ಮಂಗಳೂರು : ಜನವರಿ 19, 20 ಮತ್ತು 21ರಂದು ಮೂರು ದಿನಗಳ ಕಾಲ ಮಂಗಳೂರಿನ ಟಿ. ಎಂ. ಎ. ಪೈ ಇಂಟರ್‌ನ್ಯಾಷನಲ್ ಕನ್ವೆನ್ನನ್ ಸೆಂಟರ್‌ನಲ್ಲಿ ನಡೆಯಲಿರುವ ಮಂಗಳೂರು ಲಿಟ್ ಫೆಸ್ಟ್‌ನ ಆರನೇ ಆವೃತ್ತಿಯು ದಿನಾಂಕ 19-01-2024ರ ಸಂಜೆ 6.00 ಗಂಟೆಗೆ ಅದ್ಧೂರಿಯಾಗಿ ಶುಭಾರಂಭಗೊಂಡಿತು.
ಪಲ್ಲಕ್ಕಿ ಮೆರವಣಿಗೆಯೊಂದಿಗೆ ಪ್ರಾರಂಭಗೊಂಡ 6ನೇ ವರ್ಷದ ‘ಮಂಗಳೂರು ಲಿಟ್ ಫೆಸ್ಟ್’ಅನ್ನು ಚಿಂತಕ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಉದ್ಘಾಟಿಸಿ ಮಾತನಾಡಿ “ಸಾಹಿತ್ಯವೆಂದರೆ ಸ್ವಾಧ್ಯಾಯ, ಸಾಹಿತ್ಯದಲ್ಲಿ ಸಾಮಾನ್ಯವಾಗಿ ಬಳಸುವ ಪದ ಸೃಜನಶೀಲತೆ, ಸೃಜನಶೀಲತೆಯ ಹುಟ್ಟು ಇರುವುದು. ಆದರ್ಶ ಮತ್ತು ನೋವನ್ನು ಆಲಿಸುವ ಸಂವೇದನಾಶೀಲತೆಯ ಸಮ್ಮಿಲನದಲ್ಲಿ, ನಮ್ಮನ್ನು ಆಳುತ್ತಿರುವುದು ಯಾವುದೇ ಸರ್ಕಾರವಲ್ಲ, ಬದಲಾಗಿ ಭಾಷೆ. ಇದೇ ಶಾಂತಿಯನ್ನೂ ಕಟ್ಟುತ್ತದೆ.” ಎಂದರು.
ವೇದಿಕೆಯಲ್ಲಿ ‘ಮಿಥಿಕ್ ಸೊಸೈಟಿ’ ಬೆಂಗಳೂರು ಇದರ ಗೌರವ ಕಾರ್ಯದರ್ಶಿಗಳಾದ ಎಸ್. ರವಿ ಮಾತನಾಡಿ “ಭಾರತದ ಪರಂಪರೆಯ ಗೌರವವನ್ನು ಎತ್ತಿ ಹಿಡಿಯುತ್ತಾ, ಈ ‘ಲಿಟ್ ಫೆಸ್ಟ್’ ಸಾಹಿತ್ಯ, ಕಲೆ, ಸಂಸ್ಕೃತಿಯ ಕುರಿತ ವಿಶೇಷ ಅರಿವು ಮತ್ತು ವಿವಿಧ ವಿಚಾರಗೋಷ್ಠಿಗಳಿಗೆ ಸಾಕ್ಷಿಯಾಗಲಿದೆ.” ಎಂದರು. ತಮ್ಮ ಸಮಾಜ ಸೇವೆಗಾಗಿ ತಮ್ಮ ಸಂಸ್ಥೆಯ ಪರವಾಗಿ ಸನ್ಮಾನವನ್ನು ಸ್ವೀಕರಿಸಿದ ಧಾರವಾಡದ ‘ವನಿತಾ ಸೇವಾ ಸಮಾಜ ಸಂಸ್ಥೆ’ಯ ಕಾರ್ಯದರ್ಶಿ ಮಧುರಾ ಹೆಗ್ಡೆ, ‘ಭಾರತ್ ಫೌಂಡೇಶ’ನಿನ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸುನಿಲ್ ಕುಲಕರ್ಣಿ, ಶಿರಾಜ್ ಗುಡಿ ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯಲ್ಲಿ ಉಪಸ್ಥಿತಿರಿದ್ದರು.
‘ಭಾರತ್ ಫೌಂಡೇಶನ್’ ಟ್ರಸ್ಟಿನ ಸುನಿಲ್ ಕುಲಕರ್ಣಿ ಸ್ವಾಗತಿಸಿ. ವಂದಿಸಿದರು. ಅಭಿಷೇಕ್ ಶೆಟ್ಟಿ ಮತ್ತು ನಿಧಿ ಹೆಗ್ಡೆ ನಿರೂಪಿಸಿದರು. ಈ ಸಂದರ್ಭ ‘ದಿ ಐಡಿಯಾ ಆಫ್ ಭಾರತ’ ಎಂಬ ಲೇಖನ ಸಂಕಲನವೊಂದರ ಬಿಡುಗಡೆ ಸಮಾರಂಭವೂ ಜರುಗಿತು, ಸಭಾ ಕಾರ್ಯಕ್ರಮದ ಬಳಿಕ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ರಾಧೆ ಜಗ್ಗಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ದಿನಾಂಕ 20-01-2024ರ ಶನಿವಾರ ಸಾಯಂಕಾಲ ಎರಡು ವೇದಿಕೆಗಳಲ್ಲಿ ವಿವಿಧ ಕಮ್ಮಟಗಳು ಹಾಗೂ ಶಾಸ್ತ್ರೀಯ ಸಂಗೀತ ಕಲಾವಿದರಾದ ಸಂದೀಪ್ ನಾರಾಯಣ್ ಇವರಿಂದ ಸಂಗೀತ ಕಛೇರಿ ನಡೆಯಲಿರುವುದು.
ಸಿನಿಮಾ ಪ್ರದರ್ಶನ, ಮಕ್ಕಳ ಸಾಹಿತ್ಯ ಅಭಿರುಚಿ ಮತ್ತು ಕಥೆಯ ಬಗ್ಗೆ ಪಾಲಕರಿಗೆ ಆಸಕ್ತಿ ಬೆಳೆಸುವ ದೃಷ್ಟಿಯಿಂದ ಕಾರ್ಕಳದ ವಂದನಾ ರೈ ಅವರಿಂದ ಮಕ್ಕಳಿಗಾಗಿ ‘ಚಿಣ್ಣರ ಅಂಗಳ’ ನಡೆಯಲಿದೆ. ಪುಸ್ತಕ ಮಳಿಗೆ, ತುಳು ಅಕ್ಷರ ಕಲಿಕಾ ಕಾರ್ಯಾಗಾರ, ಕ್ಲೇ ಮೊಡಲಿಂಗ್, ದೇಶೀ ಆಟಗಳು ಸೇರಿದಂತೆ ಲೇಖಕರು ಮತ್ತು ಪ್ರಮುಖರೊಂದಿಗೆ ಸಂವಾದ (ಹರಟೆ ಕಟ್ಟೆ) ಈ ಬಾರಿಯ ಲಿಟ್ ಫೆಸ್ಟ್‌ನ ವಿಶೇಷತೆಯಾಗಿದೆ. ಸಾಹಿತ್ಯ ಲೋಕದ ಮೂರು ಮಂದಿ ಸಾಧಕರಾದ ಕುವೆಂಪು, ಬೇಂದ್ರೆ ಮತ್ತು ಪಂಜೆ ಮಂಗೇಶರಾಯರ ಕುರಿತು ವಿಶೇಷ ಅವಧಿಗಳು ಜರುಗಲಿವೆ. ವಾಗ್ಮಿಗಳು, ಸಾಹಿತಿಗಳು, ಸಂಶೋಧಕರು, ವಿಷಯ ಪರಿಣಿತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.