ಬೆಂಗಳೂರು : ‘ಸಂಜಲಿ ಸೆಂಟರ್ ಫಾರ್ ಒಡಿಸ್ಸಿ ಡ್ಯಾನ್ಸ್’ ಖ್ಯಾತ ನೃತ್ಯಶಾಲೆಯ ಅಂತರರಾಷ್ಟ್ರೀಯ ಒಡಿಸ್ಸಿ ನೃತ್ಯಕಲಾವಿದೆ ಹಾಗೂ ನೃತ್ಯಾಚಾರ್ಯ ಶರ್ಮಿಳಾ ಮುಖರ್ಜಿಯವರ ನುರಿತ ಗರಡಿಯಲ್ಲಿ ದಶಕದ ಕಾಲ ನೃತ್ಯಶಿಕ್ಷಣ ಪಡೆದ ಉದಯೋನ್ಮುಖ ನೃತ್ಯ ಕಲಾವಿದೆಯರಾದ ಶ್ರೇಯಾನ್ಷಿ ದಾಸ್ ಮತ್ತು ಜಾನ್ವಿ ಮುದುಳಿ ಪ್ರತಿಭಾವಂತ ಶಿಷ್ಯರು. ನಾಡಿನಾದ್ಯಂತ ವಿವಿಧ ನೃತ್ಯೋತ್ಸವಗಳಲ್ಲಿ ನರ್ತಿಸಿರುವ ಉಭಯ ಕಲಾವಿದೆಯರು, ಅನೇಕ ನೃತ್ಯ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು, ಸಂಜಲಿ ನೃತ್ಯಶಾಲೆ ಆಯೋಜಿಸಿದ ಎಲ್ಲಾ ನೃತ್ಯರೂಪಕಗಳಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದವರು. ಇಬ್ಬರೂ ಚಂದೀಘಡದ ಪ್ರಾಚೀನ್ ಕಲಾಕೇಂದ್ರದ ‘ಸಂಗೀತ್ ಭೂಷಣ್ ಫೈನಲ್’ ನೃತ್ಯಪರೀಕ್ಷೆಯನ್ನು ಸಂಪೂರ್ಣಗೊಳಿಸಿದ್ದಾರೆ. ಈ ಇಬ್ಬರು ಕಲಾವಿದೆಯರು ತಮ್ಮ ಒಡಿಸ್ಸಿ ‘ರಂಗಪ್ರವೇಶ’ವನ್ನು ದಿನಾಂಕ 19-01-2024ರ ಶುಕ್ರವಾರದಂದು ನೆರವೇರಿಸಿಕೊಂಡರು.
ಶ್ರೀಮತಿ ಸಂಗೀತ ದಾಸ್ ಮತ್ತು ಶ್ರೀ ಸಂಜಯ್ ದಾಸ್ ಪುತ್ರಿಯಾದ ಕು. ಶ್ರೇಯಾನ್ಷಿ ದಾಸ್ ತನ್ನ 6 ನೆಯ ಎಳವೆಯಿಂದಲೇ ನೃತ್ಯಾಸಕ್ತಿ ಹೊಂದಿದ್ದು, ಗುರು ಶರ್ಮಿಳಾ ಮುಖರ್ಜಿ ಅವರಲ್ಲಿ ಕಳೆದ 11 ವರ್ಷಗಳಿಂದ ಒಡಿಸ್ಸಿ ನೃತ್ಯವನ್ನು ಕಲಿಯುತ್ತಿದ್ದಾರೆ. ಜೊತೆಗೆ ಇವರು, ಕಥಕ್ ನೃತ್ಯಶೈಲಿಯಲ್ಲೂ ಅಭ್ಯಾಸ ಮಾಡಿ ಪಶ್ಚಿಮ ಬಂಗಾಳದ ಬಂಗೀಯ ಸಂಗೀತ್ ಪರಿಷತ್ತಿನ ‘ಸಂಗೀತ್ ವಿಭಾಕರ್’ ನೃತ್ಯಪರೀಕ್ಷೆಯಲ್ಲಿ ಜಯಶಾಲಿಯಾಗಿದ್ದಾರೆ. ಪ್ರಸ್ತುತ ಇವರು, 11 ನೆಯ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದು, ಕೀಬೋರ್ಡ್ ಮತ್ತು ತೈಲವರ್ಣ ಪೇಯಿಂಟಿಂಗ್ ಇವರ ಇನ್ನಿತರ ಹವ್ಯಾಸಗಳು.
ಶ್ರೀಮತಿ ಶ್ರೀಲೇಖ ಸಿಂಗ್ ಮತ್ತು ಶ್ರೀ ಜಗತ್ ಜಿತ್ ಮುದುಳಿ ಪುತ್ರಿಯಾದ ಕು. ಜಾನ್ವಿ ಮುದುಳಿ ತನ್ನ 7 ನೆಯ ವಯಸ್ಸಿಗೆ ಒಡಿಸ್ಸಿ ನೃತ್ಯ ಕಲಿಯಲಾರಂಭಿಸಿ, ಗುರು ಶರ್ಮಿಳಾ ಅವರಲ್ಲಿ ಕಳೆದ 8 ವರ್ಷಗಳಿಂದ ಶಿಷ್ಯತ್ವ ಮಾಡುತ್ತಿದ್ದಾರೆ. ವೈಟ್ ಫೀಲ್ಡ್ ನಲ್ಲಿರುವ ಡೀನ್ಸ್ ಅಕಾಡೆಮಿಯಲ್ಲಿ 9 ನೆಯ ತರಗತಿಯಲ್ಲಿ ಓದುತ್ತಿದ್ದಾರೆ. ಅಂತರ್ಶಾಲಾ ಶಾಸ್ತ್ರೀಯ ನೃತ್ಯಸ್ಪರ್ಧೆಗಳಲ್ಲಿ ಭಾಗವಹಿಸಿರುವ ಜಾನ್ವಿ ಅನೇಕ ಬಹುಮಾನಗಳನ್ನು ಗಳಿಸಿದ್ದಾರೆ. ಕ್ರೀಡೆಗಳಲ್ಲೂ ಮುಂದಿರುವ ಇವರು ಚಿತ್ರಕಲೆಯಲ್ಲೂ ಆಸಕ್ತರು.
ಇಬ್ಬರು ಕಲಾವಿದೆಯರು ನೀಡಿರುವ ಕೆಲವು ನೃತ್ಯ ಪ್ರದರ್ಶನಗಳೆಂದರೆ–ಚಿನ್ನ ಕಲಾನಾದಂ, ಬೆಂಗಳೂರು ಒಡಿಸ್ಸಿ ಉತ್ಸವ, ಮೈಸೂರು ಒಡಿಸ್ಸಿ ಉತ್ಸವ, ನಕ್ಷತ್ರ, ಕೇರಳದ ಸೂರ್ಯ ಫೆಸ್ಟಿವಲ್, ಸ್ವರಲಯ ಫೆಸ್ಟಿವಲ್ ಹಾಗೂ ‘ಸಂಜಲಿ’ ನೃತ್ಯಶಾಲೆಯ ಸಮರ್ಪಣ ಡ್ಯಾನ್ಸ್ ಫೆಸ್ಟಿವಲ್ ಹಾಗೂ ‘ಪ್ರವಾಹ’ ದಲ್ಲೂ ಭಾಗವಹಿಸಿದ ಹೆಮ್ಮೆ ಇವರಿಬ್ಬರದು.
ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.