ಡಾ. ಗಜಾನನ ಶರ್ಮ 2019ರಲ್ಲಿ ಬರೆದ ‘ಪುನರ್ವಸು’ 544ಪುಟಗಳ ಬೃಹತ್ ಕಾದಂಬರಿ. ಜೋಗದ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ವಿಷಯವೇ ಕಥಾವಸ್ತು. ಮೈಸೂರಿನ ಕೃಷ್ಣರಾಜ ಒಡೆಯರ್, ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯರವರ ಕಾಲಘಟ್ಟದ ಬಹುದೊಡ್ಡ ಯೋಜನೆಯನ್ನು ಅನುಷ್ಠಾನಕ್ಕೆ ತಂದ ಭಗೀರಥ ಯತ್ನದ ಬಗೆಗೆ ಅತಿಸೂಕ್ಷ್ಮ ಆಗುಹೋಗುಗಳನ್ನು ಅವಲೋಕಿಸಿ ಅದ್ಭುತವಾಗಿ ಹೆಣೆದ ಲೇಖನ. ಶರಾವತಿ ಡ್ಯಾಮಿನೊಂದಿಗೆ ಕಟ್ಟಿದ ಅತ್ಯುತ್ತಮ ಕೊಡುಗೆಯನ್ನು ಕನ್ನಡ ಸಾಹಿತ್ಯಕ್ಕೆ ಕಟ್ಟಿಕೊಟ್ಟಿದ್ದಾರೆ ಲೇಖಕರು.
ಇಂದು ನಾವು ಕಾಣುವ ಜೋಗ ಫಾಲ್, ಶರಾವತಿ ನದಿಯ ಸುತ್ತಮುತ್ತಲಿನ ಪರಿಸರ ಹಿಂದೊಮ್ಮೆ ಹೇಗೆ ಭಿನ್ನವಾಗಿತ್ತು ಅನ್ನುವುದನ್ನು ತೋರಿಸಿದ್ದಾರೆ. ಪ್ರಕೃತಿಯ ರಮ್ಯ ರಮಣೀಯ ಪರಿಸರ, ಆಧುನಿಕತೆ ಅವಶ್ಯಕತೆಗಳಿಗೆ ಒಳಪಟ್ಟು ಹೇಗೆ ಬದಲಾಗಿದೆ ಅನ್ನುವುದನ್ನು ಅಲ್ಲಿಯ ಸುತ್ತುಮುತ್ತಲಿನ ಹಳ್ಳಿಗಳಲ್ಲಿ ಆದ ಅನಿವಾರ್ಯ ಬದಲಾವಣೆ, ಜನರ ಬದುಕು ಅದಕ್ಕೆ ಹೊಂದಿಕೊಳ್ಳಲು ಮಾಡಿದ ಪ್ರಯತ್ನ ಓದಿದಾಗ ಸಂಕಟವಾಗುತ್ತದೆ.
ಭೋರ್ಗರೆಯುವ ನದಿಗಳಿಗೆ ತಡೆ ನಿರ್ಮಸಿ, ನೀರು ಸಂಗ್ರಹಿಸಿ ವಿದ್ಯುತ್ ಶಕ್ತಿ ಉತ್ಪಾದಿಸುವ ಬ್ರಹತ್ ಕಾರ್ಯಕ್ಕೆ ಬೇಕಾದ ಯೋಜನೆ, ಯಂತ್ರ, ಜನ, ಸಾಮಗ್ರಿ, ಹಣ ಇತರ ಎಲ್ಲ ಅವಶ್ಯಕತೆಗಳನ್ನು ಅಂದಿನ ದಿನಮಾನದಲ್ಲಿ ಅಂದರೆ 1918ರಿಂದ ಮೂರು ಹಂತಗಳಲ್ಲಿ ಕಾರ್ಯ ನಿರ್ವಹಿಸಿದ್ದು ಸುಲಭದ ಮಾತಲ್ಲ. ಈಗಿರುವಷ್ಟು ಮುಂದುವರೆದ ತಂತ್ರಜ್ಞಾನ ಇಲ್ಲದಾಗ, ರಾಜ್ಯಕ್ಕೆ ಬೆಳಕು ಮತ್ತಿತರ ಆಧುನಿಕ ಸುವಿಧಾ ಒದಗಿಸಲು ಹೋರಾಟವೇ ನಡೆದಿದೆ. ಲೇಖಕರು ಅದೆಷ್ಟು ಕಟ್ಟುನಿಟ್ಟಾಗಿ ನಡೆದ ವಿದ್ಯಮಾನಗಳನ್ನು ವಿವರವಾಗಿ ತಿಳಿಸಿರುವುದನ್ನು ನೋಡಿದರೆ ಅವರು ಸ್ಥಳೀಯರು ಎನ್ನುವುದು ಗೊತ್ತಾಗುತ್ತದೆ. ಸುತ್ತಮುತ್ತಲಿನ ಹಳ್ಳಿ, ಕಾಡು, ಕಾಡಸಂಪತ್ತು, ಆಣೆಕಟ್ಟು ಕಟ್ಟುವ ಕೆಲಸಕ್ಕೆ ಬೇಕಾಗುವ ಜನ, ಧನ, ಸಾಮಗ್ರಿಗಳ ಬಗೆಗೆ ಅಂಕಿಸಂಖ್ಯೆಗಳೊಂದಿಗೆ ನಿಖರವಾಗಿ ಬರೆದದ್ದು ಅವರ ಜ್ಞಾನ ಮತ್ತು ಆಸಕ್ತಿಯನ್ನು ತೋರಿಸುತ್ತದೆ.
ಈ ಯೋಜನೆಯಡಿಯಲ್ಲಿ ಮುಳುಗಡೆಯಾದ ಹತ್ತು ಹಲವಾರು ಹಳ್ಳಿಗಳಲ್ಲಿ ಭಾರಂಗಿಯೂ ಒಂದು. ಅಲ್ಲಿ ಅನಾದಿ ಕಾಲದಿಂದಲೂ ತಮ್ಮ ಬದುಕನ್ನು ಕಟ್ಟಿಕೊಂಡು ಪ್ರಕೃತಿಯೊಂದಿಗೆ ಒಂದಾಗಿ ಬಾಳಿದ ಹೆಗಡೆ, ಶಾನುಭೋಗ, ಪಾಟೀಲ, ನಾಯಕ, ಭಟ್ಟ ಕುಟುಂಬಗಳು ತಲತಲಾಂತರದಿಂದ ಬೇರುಬಿಟ್ಟಿರುವ ತಮ್ಮ ಬದುಕನ್ನು ಬೇರುಸಹಿತ ಕಿತ್ತುಕೊಂಡು ಹೋಗಲು ಪರದಾಡಿದ ಕರುಣಾಜನಕ ಕಥೆ ಪುನರ್ವಸು.
ಭಾರಂಗಿಯ ಪ್ರತಿಷ್ಠಿತ ಮನೆತನದ ಯಜಮಾನ ದತ್ತಪ್ಪ ಹೆಗಡೆ ದೇಶದ ಸ್ವಾತಂತ್ರ‍್ಯ ಸಂಗ್ರಾಮದ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಕಟ್ಟಾ ದೇಶಾಭಿಮಾನಿ. ಆ ಪ್ರದೇಶಕ್ಕೇ ದೊಡ್ಡ ಮನಸ್ಸಿನ ಹಿರಿಯ ಸಜ್ಜನ ಮತ್ತು ವಿಧುರ. ಅವನಕ್ಕ, ವಿಧವೆ ತುಂಗಕ್ಕ ಮನೆಯ ಆಧಾರಸ್ತಂಭ. ಅವಳ ಮಗಳು ಮೂಕಿ-ಕಿವುಡಿ ಶರಾವತಿ ಬದಲಾಗುತ್ತಿರುವ ಹೊಸ ಬದುಕಿಗೆ ಬಲಿಯಾದ ಯುವತಿ. ಆಳು-ಕಾಳು, ದನಕರು, ಬಂಧುಗಳಿಂದ ತುಂಬಿದ ರೈತ ಮನೆತನ.
ಡ್ಯಾಮ್ ಕಟ್ಟುವ ಪ್ರೊಜೆಕ್ಟ್ ಗೆ ಕಾರ್ಯನಿರ್ವಹಿಸಲು ಸರಕಾರ ನಿಯುಕ್ತಿ ಪಡೆಸಿದ ಎಂಜನೀಯರ್ ಕೃಷ್ಣರಾವ್ ಮತ್ತವನ ಹೆಂಡತಿ ವಸುಧಾ ಇನ್ನೊಂದು ತುದಿಯ ಜೀವಗಳು. ಯಾರಿಗೆ ಯಾವುದು ಮಹತ್ವದ್ದು ಅನ್ನುವುದನ್ನು ಬಿಡಿಸುತ್ತ ಎಲ್ಲರ ಜೀವನದ ಆದರ್ಶ ಮತ್ತು ಅವಶ್ಯಕತೆಗಳ ಮಧ್ಯದ ಸೆಣಸಾಟ ಬಿಚ್ಚಿಡುವುದರ ಜೊತೆಗೆ ಪ್ರೊಜೆಕ್ಟ್ ಬೆಳವಣಿಗೆ ಮತ್ತದಕ್ಕೆ ವಿರೋಧಿಸುವ ಹಳ್ಳಿಗರ ಬದುಕು ಬಯಲಾಗುವದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಮಕ್ಕಳಿಲ್ಲದ ವಸುಧಾಳ ಕೊರಗಿಗೆ ಮದ್ದಾದ ಭಾರಂಗಿ ಮನೆ ಪುನರ್ವಸುಳ ಹುಟ್ಟಿಗೆ ಕಾರಣವಾಯಿತು, ಎರಡು ಪರಿವಾರಗಳ ಬಂಧನ ಬಿಗಿಯಾಯಿತು. ವಸುಧಾಳನ್ನು ಭೂಮಿತಾಯಿಗೆ ಮತ್ತು ಅವಳ ಮಗಳು ಪುನರ್ವಸುಳನ್ನು ಭೂದೇವಿಯ ಮಕ್ಕಳಿಗೆ ಹೋಲಿಸಿದ್ದು ಆಗಿನ ಪರಿಸ್ಥಿತಿಯ ಸುಂದರ ಹೋಲಿಕೆ. ಈ ಪ್ರೊಜೆಕ್ಟ್ ಮುಂದುವರೆದು ಸುತ್ತಲಿನ ಎಲ್ಲ ಪ್ರದೇಶಗಳು ಮುಳುಗುವ ಭೀತಿಯಲ್ಲಿ ದತ್ತಪ್ಪ ಹೆಗಡೆ ಕಾಯುವ ದೇವರಂತೆ ಅದನ್ನು ತಡೆಯಲು ಪ್ರಯತ್ನಿಸಿ ವಿಫಲನಾಗುತ್ತಾನೆ. ಅವರಿಗೆ ಬೆಳಕು ಕೊಡಲು ಬಂದ ಕೃಷ್ಣರಾವ್ ನನ್ನು ಲಯಕರ್ತನಂತೆ ಕಾಣುತ್ತಾನೆ. ಹತಾಶೆಯ ಮನೋಭಾವದಿಂದ ನೀನು ವಾಮನನಾಗಿ ಭೂಮಿ ಅಳೆಯಲು ಬಂದೆ. ನಿಮ್ಮ ಕೈಯಲ್ಲೀಗ ನಮ್ಮ ಮುಡಿ. ನಿಮ್ಮ ಯೋಜನೆ ವಾಮನನ ಪಾದವಾಗಿ ಎಲ್ಲವನ್ನೂ ಆಕ್ರಮಿಸಿ ನಮ್ಮನ್ನು ಪ್ರಪಾತಕ್ಕೆ ತಳ್ಳುತ್ತಿದೆ ಎನ್ನುವ ದತ್ತಪ್ಪನ ಮಾತು ಎಷ್ಟೊಂದು ಅರ್ಥಪೂರ್ಣ! ನಿಮ್ಮ ಪರಾಶರ ಸ್ಪರ್ಷ ನಮಗೆ ಬೇಕಾಗಿತ್ತು. ನಮ್ಮ ಮತ್ಸ್ಯಗಂಧಿಯನ್ನು ಯೋಜನಗಂಧಿಯನ್ನಾಗಿ ಪರಿವರ್ತಿಸುತ್ತೀರಿ ಎಂದು ನಂಬಿದ್ದೆವು. ಆದರೆ ನೀವೀಗ ಕುರುಸಂತತಿಯನ್ನು ಹುಟ್ಟಿಸುತ್ತಿದ್ದೀರಿ ಎಂದು ಹೇಳುವುದು ದತ್ತಪ್ಪನ ಮನದ ಕುದಿತ.
ಆಧುನಿಕತೆ, ಬೆಳವಣಿಗೆ, ಸುಧಾರಣೆ ಅಂತ ಕಾರ್ಯ ನಡೆಸಿ, ಸ್ವರ್ಗದಂತಿದ್ದ ನಿಸರ್ಗದ ಮೇಲೆ ಅತ್ಯಾಚಾರ ನಡೆಯುತ್ತದೆ. ಕಾಡನ್ನು ಸವರಿ, ಗುಡ್ಡದ ನೆತ್ತಿಯನ್ನು ಕೆತ್ತಿ, ನೀರು ಮಲಿನಗೊಂಡು, ಅಮಾಯಕ ನಿರುಪದ್ರವಿ ಜನರ ಬುದ್ಧಿಕೂಡ ಪ್ರಭಾವಕ್ಕೆ ಒಳಗಾಗಿ ಅನ್ಯಾಯ, ಕೊಲೆ, ಸುಲಿಗೆ, ಭ್ರಷ್ಟಾಚಾರ, ಅನಾಚಾರ, ಅತ್ಯಾಚಾರಗಳು ಸಾಮಾನ್ಯವಾಗುತ್ತವೆ. ಶರಾವತಿಯ ಮೇಲೆ ನಡೆದ ಅತ್ಯಾಚಾರ, ಮಗ ಗಣೇಶನ ಮನಸ್ಸು ಲಾಭದ ಸಲುವಾಗು ಪೇಟೆಯ ಕಡೆಗೆ ಹೊರಳುವುದನ್ನು ಸುಧಾರಣೆ ಅನ್ನಬೇಕೇ? ಇದು ಅರೆಬರೆ ಹುಚ್ಚ ಮುರಾರಿ ಭಟ್ಟನ ಸಂಕಟ, ಹೊಳೆ ದಾಟಿಸುವ ಅಂಬಿಗ ಗಣಪನ ಆತ್ಮಹತ್ಯೆಗಳು ಹೊಸತನಕ್ಕೆ ಬದಲಾವಣೆಗೆ ಹೊಂದಲಾರದ ಜೀವಗಳು ಕೇಳುವ ಪ್ರಶ್ನೆಗಳು!!!
ಬೇರೆ ರಾಜ್ಯಗಳಿಂದ ಬಂದ ಕೆಲಸಗಾರರಿಂದ ಆ ಪ್ರದೇಶ ತುಂಬಿಹೊಗುತ್ತದೆ. ಅವರಿಗಾಗಿ ವಸತಿ, ಶಾಲೆ, ಆಸ್ಪತ್ರೆ, ಪೇಟೆ, ವಾಹನಗಳು ದಾಂಗುಡಿಯಿಟ್ಟು ಮೊದಲಿನ ಸ್ವರೂಪ, ಶಾಂತತೆ ಇಲ್ಲವಾದಾಗ ಕೆಲವನ್ನು ಪಡೆಯಲು ಕೆಲವನ್ನು ತ್ಯಾಗ ಮಾಡಬೇಕಾಗುತ್ತದೆ ಅನ್ನುವ ಮಾತಿಗೆ ದತ್ತಪ್ಪ ಹೆಗಡೆ ಒಪ್ಪುವುದಿಲ್ಲ. ಇದು ತ್ಯಾಗವಲ್ಲ, ಬಲಿ. ಹೃತ್ಪೂರ್ವಕವಾಗಿ ಇಚ್ಛೆಯಿಂದ ಬಿಟ್ಟು ಕೊಟ್ಟಿದ್ದಲ್ಲ, ಬಲವಂತವಾಗಿ, ಅಧಿಕಾರ ಹೇರಿ ಕಿತ್ತು ಕೊಂಡದ್ದು, ಅಕ್ಷರಶಃ ಶೋಷಣೆ ಅನ್ನುವುದು ಅವರ ವಾದ. ಶರಾವತಿ ಹುಡುಗಿಯ ಮೇಲೆ ಆದ ಬಲಾತ್ಕಾರ ನದಿ ಶರಾವತಿಯ ಮೇಲಾದ ಅನ್ಯಾಯದ ಹೋಲಿಕೆ. ಮನೆಯ ಮಗ ಗಣೇಶ ಮುಳುಗಡೆಯಾಗಲಿರುವ ಭಾರಂಗಿಯ ಮನೆ ಬಿಟ್ಟು ಭದ್ರಾವತಿಯಲ್ಲಿ ತನ್ನ ನೆಲೆ ಕಂಡುಕೊಳ್ಳುತ್ತಾನೆ. ತಂದೆ ಅವನೊಟ್ಗೆ ಹೋಗಲು ಒಪ್ಪದಿದ್ದಾಗ, ಮುದಿ ಮರಕ್ಕೆ ಬೆಳ್ಳಿಯ ತಗಡು ಹೊದಿಸುವ ಬದಲು ಮಲ್ಲಿಗೆಯ ಬಳ್ಳಿಗೆ ಹೊಸ ಚಪ್ಪರು ಹಾಕಿಕೊಳ್ಳೋಣ, ಬೀಳುವ ಗಿಡಕ್ಕೆ ಆಸರೆ ಒದಗಿಸುವದಕ್ಕಿಂತ ಮತ್ತೊಂದು ಗಿಡ ನೆಡೋಣ ಅನ್ನುವ ಅವನ ಮಾತಿಗೆ ತಂದೆ,
*ಒಡಹುಟ್ಟಿದವರು ತೊಟ್ಟು ಕಳಚಿ ಬಿಟ್ಟು ಹೊರಟು
ಮಣ್ಣಿಗಂಟಿದ ಬೇರುಗಳ ಮುರಿದು ಬೀಳಲಿರುವ ಮರದಿಂದ ಇನ್ನೊಂದು ಜೋಡು ಹಕ್ಕಿ ಗೂಡು ತೊರೆಯುತ್ತಿದೆ. ಒಳ್ಳೆಯದಾಗಲೆಂದು ಹಾರೈಸುವದನ್ನು ಬಿಟ್ಟು ಮಾಡಲೇನಿದೇ?*
ಗಣೇಶ ಮನೆ ತೊರೆದು ಹೋದ ಮೇಲೆ, ಮನೆಯ ಯಜಮಾನ ವೇಶ ಕಳಿಚಿದ ಮೇಲೆ ಇನ್ನೆಂತಹ ಆಟ ಎನಿಸಿ ಆಸ್ತಿ, ದನಕರುಗಳ ಪಾಲು ಮಾಡಿ ಹಂಚುತ್ತಾನೆ. ಇದೆಲ್ಲ ಆಘಾತ ತಡೆಯಲಾರದೆ ತುಂಗಕ್ಕ ಮಲಗಿದಲ್ಲಿಯೇ ಕೊನೆಯುಸಿರು ಎಳೆಯುತ್ತಾಳೆ. ದತ್ತಪ್ಪ ಯಾರಿಗೂ ಹೇಳದೆ ಮನೆ ಬಿಟ್ಟು ಹೋಗುತ್ತಾನೆ. ಗಣೇಶನಿಗೆ ಪಶ್ಚಾತ್ತಾಪವಾಗುತ್ತದೆ, ಆದರೆ ಎಲ್ಲ ಮುಗಿದ ಮೇಲೆ. ಆ ಮನೆಗೆ, ಪರಿಸರಕ್ಕೆ ಸಂಬಂಧಪಟ್ಟಂತ ಭವಾನಿ, ಚೆನ್ನವ್ವ, ಐ. ಬಿ. ಯ ಮೇಟಿಗಳಾದ ವೃಷಭಯ್ಯ, ಪದ್ಮರಾಜ, ಕೊತವಾಲ ನ್ಯಾಮಯ್ಯ, ಎಂಜನಿಯರಾದ ಫೋರ್ಬ್ಸ್, ಕಡಾಂಬಿ, ಕೃಷ್ಣರಾವ್ ಕುಟುಂಬದವರು ನೆನಪಿನಲ್ಲಿ ಉಳಿಯುತ್ತಾರೆ. ವಸುಧಾ ಮತ್ತವಳ ಗಂಡ ಅಮೇರಿಕಾಕ್ಕೆ ಹೋಗುವ ವಿಚಾರ ಬಿಟ್ಟು ತನ್ನ ನೆಲದಲ್ಲಿ ಉಳಿಯುವುದು ಕೂಡ ಮಣ್ಣಗೆ ಮರಳಿದ ಅಭಿಮಾನದ ಹೊಲಿಕೆ. ಕೊನೆಗೆ ವೀರೇಶ್ವರ ಮಠದ ಸ್ವಾಮೀಜಿ ಹೇಳಿದಂತೆ ಸ್ಥಾವರಕ್ಕೆ ಅಳಿವಿಲ್ಲ, ಮುಂದೊಂದು ದಿನ ಮುಳುಗಿದ ಊರು, ಸಂಸ್ಕೃತಿ ಮರಳಿ ಸಿಗಬಹುದು ಅನ್ನುವುದು ಆಶಾದಾಯಕ ಸಾಂತ್ವನದ ಮಾತು. ಎಲ್ಲರ ಮನದ ಪ್ರಶ್ನೆ ಒಂದೇ – ಮುಳುಗಿದ್ದು ಭಾರಂಗಿಯೇ… ಭರವಸೆಯೇ… ಬದುಕೇ?
ವಿಮರ್ಶಕಿ : ವಿನುತಾ ಸುಧೀಂದ್ರ ಹಂಚಿನಮನಿ
ಜೀವ ವಿಮಾ ನಿಗಮದ ನಿವೃತ್ತ ವಿಭಾಗೀಯ ಅಧಿಕಾರಿಯಾಗಿರುವ ವಿನುತಾ ಸುಧೀಂದ್ರ ಹಂಚಿನಮನಿಯವರು ಬಿ. ಎಸ್ಸಿ, ಎಮ್. ಎ, ಎಲ್. ಎಲ್. ಬಿ, ಫೆಲೋ ಆಫ್ ಇನ್ಸೂರೆನ್ಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಪದವೀಧರೆ. ಶ್ರೀ ಎಸ್. ಎಲ್. ಭೈರಪ್ಪ ಮತ್ತು ಶ್ರೀಮತಿ ನೇಮಿಚಂದ್ರ ಇವರ ಮೆಚ್ಚಿನ ಲೇಖಕರು. ಉತ್ತರ ಕನ್ನಡ ಲೇಖಕಿಯರ ಸಂಘದ ಸದಸ್ಯೆಯಾಗಿರುವ ಇವರು ಆಕಾಶವಾಣಿ ಕೇಂದ್ರ ಧಾರವಾಡದಿಂದ ಹಲವಾರು ಭಾಷಣ ಮತ್ತು ಚರ್ಚೆಯ ಕಾರ್ಯಕ್ರಮ ನೀಡಿದ್ದಾರೆ. ಏಳು ಕವನ ಸಂಕಲನ, ಮೂರು ಪ್ರಬಂಧಗಳು, ನಾಲ್ಕು ಕಥಾಸಂಕಲನ, ಎರಡು ಕಾದಂಬರಿ, ನಾಟಕ ಮತ್ತು ಆತ್ಮಚರಿತ್ರೆ ಒಟ್ಟು ಹದಿನೆಂಟು ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಇವರ ರಚನೆಯ ನಾಟಕಗಳು ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶನ ಕಂಡಿವೆ.
ಚೇತನ ಪ್ರಕಾಶನದ ಸಾಹಿತ್ಯ ಪುರಸ್ಕಾರ, ‘ಕರುನಾಡ ಚೇತನ ಸಾಹಿತ್ಯ ಪ್ರಶಸ್ತಿ’, ಕನ್ನಡ ಸಾಹಿತ್ಯ ಪರಿಷತ್ತಿನ ‘ಶ್ರೀಮತಿ ಗೌರಭಟ್ ದತ್ತಿನಿಧಿ’ ಪ್ರಶಸ್ತಿ, ರಾಜ್ಯಮಟ್ಟದ ‘ರಾಷ್ಟ್ರಕೂಟ ಸಾಹಿತ್ಯ ಶ್ರೀ’ ಪ್ರಶಸ್ತಿ ಹಾಗೂ ಉತ್ತರ ಕರ್ನಾಟಕ ಲೇಖಕಿಯರ ಸಂಘದಿಂದ ಕೊಡಮಾಡುವ “ಯಶೋಧಾ ಭಟ್ಟ ಮತ್ತು ಲಲಿತಾಂಬಾ ವೃಷಭೇಂದ್ರಸ್ವಾಮಿ ದತ್ತಿನಿಧಿ” ಪುರಸ್ಕಾರ, ಇತ್ಯಾದಿಗಳು ಇವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಸಂದ ಗೌರವ.
ವಿಳಾಸ :
ವಿನುತಾ ಹಂಚಿನಮನಿ
#125, ಸನ್ಮತಿನಗರ,
ಕೆಲಗೇರಿ ರಸ್ತೆ,
ಧಾರವಾಡ 580008
ಸಂಪಾರ್ಕ ಸಂಖ್ಯೆ : 9448130417
[email protected]
1 Comment
ಸುಂದರ ವಿಮರ್ಶೆ. ಅಭಿನಂದನೆಗಳು ವಿನುತಾರವರಿಗೆ.