಅವರನ್ನು ಗುರುತಿಸಿ ಪ್ರೋತ್ಸಾಹಿಸಲಾಯಿತು.
ಕಲಾವಿದರನ್ನು ಗೌರವಿಸಿದ ಬಳಿಕ ಮಾತನಾಡಿದ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ “ಕಲೆ ಮತ್ತು ಸಾಹಿತ್ಯ ಬದುಕಿನ ಜೀವಾಳ. ಧಾರ್ಮಿಕ ಆರಾಧನೆಯಷ್ಟೇ ಕಲಾರಾಧನೆಯು ಮುಖ್ಯ. ಹರಕೆ ಬಯಲಾಟಗಳ ಮೂಲಕ ಭಗವತ್ ಕೃಪೆಯನ್ನು ಹೊಂದುವ ಸನಾತನ ಸಂಸ್ಕೃತಿ ನಮ್ಮದಾಗಿದೆ. ಕಲೆ ಮತ್ತು ಕಲಾವಿದರನ್ನು ಗೌರವಿಸುವ ಮೂಲಕ ನಮ್ಮ ಸಾಂಸ್ಕೃತಿಕ ಜಗತ್ತು ಜೀವಂತವಾಗಿಡುವಲ್ಲಿ ನಮ್ಮೆಲ್ಲರ ಹೊಣೆಗಾರಿಕೆ ಗುರುತರವಾದುದು.” ಎಂದರು.
ಕಲಾ ಸಾಹಿತಿ ಎಚ್. ಜನಾರ್ದನ ಹಂದೆ ಅಭಿನಂದನೆಯ ಮಾತುಗಳನ್ನಾಡಿದರು. ಗೆಳೆಯರ ಬಳಗದ ಅಧ್ಯಕ್ಷ ತಾರಾನಾಥ ಹೊಳ್ಳ, ಕಲಾ ಸಂಘಟಕ ವಿಶ್ವೇಶ್ವರ ಹೊಳ್ಳ, ಕುಟುಂಬದ ಸದಸ್ಯರಾದ ಮಲ್ಲಿಕ ಹೊಳ್ಳ, ಕಾತ್ಯಾಯಿನಿ ಸದಾನಂದ ಹೊಳ್ಳ, ಸುಧೀಂದ್ರ ಹೊಳ್ಳ, ಇಂದಿರಾ ಹೊಳ್ಳ, ರವೀಂದ್ರ ಹೊಳ್ಳ, ಲಲನ ಹೊಳ್ಳ, ಪವನ ಹೊಳ್ಳ, ಚೇತನಾ ರಾಘವೇಂದ್ರ ರಾವ್, ಅನುಷ, ಮನಿಷ ಉಪಸ್ಥಿತರಿದ್ದರು.
ಯಕ್ಷ ಕಲಾವಿದ, ಉಪನ್ಯಾಸಕ ಸುಜಯೀಂದ್ರ ಹಂದೆ ಎಚ್. ಕಾರ್ಯಕ್ರಮ ನಿರ್ವಹಿಸಿದರು.