ಶ್ರೀರಾಜ್ ವಕ್ವಾಡಿ ಇವರು ಈಗಾಗಲೇ ಮೂರು ಕವನ ಸಂಕಲನ ಹಾಗೂ ಒಂದು ಕಥಾಸಂಕಲನವನ್ನು ಪ್ರಕಟಿಸಿದ್ದಾರೆ. ವೃತ್ತಿಯಿಂದ ಜರ್ನಲಿಸ್ಟ್ ಆಗಿರುವ ಇವರು ಪ್ರಸಕ್ತ ರಾಜಕೀಯದ ಕುರಿತು ಅಂಕಣಗಳನ್ನೂ ಬರೆಯುತ್ತಾರೆ. ‘ಅತ್ತ ನಕ್ಷತ್ರ’ ಇವರು ಇತ್ತೀಚೆಗೆ ಬಿಡುಗಡೆಯಾದ ಕಿರು ಕಾದಂಬರಿ. ಗದ್ಯಕ್ಕೂ ಮನಮುಟ್ಟುವ ಕಾವ್ಯಾತ್ಮಕ ಭಾಷೆಯನ್ನು ರೂಢಿಸಿಕೊಂಡದ್ದು ಇವರು ವಿಶಿಷ್ಟ ಶೈಲಿ.
ಹೊಸ ಕಥೆಯೇನೂ ಇಲ್ಲಿಲ್ಲ. ಲಾಗಾಯ್ತಿನಿಂದ ಸಾಹಿತಿಗಳ ಮೂಲಕ ಚರ್ವಿತ ಚರ್ವಣಗೊಂಡ ಅದೇ ಹಳೆಯ ಪ್ರೀತಿ-ಪ್ರೇಮದ ಕಥೆ. ಪ್ರಸ್ತುತ ಆಧುನಿಕ ಸಂದರ್ಭಕ್ಕೆ ತಕ್ಕಂತೆ ಪ್ರೀತಿ ಪ್ರೇಮಗಳಿಗೆ ಇಂದಿನ ಯುವತಿಯರು ಯಾವ ರೀತಿ ಸ್ಪಂದಿಸುತ್ತಾರೆ ಅನ್ನುವುದನ್ನು ಬೇರೆ ಬೇರೆ ಸಂಬಂಧಗಳ ಚಿತ್ರಣದ ಮೂಲಕ ಶ್ರೀರಾಜ್ ಕಟ್ಟಿ ಕೊಡುತ್ತಾರೆ.
ಕೃತಿಯ ಫೋಕಸ್ ಇರುವುದು ಅಭಿಜ್ಞಾ ಮತ್ತು ಸಾಕ್ಷಿಯರ ಮೇಲೆ. ಉಳಿದೆಲ್ಲರೂ ಅವರು ಸುತ್ತ ತಿರುಗುವ ಪಾತ್ರಗಳು. ಯಾವುದೇ ಫಲಾಪೇಕ್ಷೆಯಿಲ್ಲದೆ ಪ್ರೀತಿಗೋಸ್ಕರ ಪ್ರೀತಿ ಮಾಡುವ ಅಭಿಜ್ಞಾ-ಸಾಕ್ಷಿಯರ ಭವಿಷ್ಯದ ಕನಸುಗಳನ್ನು ಅಂತರ್ಜಾತಿ ಎಂಬ ಭೂತ ಹೊಸಕಿ ಹಾಕುತ್ತಿದೆ. ಹಿರಿಯರನ್ನು ಎದುರಿಸುವ ಶಕ್ತಿಯಿಲ್ಲದೆ ಸಾಕ್ಷಿ ಅವರು ಹುಡುಕಿದ ವ್ಯಕ್ತಿಯನ್ನು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರೂ ಹೇಗೋ ಹೊಂದಿಕೊಂಡು ಬದುಕನ್ನು ಅದು ಇದ್ದಂತೆ ಸ್ವೀಕರಿಸಿದರೂ ಬದುಕು ಅವಳನ್ನು ನಿರ್ದಯವಾಗಿ ವಂಚಿಸುತ್ತಿದೆ. ಸಾಕ್ಷಿಯೇ ಇಲ್ಲದೆ ಬದುಕನ್ನು ಒಪ್ಪಿಕೊಳ್ಳಲಾಗದೆ ಖಿನ್ನತೆಗೆ ಜಾರಿದ ಅಭಿಜ್ಞ, ಮನಶಾಸ್ತ್ರಜ್ಞ ಡಾ.ನೇಹಿಗನ ಉಪದೇಶಗಳು ನಿಷ್ಪ್ರಯೋಜಕವಾಗಿ ತನ್ನ ನಲುವತ್ತಾರನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾನೆ.
ಸ್ವಚ್ಛಂದ ಬದುಕಿಗೆ ತನ್ನನ್ನು ಒಡ್ಡಿಕೊಂಡು ಬೆಳೆದ ಸಹನಾ ಅಭಿಜ್ಞನ ಬಾಳಿನಲ್ಲಿ ಬರುವ ಇನ್ನೊಬ್ಬ ಹೆಣ್ಣು. ಬದುಕಿನಲ್ಲಿ ಸುಖ ಪಡಬೇಕಾದ ಕಾಲದಲ್ಲಿ ಅದಕ್ಕೆ ಹಿಂಜರಿಯುವುದು ಯಾಕೆಂದು ಕೇಳುವ ಅವಳ Epicurean ಫಿಲಾಸಫಿ ಸೂಕ್ಷ್ಮಜ್ಞ ಮನಸ್ಸಿನ ಅಭಿಗೆ ಇಷ್ಟವಾಗುವುದಿಲ್ಲ ಹೇಳಿ ಅವರಿಬ್ಬರೂ ಬೇರೆಯಾಗುತ್ತಾರೆ. ಡೈರಿ ತಂತ್ರದ ಮೂಲಕ ಈ ಕಥೆಯನ್ನು ನಿರೂಪಿಸುವವಳು ಅಭಿಜ್ಞನ ಅಕ್ಕ ಅನುಪ್ರಭಾ. ಅವಳ ವೈಯಕ್ತಿಕ ಬದುಕು ಅಭಿಜ್ಞನಿಗಿಂತ ಭಿನ್ನವಲ್ಲ. ಅವಳು ಪ್ರೀತಿಸಿದ ಸಂತೋಷ್ ಅವಳಿಂದ ದೂರವಾಗಿದ್ದರಿಂದ ಅವಳೂ ದುಃಖದಲ್ಲೇ ಇದ್ದಾಳೆ. ಹೀಗೆ ಕಥೆಯುದ್ದಕ್ಕೂ ಅಂತರ್ಧಾರೆಯಾಗಿ ವಿಷಾದದ ಛಾಯೆ ಹರಿಯುತ್ತದೆ. ಪ್ರೇಮ ವೈರಾಶ್ಯದ ಕಥೆಯನ್ನು ಯಾವುದೋ ಒಂದು ಅನೂಹ್ಯ ಲೋಕದ ಒಳಗಿಟ್ಟು ಹೇಳುವ ರೊಮ್ಯಾಂಟಿಕ್ ಶೈಲಿ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಅಭಿಜ್ಞನ ಪ್ರೇಮ ನೈರಾಶ್ಯದ ತೊಳಲಾಟಗಳು ರೊಮ್ಯಾಂಟಿಕ್ ಕವಿ ಪಿ.ಬಿ.ಶೆಲ್ಲಿಯ ‘Ode to the West Wind’ ಕವಿತೆಯ ‘Save me oh West Wind’ I fall upon the thorn ! I bleed ! ಎಂಬ ಸಾಲುಗಳನ್ನು ನೆನಪಿಸುತ್ತವೆ.
ಗಂಡು-ಹೆಣ್ಣಿನ ನಡುವಣ ಪ್ರೀತಿಯು ಬದುಕಿನ ಕೇವಲ ಒಂದು ಭಾಗ ಮಾತ್ರ. ಈ ಸತ್ಯವನ್ನು ತಿಳಿಯದ ಮುಗ್ಧ ಯುವಜನತೆಯು ಹಳ್ಳಕ್ಕೆ ಬಿದ್ದು ಅಲ್ಲಿಂದ ಏಳಲಾರದೆ ಖಿನ್ನತೆ-ಆತ್ಮಹತ್ಯೆಗಳಂಥ ದುರಂತಗಳನ್ನು ತಮ್ಮ ಬದುಕಿನಲ್ಲಿ ತಂದುಕೊಳ್ಳುತ್ತದೆ. ಇಂಥ ಸಂಬಂಧಗಳ ಆಚೆಯೂ ಕಟ್ಟಿಕೊಳ್ಳಬಹುದಾದ ಒಂದು ಸುಂದರ ಲೋಕವಿದೆ ಎಂಬ ಸಂದೇಶವನ್ನು ಈ ಕೃತಿ ಪರೋಕ್ಷವಾಗಿ ಸಾರುತ್ತದೆ. ಕೆಲವು ಉಪಕಥೆಗಳನ್ನು ಇನ್ನಷ್ಟು ವಿಸ್ತರಿಸಿ ಬರೆದಿದ್ದರೆ ಕಾದಂಬರಿ ಪೂರ್ಣ ಪ್ರಮಾಣದ್ದಾಗುತ್ತಿತ್ತು. ಅಲ್ಲೊಂದು ಇಲ್ಲೊಂದು ಕಾಣುವ ಸಣ್ಣ ಪುಟ್ಟ ಭಾಷಾ ದೋಷಗಳಿಂದ ಲೇಖಕರು ಮುಕ್ತರಾಗಬೇಕಾಗಿದೆ ಎಂಬುದನ್ನು ಬಿಟ್ಟರೆ, ಒಂದು ಭಿನ್ನ ಶೈಲಿಯ ಕೃತಿಯನ್ನು ಓದುಗರಿಗೆ ನೀಡಿದ ಹೆಗ್ಗಳಿಕೆ ಕೃತಿಕಾರರದ್ದು.
ಡಾ. ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
ಲೇಖಕ ಶ್ರೀರಾಜ್ ವಕ್ವಾಡಿ ಕುಂದಾಪುರ ತಾಲೂಕಿನ ವಕ್ವಾಡಿಯವರು. ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ಕಾವ್ಯ ಬೈರಾಗಿ ಎಂಬ ಕಾವ್ಯ ನಾಮದಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ. ಕವನ ಸಂಕಲನಗಳಾದ ‘ರಿಕ್ತ ನಕ್ಷತ್ರ’, ‘ಚಲಿಸುವ ಮೋಡಗಳ ಮಧ್ಯದಿ’, ಕೆಂಪು ಕೊರಳ ಹಕ್ಕಿ, ಕಥಾ ಸಂಕಲನವಾದ ‘ಕತ್ತಲೆಯ ಬೆತ್ತಲು’ ಮತ್ತು ಕಿರು ಕಾದಂಬರಿ ‘ಅತ್ತ ನಕ್ಷತ್ರ’ ಇವರ ಪ್ರಕಟಿತ ಕೃತಿಗಳು.
ಪ್ರತಿಷ್ಠಿತ ದೃಶ್ಯ ಮಾಧ್ಯಮ ಪ್ರೈಮ್ ಟಿವಿಯಲ್ಲಿ ಮೂರು ವರ್ಷಗಳ ಕಾಲ ಸುದ್ದಿ ವಾಚಕರಾಗಿ, ಸುದ್ದಿ ವಿಶ್ಲೇಷಕರಾಗಿ, ಸಂದರ್ಶಕರಾಗಿ ದುಡಿದ ಇವರು ‘ಮುಕ್ತ’ ವಾಹಿನಿಯ ಪ್ರಚಲಿತ ವಿದ್ಯಾಮಾನಗಳು ಮತ್ತು ಸುದ್ದಿ ವಿಭಾಗದ ಮುಖ್ಯಸ್ಥನಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಜನಪ್ರತಿನಿಧಿ ಪತ್ರಿಕೆಯಲ್ಲಿ ಸುದ್ದಿ ವಿಭಾಗದಲ್ಲಿ ಸಹ ಸಂಪಾದಕರಾಗಿ ಮತ್ತು ಸುದ್ದಿ ವಿಶ್ಲೇಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ